Advertisement
ಮುಟ್ಲುಪಾಡಿಯ ದೇವಸ್ಥಾನಬೆಟ್ಟು, ನವಗ್ರಾಮ ಕಾಲನಿ, ಐದು ಸೆಂಟ್ಸ್ ಕಾಲನಿಯ 35 ಮನೆಗಳ ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗಾಗಿದೆ. ಅಡಿಕೆ, ತೆಂಗು, ಬಾಳೆ, ಗೇರು ಮರಗಳು ನೆಲಕ್ಕುರುಳಿ ರೈತರಿಗೆ ಸಂಕಷ್ಟ ಎದುರಾಗಿದೆ. ಅಂಗಡಿಗಳ ಮೇಲ್ಛಾವಣಿಯೂ ಹಾನಿಗೀಡಾಗಿದೆ.
ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿಗೊಂಡಿರುವುದರಿಂದ ಅಕ್ಕಿ ಸೇರಿದಂತೆ ದವಸ ಧಾನ್ಯಗಳು, ಬಟ್ಟೆ, ವಿದ್ಯುತ್ ಉಪಕರಣಗಳು ಮಳೆ ನೀರಿನಿಂದ ತೊಯ್ದು ಹೋಗಿದೆ. ಇವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು ಇದೀಗ ಇವರ ಬದುಕು ಮೂರಾಬಟ್ಟೆಯಾಗಿದೆ. ಮುಟ್ಲುಪಾಡಿಯ ರುಕ್ಮಿಣಿ, ಗೀತಾ, ಸರೋಜಿನಿ ಆಚಾರ್ಯ, ಭೋಜ ಪೂಜಾರಿ, ಜ್ಯೋತಿ, ಯಶೋದಾ, ಸಂಕಪ್ಪ ಶೆಟ್ಟಿ, ಶೇಖರ್ ಶೆಟ್ಟಿ, ಸರೋಜಿನಿ, ದಿನೇಶ್ ಶೆಟ್ಟಿ, ಸಂಪ, ಜನಾರ್ದನ ಆಚಾರ್ಯ, ವನಜಾ, ಸುಕನ್ಯಾ, ಶಾಂತಾ, ಜಯಂತಿ, ಶಶಿಧರ, ಕಲ್ಪನಾ, ವಸಂತಿ, ಯಶೋದಾ, ನಾರಾಯಣ ಮಡಿವಾಳ, ಸುಮತಿ, ಸುಗಂಧಿ, ಶಾರದಾ, ಚಂದ್ರಾವತಿ, ಶೇಖರ ಅವರ ಮನೆಗಳು ಸಂಪೂರ್ಣ ಹಾನಿಗೊಂಡಿದೆ. ಇನ್ನೂ ಹಲವಾರು ಮನೆಗಳು ಭಾಗಶಃ ಹಾನಿಗೊಂಡಿದೆ.
ಹಾನಿಗೊಂಡ ಪ್ರದೇಶಗಳಿಗೆ ಈಗಾಗಲೇ ಶಾಸಕರಾಗಿರುವ ಸುನಿಲ್ ಕುಮಾರ್, ಹೆಬ್ರಿ ತಹಶೀಲ್ದಾರ್ ಕೆ. ಮಹೇಶ್ಚಂದ್ರ ಭೇಟಿಕೊಟ್ಟು ಪರಿಹಾರ ಕಾರ್ಯಗಳ ಪರಿಶೀಲನೆಯನ್ನು ನಡೆಸಿದ್ದಾರೆ. ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು ಸ್ಥಳದಲ್ಲಿಯೇ ಉಪಸ್ಥಿತರಿದ್ದು ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ.
Related Articles
ಗ್ರಾಮದಲ್ಲಿ ಬೃಹತ್ ಮರಗಳು ನೆಲಕ್ಕುರುಳಿ ಸಂಚಾರಕ್ಕೆ ತಡೆ ಉಂಟಾಗಿತ್ತು. ರಸ್ತೆಯುದ್ದಕ್ಕೂ ಮರಗಳು ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಿದ್ಯುತ್ ಕಂಬ ಹಾಗೂ ಪರಿವರ್ತಕಗಳ ಮೇಲೆ ಮರಗಳು ಉರುಳಿ ಬಿದ್ದರಿಂದ ಆ.7ರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೆಸ್ಕಾಂ ಅಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡುಬಿಟ್ಟಿದ್ದು ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಯುವಕರಿಂದ ಶ್ರಮದಾನ
ಸಂಪೂರ್ಣ ಹಾನಿಗೊಂಡ ಮನೆಯವರಿಗೆ ಶಾಸಕ ಸುನಿಲ್ ಕುಮಾರ್ ಅವರ ಸೂಚನೆಯಂತೆ ವರಂಗ ಪಂಚಾಯತ್ ಆಡಳಿತ ಹೆಂಚುಗಳನ್ನು ಸರಬರಾಜು ಮಾಡಿದ್ದು ಸ್ಥಳೀಯ 50 ಯುವಕರು ಶ್ರಮದಾನದ ಮೂಲಕ ಮೇಲ್ಛಾವಣಿಯ ಮರು ಜೋಡಣೆಯ ಕಾರ್ಯದಲ್ಲಿ ತೊಡಗಿದ್ದಾರೆ.
Advertisement