Advertisement

ಮೈ ಕೊರೆಯುವ ಚಳಿ: ರೈತರಿಗೆ ಬೆಳೆ ಲೆಕ್ಕಾಚಾರ

12:50 AM Jan 18, 2019 | Harsha Rao |

ಕಾಪು : ಕರಾವಳಿಯಲ್ಲಿ  ಈ ಬಾರಿ ಚಳಿ ಜೋರಾಗಿದೆ. ಚಳಿ ಮನುಷ್ಯನನ್ನು ಬಹುವಾಗಿ ಕಾಡುತ್ತಿದ್ದರೆ, ಪ್ರಕೃತಿ ಮೈದುಂಬಲು ಸಿದ್ಧತೆ ನಡೆಸಿದೆ.  

Advertisement

ಚಳಿ ಹೆಚ್ಚಾದಷ್ಟು ಹಣ್ಣು ಹಂಪಲುಗಳ ಗಿಡಗಳಲ್ಲಿ ಹೂ ಬಿಟ್ಟು, ಇಳುವರಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಚಳಿಯ ವಾತಾವರಣದಿಂದಾಗಿ ಕಾಡು ಹಣ್ಣು ಹಂಪಲುಗಳು ಈ ಬಾರಿ ಬಂಪರ್‌ ಬೆಳೆ ಕೊಡುವ ಸಾಧ್ಯತೆ ಇದೆ. ಆದರೆ ತರಕಾರಿಮತ್ತು ದ್ವಿದಳ ಧಾನ್ಯಗಳ ಬೆಳೆಗಳು ಆಪತ್ತಿನ ಪರಿಸ್ಥಿತಿಯನ್ನು ಎದುರಿಸುತ್ತಿವೆ ಕೃಷಿಕರ ನಿರೀಕ್ಷೆಗೆ ಪೂರಕವಾಗಿ ಮಾವು, ಗೇರು, ಹಲಸು, ಹೆಬ್ಬಲಸು ಸಹಿತ ವಿವಿಧ ಜಾತಿಯ ಹಣ್ಣಿನ ಗಿಡಗಳು ಹೂ ಬಿಟ್ಟಿದ್ದು,  ವಾಣಿಜ್ಯ ಬೆಳೆಗಳಾದ ಕಾಳು ಮೆಣಸು, ಚಿಕ್ಕು, ಬಾಳೆ ಉತ್ತಮ ಫಸಲು ನೀಡುವ ಲಕ್ಷಣಗಳಿವೆ.  

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಯ, ಪ್ರಮಾಣ ಹೆಚ್ಚಾಗಿದೆ. ಚಳಿಗಾಲದಲ್ಲಿ ಮೋಡದ ವಾತಾವರಣ ಇದ್ದರೆ ಮಾವು ಮತ್ತು ಗೇರು  ಹೂವುಗಳು ಮುರುಟಿ ಹೋಗುವ ಅಪಾಯ ಎದುರಿಸುತ್ತವೆ. 

ಆದರೆ ಈ ಬಾರಿ ಆ ಸಮಸ್ಯೆ ಕಂಡುಬಂದಿಲ್ಲ.  

ದ್ವಿದಳ ಧಾನ್ಯ – ತರಕಾರಿ ಬೆಳೆಗೆ ಆಪತ್ತು ವಿಪರೀತ ಚಳಿ ದ್ವಿದಳ ಧಾನ್ಯ ಮತ್ತು ತರಕಾರಿ ಬೆಳೆಗಳಿಗೆ ಪ್ರಯೋಜನಕಾರಿಯಲ್ಲ.  ನೆಲಗಡಲೆ, ಎಳ್ಳು, ಹುರುಳಿ, ಉದ್ದು, ಆವಡೆ ಇತ್ಯಾದಿ ದ್ವಿದಳ ಧಾನ್ಯಗಳು, ಮತ್ತು ಬಸಳೆ, ಹರಿವೆ, ಬೆಂಡೆ, ಅಲಸಂಡೆ, ಕಲ್ಲಂಗಡಿ, ಸೌತೆ ಬೆಳೆಗಳಿಗೆ ಮಾರಕವಾಗಿವೆ. 
ಜತೆಗೆ ಶಂಕರಪುರ ಮಲ್ಲಿಗೆ ಮತ್ತು ಮಟ್ಟುಗುಳ್ಳ ಕೃಷಿಗೂ ಚಳಿ ಉಪಕಾರಿಯಲ್ಲ ಎನ್ನುವ ಅಭಿಪ್ರಾಯ ಕೃಷಿಕರದ್ದಾಗಿದೆ.  

Advertisement

ಕಾಡು ಹಣ್ಣು ಹಂಪಲು ಗಿಡಗಳಿಗೆ ಸೊಳ್ಳೆ ಬಾಧೆ
ವಿಪರೀತ ಚಳಿ ಇದ್ದು, ಅದರ ನಡುವೆ ಮೋಡ ಮುಸುಕಿದ ಲಕ್ಷಣಗಳಿದ್ದರೆ  ಟೀ ಜಾತಿಯ ಸೊಳ್ಳೆ ಸಂತಾನೋತ್ಪತ್ತಿಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಹಣ್ಣು ಹಂಪಲು ಗಿಡಗಳಿಗೂ ಸೊಳ್ಳೆ ಬಾಧೆ ಕಾಣಿಸುತ್ತದೆ. ಹೂ ಬಿಡುವ ಮರಗಳನ್ನು ವ್ಯಾಪಿಸಿಕೊಳ್ಳುವ ಈ ಸೊಳ್ಳೆಯು ಹೂವಿನ ಕಾಂಡದ ರಸ ಹೀರುತ್ತದೆ. ಇದರಿಂದಾಗಿ ಇಡೀ ಹೂ ಗೊಂಚಲು ಒಣಗಿ ಹೋಗುತ್ತದೆ. ಮೋಡದ ವಾತಾವರಣದಲ್ಲಿ ತೇವಾಂಶ ಹೆಚ್ಚುವುದರಿಂದ ಹೂ ಅಥವಾ ಮಿಡಿ ಫಸಲುಗಳಿಗೆ ಶಿಲೀಂಧ್ರ ವ್ಯಾಪಿಸಿ ಬೆಳವಣಿಗೆಗೆ ತೊಂದರೆ ಮಾಡುತ್ತವೆ.  

ಪ್ರಕೃತಿದತ್ತ ಕೊಡುಗೆ
ಚಳಿಯ ಕಾರಣದಿಂದಾಗಿ ಮಾವು, ಗೇರು ಮತ್ತು ಹಲಸು ಅಧಿಕ ಇಳುವರಿ ಕೊಡುವ ನಿರೀಕ್ಷೆಯಿದೆ. ಹೆಬ್ಬಲಸಿನ ಗಿಡಗಳು ಹಿಂದಿಗಿಂತಲೂ ಉತ್ತಮವೆಂಬಂತೆ ಈ ಬಾರಿ ಬಲು ಬೇಗನೆ ಫಸಲು ಬಿಟ್ಟಿವೆ. ಹೂ ಬಿಟ್ಟ ಸಂದರ್ಭ ಮೋಡ ಬಂದರೆ ಅದರಿಂದ ವಿವಿಧ ರೀತಿಯ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಬಗ್ಗೆಯೂ ಎಚ್ಚರ ವಹಿಸುವ ಅಗತ್ಯತೆಯಿದೆ.
– ರಾಮಕೃಷ್ಣ ಶರ್ಮ  ಬಂಟಕಲ್ಲು, ಅಧ್ಯಕ್ಷರು, ಉಡುಪಿ ಜಿಲ್ಲಾ ಕೃಷಿಕ ಸಂಘ

– ರಾಕೇಶ್ ಕುಂಜೂರು 

Advertisement

Udayavani is now on Telegram. Click here to join our channel and stay updated with the latest news.

Next