Advertisement

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

04:35 PM Oct 18, 2024 | Team Udayavani |

ಮುಂಬಯಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಮಾತುಕತೆಯ ವಿಳಂಬದ ಬಗ್ಗೆ ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಶುಕ್ರವಾರ ನಿರಾಶೆ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ನಾಯಕರು “ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿಲ್ಲ” ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಭಾ ಸದಸ್ಯ ರಾವತ್, ಮಹಾ ವಿಕಾಸ್ ಅಘಾಡಿ (MVA) ಪಾಲುದಾರರಾದ ಕಾಂಗ್ರೆಸ್, ಶಿವ ಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್) 288 ವಿಧಾನಸಭಾ ಸ್ಥಾನಗಳ ಪೈಕಿ 200 ಸ್ಥಾನಗಳಲ್ಲಿ ಒಮ್ಮತಕ್ಕೆ ಬಂದಿವೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಮುಕುಲ್ ವಾಸ್ನಿಕ್ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ ಅವರೊಂದಿಗೆ ಸೀಟು ಹಂಚಿಕೆ ಕುರಿತು ಮಾತನಾಡಿದ್ದು, ಕಾಂಗ್ರೆಸ್‌ನ ನಾಯಕ ರಾಹುಲ್ ಗಾಂಧಿಯವರೊಂದಿಗೂ ಮಾತನಾಡುವುದಾಗಿ ರಾವತ್ ಹೇಳಿದರು.

ಬಾಕಿ ಇರುವ ನಿರ್ಧಾರವನ್ನು ತ್ವರಿತಗೊಳಿಸಬೇಕು. ಬಹಳ ಕಡಿಮೆ ಸಮಯ ಉಳಿದಿದೆ. ಮಹಾರಾಷ್ಟ್ರ ಕಾಂಗ್ರೆಸ್ ನಾಯಕರಿಗೆ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲ. ಅವರು ಪಟ್ಟಿಯನ್ನು ಆಗಾಗ ದೆಹಲಿಗೆ ಕಳುಹಿಸಬೇಕು ಮತ್ತು ನಂತರ ಚರ್ಚೆಗಳು ನಡೆಯುತ್ತವೆ. ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ರಾವತ್ ಹೇಳಿದ್ದಾರೆ.

ಗುರುವಾರ ಸಂಜೆ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರು,”ಸೀಟು ಹಂಚಿಕೆ ಮಾತುಕತೆಯಲ್ಲಿ ತೊಡಗಿರುವ ಎಂವಿಎ ನಾಯಕರು ಅಂತಿಮ ಸಭೆ ನಡೆಸಿದ್ದು, ಎಂವಿಎ ಪಾಲುದಾರರು ಜಟಿಲತೆಯನ್ನು ಹೊಂದಿರುವ 20-25 ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಪ್ರತಿ ಪಕ್ಷದ ಹೈಕಮಾಂಡ್‌ಗೆ ಅಸ್ಥಿರತೆಯನ್ನು ಪರಿಹರಿಸಲು ಕಳುಹಿಸಲಾಗುವುದು. ಅಕ್ಟೋಬರ್ 18-19 ರೊಳಗೆ ಎಲ್ಲಾ 288 ಕ್ಷೇತ್ರಗಳಿಗೆ ಸೀಟು ಹಂಚಿಕೆಯ ವ್ಯವಸ್ಥೆಯನ್ನು ಘೋಷಿಸಲು ಪ್ರಯತ್ನಿಸಲಾಗುತ್ತಿದೆ” ಎಂದು ಹೇಳಿದ್ದರು.

Advertisement

ಲೋಕಸಭೆ ಚುನಾವಣೆಯಲ್ಲಿ, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 30 ಸ್ಥಾನಗಳಲ್ಲಿ MVA ಮೈತ್ರಿಕೂಟ ಗೆಲ್ಲುವ ಮೂಲಕ ಬಿಜೆಪಿ, ಶಿಂಧೆ ಬಣದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್ ಸಿಪಿಗೆ ಭಾರೀ ಆಘಾತ ನೀಡಿತ್ತು.

ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next