ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಸೋತು ನಿರ್ಗಮಿಸಿದ ಬೆನ್ನಲ್ಲೇ ಅವರ ಕೋಚ್ ಮಥಾಯಸ್ ಬೋಯ್ ಅವರು ಶನಿವಾರ ನಿವೃತ್ತಿ ಘೋಷಿಸಿದ್ದಾರೆ.
ಸಾತ್ವಿಕ್ ಮತ್ತು ಚಿರಾಗ್ ಅವರನ್ನು ಒಲಿಂಪಿಕ್ಸ್‌ನಲ್ಲಿ ಭಾರತದ ಅತಿದೊಡ್ಡ ಪದಕದ ಭರವಸೆ ಎಂದು ಪರಿಗಣಿಸಲಾಗಿತ್ತು ಆದರೆ ಗುರುವಾರ ನಡೆದ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಜೋಡಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಟೋಕಿಯೊ ಕಂಚಿನ ಪದಕ ವಿಜೇತ ಸೋಹ್ ವೂಯಿ ಯಿಕ್ ವಿರುದ್ಧ 21-13, 14-21, 16-21 ಸೆಟ್‌ಗಳಿಂದ ಸೋತು ಹೊರ ಬಿದ್ದಿದ್ದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಡೆನ್ಮಾರ್ಕ್‌ನ ಬೋಯ್, ಟೋಕಿಯೊ ಒಲಿಂಪಿಕ್ಸ್‌ಗೆ ಮುನ್ನ ಚಿರಾಗ್ ಮತ್ತು ಸಾತ್ವಿಕ್ ಅವರ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದರು.
ನಿವೃತ್ತಿ ಘೋಷಿಸಿದ 44 ವರ್ಷದ ಬೋಯ್ “ ನನ್ನ ಕೋಚಿಂಗ್ ದಿನಗಳು ಇಲ್ಲಿಗೆ ಕೊನೆಗೊಳ್ಳುತ್ತವೆ, ಸದ್ಯಕ್ಕೆ ನಾನು ಭಾರತದಲ್ಲಿ ಅಥವಾ ಬೇರೆಲ್ಲಿಯೂ ಕೋಚಿಂಗ್ ಮುಂದುವರಿಸುವುದಿಲ್ಲ, ನಾನು ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಹೆಚ್ಚು ಸಮಯ ಕಳೆದಿದ್ದೇನೆ ಮತ್ತು ತರಬೇತುದಾರನಾಗಿರಲು ತುಂಬಾ ಒತ್ತಡವಾಗಿದೆ, ನಾನು ದಣಿದ ಮುದುಕನಾಗಿದ್ದೇನೆ ”ಎಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.
ಬೋ ಅವರ ಮಾರ್ಗದರ್ಶನದಲ್ಲಿ, ಸಾತ್ವಿಕ್ ಮತ್ತು ಚಿರಾಗ್ ಅವರು 2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಮತ್ತು 2022 ರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು.ಜೋಡಿ ಏಷ್ಯನ್ ಗೇಮ್ಸ್ ಚಿನ್ನ, ಏಷ್ಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನೂ ಗೆದ್ದರು. ವಿಶ್ವದ ನಂಬರ್ 1 ಸ್ಥಾನಕ್ಕೇರಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಡಬಲ್ಸ್ ತಂಡ ಎಂಬ ಸಾಧನೆಯನ್ನೂ ಮಾಡಿದ್ದರು.