Advertisement

ಮುಜಾಫ‌ರ್‌ಪುರ ಪ್ರಕರಣ: ಅನಾಥಾಶ್ರಮಗಳು ಸುರಕ್ಷಿತವಾಗಲಿ

06:00 AM Aug 07, 2018 | |

ಬಿಹಾರದ ಮುಜಾಫ‌ರ್‌ಪುರದ ಅನಾಥಾಶ್ರಮವೊಂದರಲ್ಲಿ 34 ಬಾಲಕಿಯರು ಲೈಂಗಿಕ ಶೋಷಣೆಗೆ ಗುರಿಯಾಗಿರುವ ಆಘಾತಕಾರಿ ಪ್ರಕರಣ ಬಯಲಾದ ಬೆನ್ನಿಗೆ ಉತ್ತರ ಪ್ರದೇಶದ ದೇವಾರಿಯದ ಅನಾಥಾಶ್ರಮದಲ್ಲೂ ಇದೇ ಮಾದರಿಯ ಪ್ರಕರಣ ಸಂಭವಿಸಿರುವುದು ಬೆಳಕಿಗೆ ಬಂದಿದೆ. ಈ ಎರಡು ಪ್ರಕರಣಗಳು ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಕುರಿತಾಗಿ ಹಲವು ಪ್ರಶ್ನೆಗಳನ್ನು ಕೇಳುವಂತೆ ಮಾಡಿವೆ. ಮುಜಾಫ‌ರ್‌ ನಗರದಲ್ಲಿದ್ದದ್ದು ಸರಕಾರಿ ಅನುದಾನದಿಂದ ನಡೆಯುತ್ತಿದ್ದ ಎನ್‌ಜಿಒ ಒಂದು ನಡೆಸುತ್ತಿದ್ದ ಅನಾಥಾಶ್ರಮ. ಎನ್‌ಜಿಒ ನಿರ್ದೇಶಕನೇ ಮುಖ್ಯ ಆರೋಪಿ. ಅನಾಥ ಹೆಣ್ಣು ಮಕ್ಕಳನ್ನು ಸ್ವತಹ ಲೈಂಗಿಕ ಶೋಷಣೆಗೆ ಗುರಿ ಮಾಡುತ್ತಿದ್ದಲ್ಲದೆ ಇತರರಿಗೂ ಅವಕಾಶ ನೀಡುತ್ತಿದ್ದ. ಅನಾಥಾಶ್ರಮದಿಂದ ಪಕ್ಕದಲ್ಲೇ ಇರುವ ಪತ್ರಿಕಾಲಯವೊಂದಕ್ಕೆ ರಹಸ್ಯ ಸುರಂಗ ಮಾರ್ಗ ವನ್ನು ಕೊರೆಯಲಾಗಿತ್ತು ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಟಾಟಾ ಇನ್ಸ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ಸಯನ್ಸ್‌ (ಟಿಐಎಸ್‌ಎಸ್‌) ಕೆಲವು ತಿಂಗಳ ಹಿಂದೆಯಷ್ಟೇ ಮುಜಾಫ‌ರಪುರದ ಅನಾಥಾಶ್ರಮದ ಪರಿಶೋಧನೆ ನಡೆಸಿ ಇಲ್ಲಿ ಬಾಲಕಿಯರ ಸ್ಥಿತಿ ಚೆನ್ನಾಗಿಲ್ಲ ಎಂದು ವರದಿ ಸಲ್ಲಿಸಿತ್ತು. ಆಗಲೇ ಸರಕಾರ ಎಚ್ಚೆತ್ತುಕೊಂಡಿದ್ದರೆ ಇನ್ನಷ್ಟು ಅನಾಹುತಗಳಾಗುವುದನ್ನು ತಡೆಯಬಹುದಿತ್ತು. ಆದರೆ ವ್ಯವಸ್ಥೆಯ ಚಲ್ತಾ ಹೈ ಧೋರಣೆಯಿಂದ ಪರಿಸ್ಥಿತಿ ಉಲ್ಬಣಿಸಿದೆ. ಬಾಲಕಿಯೊಬ್ಬಳು ಹಿಂಸೆ ತಾಳಲಾರದೆ ಸತ್ತ ಬಳಿಕ ಅನಾಥಾಶ್ರಮದ ಕರ್ಮಕಾಂಡ ಹೊರ ಜಗತ್ತಿಗೆ ತಿಳಿದಿದೆ. 

Advertisement

ಅನಾಥಾಶ್ರಮದೊಳಗೆ ನಡೆಯುತ್ತಿದ್ದ ಅನ್ಯಾಯ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಬಾಲಕಿಯರಿಗೆ ಅಮಲು ಬರಿಸುವ ಔಷಧ ತಿನ್ನಿಸಿ ಅತ್ಯಾಚಾರ ಎಸಗಲಾಗುತ್ತಿತ್ತು. ಹೊಡೆತ, ಉಪವಾಸ, ಗರ್ಭಪಾತ ಇಲ್ಲಿ ಮಾಮೂಲಾಗಿದ್ದವು ಎನ್ನುವುದು ಪ್ರಾಥಮಿಕ ತನಿಖೆಯಿಂದಲೇ ತಿಳಿದು ಬಂದಿದೆ. ಇದೀಗ ಪ್ರಕರಣ ಸಿಬಿಐ ಕೈಯಲ್ಲಿದ್ದು ಇನ್ನಷ್ಟು ಆಘಾತಕಾರಿ ಸತ್ಯಗಳು ಹೊರಬಂದರೆ ಆಶ್ಚರ್ಯಪಡಬೇಕಿಲ್ಲ. ಇನ್ನೂ ಆಘಾತಕಾರಿ ವಿಷಯವೆಂದರೆ ಈ ಪ್ರಕರಣದ ಆರೋಪಿಗಳ ಪೈಕಿ ರಾಜ್ಯದ ಶಿಶು ಕಲ್ಯಾಣ ಸಮಿತಿಯ ಮುಖ್ಯಸ್ಥರೂ ಇದ್ದಾರೆ ಎನ್ನುವುದು. ರಾಜ್ಯದ ಸಚಿವೆಯೊಬ್ಬರ ಪತಿಯ ಮೇಲೂ ದಟ್ಟ ಗುಮಾನಿಗಳಿವೆ. ಎನ್‌ಜಿಒಗೆ ಇರುವ ಭಾರೀ ರಾಜಕೀಯ ಪ್ರಭಾವದ ಕಾರಣದಿಂದಲೇ ಸಾರ್ವಜನಿಕರಿಗೆ ಅನಾಥಾಶ್ರಮ ಚಟುವಟಿಕೆಗಳ ಮೇಲೆ ಗುಮಾನಿಯಿದ್ದರೂ ಪ್ರಶ್ನಿಸುವ ಧೈರ್ಯ ತೋರಿಸಿರಲಿಲ್ಲ.  ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅದರಲ್ಲೂ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮಹಿಳಾ ಸಬಲೀಕರಣಕ್ಕೆ ಉಳಿದವರಿಗಿಂತ ಒಂದು ತೂಕ ಹೆಚ್ಚೇ ಆದ್ಯತೆಯನ್ನು ನೀಡಿದ್ದಾರೆ. ಅವರ ರಾಜ್ಯದಲ್ಲೇ ಈ ಪ್ರಕರಣ ನಡೆದಿರುವುದು ನಿಜಕ್ಕೂ ದುರದೃಷ್ಟಕರ. ಒಂದೆಡೆ ಮಹಿಳಾ ಸಬಲೀಕರಣದ ಕುರಿತು ಮಾತನಾಡುತ್ತಿರುವಾಗ ಇನ್ನೊಂದೆಡೆ ಮಹಿಳೆಯರಿಗೆ ಕನಿಷ್ಠ ಸುರಕ್ಷತೆಯನ್ನೂ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ನಮ್ಮ ವ್ಯವಸ್ಥೆ ಮಾತ್ರವಲ್ಲದೆ ಸಮಾಜದಲ್ಲೂ ಲೋಪವಿದೆ ಎಂದು ಹೇಳಬೇಕಾಗುತ್ತದೆ.  ಬಿಹಾರ ಅಥವಾ ಉತ್ತರ ಪ್ರದೇಶ ಎಂದಲ್ಲ, ದೇಶದಲ್ಲಿರುವ ಬಹುತೇಕ ಅನಾಥಾಶ್ರಮಗಳಲ್ಲಿ ಅದರಲ್ಲೂ ಸರಕಾರಿ ಅನುದಾನದಿಂದ ನಡೆಯು ತ್ತಿರುವ ಅನಾಥಾಶ್ರಮಗಳಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಆಗಾಗ ನಡೆಯುತ್ತಿರುವ ಈ ಮಾದರಿಯ ಪ್ರಕರಣಗಳಿಂದ ತಿಳಿದುಬರುತ್ತದೆ. ಹೆಣ್ಣು ಮಕ್ಕಳ ಪಾಲಿಗೆ ಸುರಕ್ಷಿತ ತಾಣವಾಗಬೇಕಿದ್ದ ಅನಾಥಾಶ್ರಮಗಳೇ ಅವರ ಬದುಕನ್ನು ಹೊಸಕಿ ಹಾಕುತ್ತಿರುವುದು ಅಕ್ಷಮ್ಯ ಅಪರಾಧ. ಈ ಕೃತ್ಯದ ಹಿಂದೆ ಇರುವವರಿಗೆ ಕಠಿನ ಶಿಕ್ಷೆ ಜರುಗಿಸಿ ಸ್ಪಷ್ಟವಾದ ಸಂದೇಶವೊಂದನ್ನು ರವಾನಿಸಬೇಕು.

ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಅನಾಥಾಶ್ರಮಗಳು ತಮ್ಮ ಕಾರ್ಯ ವಿಧಾನದಿಂದ ಉಳಿದವರಿಗೆ ಮಾದರಿಯಾಗಬೇಕಿತ್ತು. ಆದರೆ ಬೇಲಿಯೇ ಎದ್ದು ಹೊಲ ಮೇಯುವಂತೆ ಇಲ್ಲಿ ರಕ್ಷಿಸಬೇಕಾದವರೇ ಭಕ್ಷಿಸುತ್ತಿರುವುದು ದೊಡ್ಡ ಕಳಂಕ. ಈ ಮಾದರಿಯ ಘಟನೆಗಳು ನಡೆದಾಗ ಅದರ ಸಾಮಾಜಿಕ ಪರಿಣಾಮ ವ್ಯಾಪಕವಾಗಿರುತ್ತದೆ. ಎಲ್ಲೋ ದೂರದ ಬಿಹಾರದಲ್ಲಿ ನಡೆದಿದೆ ಎಂದರೂ ನಮ್ಮ ನಡುವೆ ಇರುವ ಅನಾಥಾ ಶ್ರಮಗಳನ್ನು ಗುಮಾನಿಯಿಂದ ನೋಡುವ ಕುತ್ಸಿತ ಮನಸ್ಥಿತಿಯವರು ಎಲ್ಲೆಲ್ಲೂ ಇರುತ್ತಾರೆ. ಹೀಗಾಗಿ ಅನಾಥಾಶ್ರಮದಲ್ಲಿ ಇರುವವರು ತಮ್ಮದ ಲ್ಲದ ತಪ್ಪಿಗೆ ಸಮಾಜದ ಕೊಂಕು ದೃಷ್ಟಿಯನ್ನು ಎದುರಿಸಬೇಕಾಗುತ್ತದೆ. 

ದೇವಾರಿಯದ ಪ್ರಕರಣ ಬಯಲಾದ ಕೂಡಲೇ ಉತ್ತರ ಪ್ರದೇಶ ಸರಕಾರ ಎಲ್ಲ ಅನಾಥಾಶ್ರಮಗಳ ತಪಾಸಣೆಗೆ ಆದೇಶಿಸಿದೆ. ಇದೇ ಮಾದರಿಯಲ್ಲಿ ಈ ದೇಶದ ಎಲ್ಲೆಡೆಯಲ್ಲಿರುವ ಅನಾಥಾಶ್ರಮಗಳ ಸೋಷಿಯಲ್‌ ಆಡಿಟ್‌ ಮಾಡಬೇಕಾದ ಅಗತ್ಯವಿದೆ. ಅನಾಥಾಶ್ರಮಗಳನ್ನು ನಡೆಸುವವರ ಮತ್ತು ಅಲ್ಲಿನ ಸಿಬಂದಿಯ ನೇಮಕಾತಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಅನ್ವಯಿಸಬೇಕು. ಹೀಗಾದರೆ ಮಾತ್ರ ಅನಾಥಾಶ್ರಮಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next