ಹುಣಸೂರು: ಕಾಯಕ ಸಮಾಜಗಳು ಆಧುನಿಕತೆಗೆ ತಕ್ಕಂತೆ ಕುಲಕಸುಬನ್ನು ಅಭಿವೃದ್ಧಿಪಡಿಸಿಕೊಂಡು ಅಸ್ತಿತ್ವವನ್ನು ಉಳಿಸಿ ಕೊಳ್ಳಬೇಕಾದ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಸವಿತಾ ಸಮಾಜದ ಮುಖಂಡರು ಗಂಭೀರ ಚಿಂತನೆ ನಡೆಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಸವಿತಾ ಸಮಾಜದ ಕುಲವೃತ್ತಿ ರಕ್ಷಣಾ ವೇದಿಕೆ ವತಿಯಿಂದ ಹುಣಸೂರು ಉಪವಿಭಾಗ ಮಟ್ಟದ ಸವಿತಾ ಸಮಾಜದವರಿಗಾಗಿ ಆಯೋಜಿಸಿದ್ದ ಕುಲಕಸುಬು ಸಂಬಂಧಿತ ಒಂದು ದಿನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜ ಅತ್ಯಂತ ಪುಣ್ಯಕಾರ್ಯವನ್ನು ಮಾಡುತ್ತಿದೆ. ಪೌರಕಾರ್ಮಿಕರು ಮತ್ತು ಸವಿತಾ ಸಮಾಜ ನೀಡುತ್ತಿರುವ ಸೇವೆಯನ್ನು ನಾವ್ಯಾರು ಮರೆಯವಂತಿಲ್ಲ. ಆದರೆ ಆಧುನಿಕತೆ, ನೂತನ ತಂತ್ರಜ್ಞಾನ ಮತ್ತು ಮನುಷ್ಯನ ಆಲೋಚನಾಲಹರಿಯಿಂದಾಗಿ ಎಲ್ಲ ವೃತ್ತಿಗಳ ಪರಿಕಲ್ಪನೆಯನ್ನು ಬದಲಾಯಿಸಿದೆ ಎಂದರು.
ಮಹಿಳೆಯರು ಬ್ಯೂಟಿ ಪಾರ್ಲರ್ ಮೂಲಕ ಸಾಧನೆಯ ಹಾದಿಯಲ್ಲಿದ್ದಾರೆ. ನಿಮ್ಮವರೂ ಕುಲಕಸುಬನ್ನು ಹೊರತುಪಡಿಸಿ ಇನ್ನಿತರ ಕ್ಷೇತ್ರಗಳಲ್ಲೂ ಪ್ರವೇಶಿಸಿ ಸಾಧನೆ ಮಾಡಬೇಕು. ನಿಮ್ಮದೆ ವೃತ್ತಿಯನ್ನು ಅನುಸರಿಸುವುದಾದರೆ ಆಧುನಿಕತೆಗೆ ತಕ್ಕಂತೆ ಅದನ್ನು ಅಭಿವೃದ್ಧಿಪಡಿಸಿ, ಆಗ ಮಾತ್ರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾ ಗಲಿದ್ದು, ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಚಿಂತಿಸಿ. ಎಲ್ಲರೀತಿಯ ಸಹಕಾರ
ನೀಡುವುದಾಗಿ ವಾಗ್ಧಾನ ಮಾಡಿದರು.
Related Articles
ಕಾರ್ಯಾಗಾರ ಸದ್ಬಳಕೆ ಮಾಡಿಕೊಳ್ಳಿ: ಕುಲವೃತ್ತಿ ರಕ್ಷಣಾ ವೇದಿಕೆ ಅಧ್ಯಕ್ಷ ಹನಗೋಡು ಗೋವಿಂದರಾಜು ಮಾತನಾಡಿ, ನಮ್ಮನ್ನು ನಾವು ಅಪ್‌ಡೇಟ್ ಮಾಡಿಕೊಳ್ಳುವ ಕಾಲ ಬಂದಿದೆ. ಅದಕ್ಕಾಗಿಯೇ ವಿವಿಧ ಕಂಪನಿಗಳ ಸಹಯೋಗದಲ್ಲಿ ಆಧುನಿಕ ವೃತ್ತಿಪರತೆ ಮತ್ತು ಕೌಶಲಗಳ ಕುರಿತು ಮಾಹಿತಿ ಒದಗಿಸಲು ಕಾರ್ಯಾಗಾರ ಆಯೋಜಿಸಲಾಗಿದ್ದು ಸಮಾಜದ ಯುವಕರು ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ್, ತಾಲೂಕು ಅಧ್ಯಕ್ಷ ಗೌರೀಶ್, ಮಾಜಿ ಅಧ್ಯಕ್ಷ ದೇವರಾಜ್, ನಗರಸಭೆ ಸದಸ್ಯ ರಮೇಶ್, ಮಾಜಿ ಸದಸ್ಯ ಬಾಬು, ವೇದಿಕೆ ಸದಸ್ಯರಾದ ಸಂಜು, ಮಲ್ಲೇಶ್, ಗೋವಿಂದ್ ರಾಜ್, ಪ್ರಸಾದ್, ಮನು, ಕುಮಾರ್, ವೆಂಕಟೇಶ್, ಹರೀಶ್ ಸೇರಿದಂತೆ ಉಪವಿಭಾಗ ವ್ಯಾಪ್ತಿಯ ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಮತ್ತು ಎಚ್ .ಡಿ.ಕೋಟೆಯ ವೃತ್ತಿಪರರು, ಬ್ಯೂಟಿ ಪಾರ್ಲರ್ ಮಾಲೀಕರು ಭಾಗವಹಿಸಿದ್ದರು.