ಕಲಬುರಗಿ: ಬೀದರ್ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಮಂಠಾಳ ಗ್ರಾಮದ ಬಳಿಯಲ್ಲಿ ಶನಿವಾರ ಮಧ್ಯಾಹ್ನ ಬೀದರ ಜಿಲ್ಲೆಗೆ ಹೊರಟಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಮತ್ತು ರಾಜ್ಯಾಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ತಡೆದು ವಾಪಸ್ಸು ಕಳಿಸಿರುವ ಘಟನೆ ನಡೆದಿದೆ.
ಬೀದರನಲ್ಲಿ ಜೂ.4ರಿಂದ 12ರ ವರೆಗೆ ಮೂಲ ಅನುಭವ ಮಂಟಪ ರಕ್ಷಣೆಗಾಗಿ ನಡೆಯುತ್ತಿರುವ “ಮಠಾಧೀಶರ ನಡೆ ಬಸವಕಲ್ಯಾಣದ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಭಯ ನಾಯಕರು ಹೊರಟಿದ್ದರು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಬೀದರ ಜಿಲ್ಲಾಡಳಿತ ಉಭಯ ನಾಯಕರ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಶನಿವಾರ ಆಳಂದದಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಬೀದರಗೆ ಪ್ರಯಾಣ ಬೆಳೆಸಿದಾಗ ವಿ.ಕೆ.ಸಲಗರ ಬಳಿ ಮಂಠಾಳದಲ್ಲಿ ಪೊಲೀಸರು ಉಭಯ ನಾಯಕರನ್ನು ತಡೆದಾಗ ತುಸು ಹೊತ್ತು ವಾದ-ಪ್ರತಿವಾದಗಳು ನಡೆದವು.
ನಾವು ಬಸವಕಲ್ಯಾಣದ ಘನ ರುದ್ರಮುನಿ ಶಿವಾಚಾರ್ಯರ ಭೇಟಿಗೆ ಹೊರಟಿದ್ದೇವೆ. ನಮ್ಮ ಉದ್ದೇಶ ಯಾವ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುವುದು ಅಲ್ಲ ಎಂದು ತಿಳಿಸಿದರೂ ಪೊಲೀಸರು ಯಾವುದೇ ಕಾರಣಕ್ಕೂ ಬೀದರ್ ಜಿಲ್ಲೆಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾದವೂ ಆಯಿತು. ಕೊನೆಗೆ ಉಭಯ ನಾಯಕರು ತಮ್ಮ ಕಾರ್ಯಕರ್ತರ ಸಮೇತ ಕಲಬುರಗಿಗೆ ಆಗಮಿಸಿದರು. ಜಿಲ್ಲಾ ಅಧ್ಯಕ್ಷ ಮಹೇಶ ಗೊಬ್ಬೂರ, ಸೇಡಂ ಅಧ್ಯಕ್ಷ ಮೌನೇಶ ಬಡಿಗೇರ, ವಿಶ್ವ ಹಿಂದೂ ಪರಿಷತ್‌ನ ಬಸವರಾಜ ಪಾಟೀಲ, ಕಲಬುರಗಿ ನಗರ ಅಧ್ಯಕ್ಷ ಸಂತೋಷ ಹಿರೇಮಠ ಹಾಗೂ 50ಕ್ಕೂ ಹೆಚ್ಚು ಜನ ಕಾರ್ಯಕರ್ತರು ಇದ್ದರು.
ನಮ್ಮನ್ನು ಉದ್ದೇಶ ಪೂರ್ವಕವಾಗಿ ಸರಕಾರ ತಡೆದಿದೆ. ನಾವು ರುದ್ರಮುನಿ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೊರಟಿದ್ದೆವು. ಬಸವಕಲ್ಯಾಣ ಶಾಸಕ ಶರಣು ಸಲಗರ್ ಡಿಜೆ ನಿಷೇಧ ಇದ್ದರೂ ಡಿಜೆ ಹಚ್ಚಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದರೂ, ಸರಕಾರ ಬಾಯಿ ಮುಚ್ಚಿ ಕುಳಿತಿದೆ. ನಾವು ಶಾಂತವಾಗಿ ಸ್ವಾಮೀಜಿಗಳನ್ನು ಭೇಟಿ ಮಾಡಲು ಹೊರಟಿದ್ದರೆ ನಿರ್ಬಂಧ ಹೇರಲಾಗುತ್ತದೆ. ಇದು ಸರಿಯಲ್ಲ. -ಪ್ರಮೋದ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷ, ಶ್ರೀರಾಮ ಸೇನೆ
“ಅಲ್ಲಿ.. ನಾವೇನು ಬಂದೂಕು, ಬಡಿಗೆ ತಗೊಂಡು ಹೊರಟಿದ್ವಾ? ಸ್ವಾಮೀಜಿ ಒಬ್ಬರನ್ನು ಮಾತನಾಡಿಸಿಕೊಂಡು ಬರಲು ಹೊರಟಿದ್ದೆವು. ಇಂತಹ ವೇಳೆ ಬೀದರ ಜಿಲ್ಲಾಡಳಿತದ ಮುಖೇನ ನಮ್ಮನ್ನು ನಿರ್ಬಂಧಿಸುವ ಸರಕಾರದ ಉದ್ದೇಶ ಸರಿಯಾದುದ್ದಲ್ಲ. ಮೊದಲು ನಿಮ್ಮ ಶಾಸಕರು, ಮುಖಂಡರ ಮಾಡುವ ಉಲ್ಲಂಘನೆಗಳನ್ನು ತುಸು ನೋಡಿ.
-ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಂದೋಲಾ, ರಾಜ್ಯಾಧ್ಯಕ್ಷ, ಶ್ರೀರಾಮಸೇನೆ