ಕುಷ್ಟಗಿ: ನಾಡಿನ ಆರೂವರೆ ಕೋಟಿ ಜನತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿ ದಿನ ತೆರಿಗೆ ರೂಪದಲ್ಲಿ ಪಾವತಿಸುವ ಹಣವನ್ನು ವಿವಿಧ ಯೋಜನೆಗಳ ಮೂಲಕ ನಿಮ್ಮ ಮನೆಬಾಗಿಲಿಗೆ ತಲುಪಿಸುವುದೇ ನನ್ನ ಜೀವನದ ಸವಾಲು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಹಸನಸಾಬ್ ದೋಟಿಹಾಳ ಜಾಗೆಯಲ್ಲಿ ಪಂಚರತ್ನ ಯೋಜನೆಗಳ ರಥ ಯಾತ್ರೆ ಹಾಗೂ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಯೋಜನೆಗಳಿಗೆ ಸಾಲ ಮಾಡುವುದಿಲ್ಲ, ಹೊರಗಿನಿಂದಲೂ ಸಾಲ ತರುವುದಿಲ್ಲ. ನಿಮ್ಮ ತೆರಿಗೆಯ ಹಣದಲ್ಲಿಯೇ ಖಜಾನೆ ತುಂಬಿಸುವೆ. ಖಜಾನೆಗೆ ತುಂಬಿಸಿದ ಹಣದಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ ಕೆಲವೇ ಕೆಲವು ಜನ ದೋಚುತ್ತಿದ್ದು ಇದಕ್ಕೆ ಕಡಿವಾಣ ಹಾಕುವೆ ಎಂದರು.
ಇದಕ್ಕಾಗಿ 22 ಜಿಲ್ಲೆಗಳ ಪಂಚರತ್ನ ಯಾತ್ರೆ ಹಮ್ಮಿಕೊಂಡಿರುವುದಾಗಿ ವಿವರಿಸಿದ ಅವರು ಒಂದು ಬಾರಿ ಪರೀಕ್ಷಿಸಿ ಐದು ವರ್ಷದ ಬಹುಮತದ ಸರ್ಕಾರ ನೀಡಬೇಕೆಂದು ಮನವಿ ಮಾಡಿದರು. ಈ ಐದು ವರ್ಷದ ಮೇಲೆ ಒಂದು ದಿನ ಹೆಚ್ಚಿಗೆ ಕೇಳುವುದಿಲ್ಲ. ರೈತರಿಗೆ ಭೂಮಿ ಇರಲಿ ಇಲ್ಲದೇ ಇರಲಿ ಪ್ರತಿ ಕುಟುಂಬದ ಮಾಸಿಕ ಕನಿಷ್ಠ ಆದಾಯ 15ಸಾವಿರ ರೂ. ಬಾರದೇ ಇದ್ದಲ್ಲಿ ಪಕ್ಷವನ್ನೇ ವಿಸರ್ಜಿಸುವುದಾಗಿ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದು, ಇನ್ನು ಮುಂದೆ ಮತ ಕೇಳಲು ಬರುವುದೇ ಇಲ್ಲ ಎಂದರು.
ನನ್ನ ಪಕ್ಷಕ್ಕೆ ಮತ ಯಾಕಿಲ್ಲ?
ಜಾತ್ಯತೀತ ಜನತಾದಳ ಹಾಗೂ ಕುಮಾರಸ್ವಾಮಿ ಅವರಿಗೆ ಶಕ್ತಿ ಇರುವುದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತ, ಉತ್ತರ ಕರ್ನಾಟಕದಲ್ಲಿ ಈ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ನನ್ನ ಈ ಪ್ರವಾಸದ ಸಂಧರ್ಭದಲ್ಲಿ ನನ್ನನ್ನು ಪ್ರೀತಿಸುತ್ತೀರಿ, ಹಾರೈಸುತ್ತೀರಿ, ಮುಂದಿನ ಸಿಎಂ ಎಂದು ಘೋಷಿಸುತ್ತೀರಿ. ಆದರೆ ಚುನಾವಣೆ ಸಂದರ್ಭದಲ್ಲಿ ಮತ ಯಾರಿಗೆ ಹಾಕುತ್ತೀರಿ? ಅದಕ್ಕೆ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದರಲ್ಲಿ ನಮ್ಮದೂ ತಪ್ಪಿದ್ದು, ಅಭ್ಯರ್ಥಿಗಳ ಕೊರತೆಯಿಂದ ನನಗೆ ಮತ ಕೊಡುವ ಆಶೆ ಇದ್ದರೂ ಮತ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಂಚರತ್ನ ಯಾತ್ರೆಯಿಂದ ಐದು ವರ್ಷ ಅಧಿಕಾರ ನಿರ್ವಹಿಸುವ ಸಂಕಲ್ಪಕ್ಕಾಗಿ ಈ ಯಾತ್ರೆ ಎಂದರು.
ಜೆಡಿಎಸ್ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ತುಕಾರಾಮ್ ಸೂರ್ವೆ ಮಾತನಾಡಿ, 2023ರಲ್ಲಿ ಎಚ್.ಡಿ. ಕುಮಾಸ್ವಾಮಿ ಸಿಎಂ ಆಗುವುದು ಈ ಕ್ಷೇತ್ರದಲ್ಲಿ ನಾನು ಶಾಸಕರಾಗುವುದು ಖಚಿತವಾಗಿದೆ ಎಂದರು. ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಅಶೋಕ ಉಮಲೂಟಿ, ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿ ಮಲ್ಲನಗೌಡ ಕೋನಗೌಡ್ರು , ಕೊಪ್ಪಳ ಕ್ಷೇತ್ರದ ವೀರೇಶ ಮಹಾಂತಯ್ಯನಮಠ, ಜೆಡಿಎಸ್ ಜಂಟಿ ಕಾರ್ಯದರ್ಶಿ ಸಿ.ಎಂ. ಹಿರೇಮಠ, ಜೆಡಿಎಸ್ ಮಾಜಿ ಅಧ್ಯಕ್ಷ ಅಮರೇಗೌಡ ಪಾಟೀಲ, ರಾಜ್ಯ ಸಮಿತಿ ಸದಸ್ಯ ಶರಣಪ್ಪ ಕುಂಬಾರ, ಸುವರ್ಣ ಕುಂಬಾರ ಮತ್ತಿತರರಿದ್ದರು.