Advertisement

‘ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ…ನೆಮ್ಮದಿಯ ಸಾವನ್ನಷ್ಟೇ ಬಯಸುತ್ತೇನೆ’: ಮುತ್ತಪ್ಪ ರೈ

09:53 AM Jan 21, 2020 | Hari Prasad |

ರಾಮನಗರ: ಒಂದು ಕಾಲದಲ್ಲಿ ಬೆಂಗಳೂರು ಭೂಗತ ಲೋಕವನ್ನು ಅಕ್ಷರಶಃ ಆಳಿದ್ದ ಮಾಜೀ ಡಾನ್, ಇದೀಗ ಸಮಾಜ ಸೇವೆಯಲ್ಲಿ ಹಾಗೂ ಧಾರ್ಮಿಕ ಸೇವೆಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿರುವ ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ಅವರು ಸೋಮವಾರದಂದು ಇದ್ದಕ್ಕಿದ್ದಂತೆ ಪತ್ರಿಕಾಗೋಷ್ಠಿಯೊಂದನ್ನು ಕರೆದಿದ್ದರು.

Advertisement

ರಾಮನಗರದ ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಆಯೋಜಿಸಲಾಗಿದ್ದ ಈ ಪತ್ರಿಕಾಗೋಷ್ಠಿಯಲ್ಲಿ ಮುತ್ತಪ್ಪ ರೈ ಅವರು ಪತ್ರಕರ್ತರ ಮುಂದೆ ತಮ್ಮನ್ನು ಕಾಡುತ್ತಿರುವ ಆರೋಗ್ಯ ಸ್ಥಿತಿಯ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಪತ್ರಿಕಾಗೋಷ್ಠಿಯಲ್ಲಿ ಮುತ್ತಪ್ಪ ರೈ ಹೇಳಿದ್ದಿಷ್ಟು…
‘ಕೆಲವು ಸಮಯದ ಹಿಂದೆ, ಸಣ್ಣದಾಗಿ ಬೆನ್ನುನೋವು ಕಾಣಿಸಿಕೊಂಡಿತ್ತು ಪರೀಕ್ಷೆಗೆಂದು ಆಸ್ಪತ್ರೆಗೆ ಹೋದಾಗ ಸ್ಕ್ಯಾನಿಂಗ್ ಮತ್ತು ಬಯಾಪ್ಸಿ ಮಾಡಿಸಿದರು. ಅದರಲ್ಲಿ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಗಿತ್ತು ಮತ್ತು ಅದು ಲಿವರ್ ವರೆಗೂ ವ್ಯಾಪಿಸಿತ್ತು.

ಬಳಿಕ ದೆಹಲಿಯಲ್ಲಿ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದೆ ಅವರು ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಕ್ಯಾನ್ಸರ್ ಸಮಸ್ಯೆಗೆ ಚಿಕಿತ್ಸೆ ನೀಡಿದ್ದ ವೈದ್ಯರಾಗಿದ್ದರು. ಅಲ್ಲಿ ಕಿಮೋ ಥೆರಪಿ, ರೇಡಿಯೋ ಥೆರಪಿಗಳಿಗೆ ಒಳಗಾದೆ. ಈ ಸಂದರ್ಭದಲ್ಲಿ ಬಹಳಷ್ಟು ಕಷ್ಟ ಆಯಿತು. ಸಾಕಷ್ಟು ಹಣ ಖರ್ಚು ಮಾಡಿದರೆ ಇದಕ್ಕೆ ಉತ್ತಮ ಚಿಕಿತ್ಸೆ ಕೊಡಿಸಬಹುದು ಎಂದು ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ನನಗೆ ಹೇಳಿದರು.’

‘ಹಣದ ಸಮಸ್ಯೆ ಇಲ್ಲ ಎಂದು ನಾನು ಅವರಿಗೆ ತಿಳಿಸಿದ್ದೆ. ಆದರೆ ಮಧ್ಯಮ ವರ್ಗದ ಅಥವಾ ಬಡವರ್ಗದ ವ್ಯಕ್ತಿಗೆ ಈ ಕಾಯಿಲೆ ಬಂದರೆ ಏನಿ ಗತಿ ಎಂದು ಯಾವಾಗಲೂ ಯೋಚಿಸುತ್ತಿದ್ದೇನೆ. ನನ್ನ ಶತ್ರುವಿಗೂ ಈ ಕಾಯಿಲೆ ಬರುವುದು ಬೇಡ ಎಂದು ಪ್ರಾರ್ಥಿಸುತ್ತೇನೆ.’

Advertisement

ಇದೀಗ ಮೆದುಳಿನ ಭಾಗಕ್ಕೂ ಕ್ಯಾನ್ಸರ್ ವ್ಯಾಪಿಸುತ್ತಿದೆ. ಈ ಮುತ್ತಪ್ಪ ರೈ ಸಾವಿಗೆ ಹೆದರುವ ಮನುಷ್ಯ ಅಲ್ಲ. 68 ವರ್ಷ ತುಂಬು ಜೀವನ ನಡೆಸಿದ್ದೇನೆ. ಯಾರಿಗೂ ತೊಂದರೆ ನೀಡದಂತೆ ನೆಮ್ಮದಿಯಾಗಿ ಸಾಯುವ ಅವಕಾಶವನ್ನು ಮಾತ್ರವೇ ದೇವರಲ್ಲಿ ಪ್ರತೀದಿನ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ’ ಎಂದು ಅವರು ಭಾವುಕರಾಗಿ ನುಡಿದರು.

‘ನನ್ನಲ್ಲಿರುವ ಆಸ್ತಿಯ ಕುರಿತಾಗಿ ಈಗಾಗಲೇ ವಿಲ್ ಮಾಡಿಸಿಟ್ಟಿದ್ದೇನೆ. ಈ ಕುರಿತಾಗಿ ಮಕ್ಕಳಿಗೂ ಮಾಹಿತಿ ನೀಡಿದ್ದೇನೆ ಮಾತ್ರವಲ್ಲದೇ ಕಳೆದ 10-15 ವರ್ಷಗಳಿಂದ ನನ್ನ ಜೊತೆಯಲ್ಲೇ ಇರುವವರಿಗೆ ಒಂದೊಂದು ನಿವೇಶನ ಕೊಡುವಂತೆ ಸೂಚಿಸಿದ್ದೇನೆ. ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಿಸಿದ್ದೇನೆ’ ಎಂಬೆಲ್ಲಾ ಮಾಹಿತಿಯನ್ನು ಮುತ್ತಪ್ಪ ರೈ ಅವರು ಮಾಧ್ಯಮಗಳಿಗೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next