ನವದೆಹಲಿ:ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಶೆಲ್ಟರ್ ಹೋಮ್ ನಲ್ಲಿ ಹಲವು ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ದೈಹಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ 12 ದೋಷಿಗಳಿಗೆ ದಿಲ್ಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ದೆಹಲಿ ಸಾಕೇತ್ ಕೋರ್ಟ್ ನ ಅಡಿಷನಲ್ ಸೆಷನ್ ಜಡ್ಜ್ ಸೌರಭ್ ಕುಲ್ ಶ್ರೇಷ್ಠಾ ಅವರು ಎನ್ ಜಿಒ ಮಾಲೀಕ ಬ್ರಜೇಶ್ ಠಾಕೂರ್ ಹಾಗೂ ಇತರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೇ ಠಾಕೂರ್ ಗೆ 32 ಲಕ್ಷದ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಠಾಕೂರ್ ಮುಜಾಫರ್ ಪುರ್ ನಲ್ಲಿ ಸೇವಾ ಸಂಕಲ್ಪ ಇವಾಂ ವಿಕಾಸ್ ಸಮಿತಿ ಹೆಸರಿನ ಎನ್ ಜಿಒ ಸ್ಥಾಪಿಸಿರುವುದಾಗಿ ವರದಿ ತಿಳಿಸಿದೆ. ಠಾಕೂರ್ ಒಡೆತನದ ಶೆಲ್ಟರ್ ನಲ್ಲಿರುವ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ ಹಲ್ಲೆ ನಡೆಯುತ್ತಿರುವ ಬಗ್ಗೆ ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ (ಟಿಐಎಸ್ ಎಸ್) ವರದಿಯೊಂದನ್ನು (2018ರ ಮೇ 26ರಂದು) ಬಿಹಾರ ಸರ್ಕಾರಕ್ಕೆ ಸಲ್ಲಿಸಿದ ನಂತರ ಘಟನೆ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
ಸಾಕೇತ್ ಕೋರ್ಟ್ ಜಡ್ಜ್ ನೀಡಿರುವ 1,546 ಪುಟಗಳ ತೀರ್ಪಿನಲ್ಲಿ, ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಸಂಚು), 324 (ಅಪಾಯಕಾರಿ ಶಸ್ತ್ರಾಸ್ತ್ರದ ಮೂಲಕ ಭಯಗೊಳಿಸುವುದು), 323 (ಸ್ವಯಂ ಆಗಿ ಹಿಂಸಿಸುವುದು), ಪೋಸ್ಕೋ ಹಾಗೂ ಬಾಲಾಪರಾಧಿ ಕಾಯ್ದೆ 75ರ ಅನ್ವಯ ಬ್ರಜೇಶ್ ಠಾಕೂರ್ ನನ್ನು ದೋಷಿ ಎಂದು ಘೋಷಿಸಿದೆ. ಪ್ರಕರಣದಲ್ಲಿ ವಿಕ್ಕಿ ಎಂಬಾತನನ್ನು ಖುಲಾಸೆಗೊಳಿಸಿದೆ.
ಪ್ರಕರಣದಲ್ಲಿ ಮುಜಾಫರ್ ಪುರದ ಮಕ್ಕಳ ರಕ್ಷಣಾ ಘಟಕದ ಮಾಜಿ ಸಹಾಯಕ ಡೈರೆಕ್ಟರ್ ರೋಸಿ ರಾಣಿ ಕೂಡಾ ಪೋಸ್ಕೋ ಕಾಯ್ದೆಯಡಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇನ್ನುಳಿದಂತೆ ಶೈಸ್ತಾ ಪ್ರವೀಣ್, ಇಂದು ಕುಮಾರಿ, ಮಿನು ದೇವಿ, ಮಂಜು ದೇವಿ, ಚಾಂದ್ ದೇವಿ, ನೇಹಾ ಕುಮಾರಿ, ಹೇಮಾ ಮಾಸಿಹ್, ಕಿರಣ್ ಕುಮಾರಿಯನ್ನು ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.