ದೇವನಹಳ್ಳಿ: ತ್ಯಾಗ, ಬಲಿದಾನಗಳ ಸಂಕೇತವಾಗಿ ಆಚರಿಸುವಂತಹ ಮುಸಲ್ಮಾನರ ಬಕ್ರೀದ್‌ಗೆ ದಿನಗಣನೆ ಆರಂಭವಾಗಿದೆ. ಬಕ್ರೀದ್ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಕುರಿ ಹಾಗೂ ಮೇಕೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ 4-5 ಸಾವಿರಕ್ಕೆ ಮಾರಾಟವಾಗುತ್ತಿದ್ದ ಕುರಿಗಳು ಈಗ 20-25 ಸಾವಿರ ರೂ.ಗಳವರೆಗೆ ಹೆಚ್ಚಿದ್ದು, ಜೋಡಿ ಕುರಿಗೆ 50 ಸಾವಿರಕ್ಕೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿವೆ.
ಮನೆಗೆ ಹೋಗಿ ಕುರಿ ವ್ಯಾಪಾರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯದವರು ಕುರಿಗಳನ್ನು ಬಲಿಕೊಡುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಕುರಿ ಬೆಲೆ ಗಗನಕ್ಕೇರುತ್ತದೆ. ಈ ಪ್ರದೇಶದಲ್ಲಿ ಮುಸ್ಲಿಮರು ಕುರಿಗಳನ್ನು ಸಾಕಾಣಿಕೆ ಮಾಡಿರುವವರ ಮನೆಗೆ ಹೋಗಿ ವ್ಯಾಪಾರ ಕುದುರಿಸಿಕೊಂಡು ಬರುತ್ತಾರೆ. ಕೊಂಡುಕೊಳ್ಳುವವರು ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆ ನಿಗದಿ ಮಾಡಿ ಮಾರಾಟ ಮಾಡಿಕೊಳ್ಳುತ್ತಾರೆ.
ಅಂಗಾಗ ವೈಫಲ್ಯ ಕುರಿ ಬಲಿ ನಿಷೇಧ: ಗಾಯವಾಗಿರುವ ಅಥವಾ ಅಂಗ ಊನತೆ ಇರುವ ಕುರಿಯನ್ನು ಬಲಿ ಕೊಡುವುದು ನಿಷೇಧ. ಕುರಿಯ ಕೊಂಬು ಮುರಿದಿದ್ದರೂ ಬಲಿ ನೀಡಲು ಅನರ್ಹವಾಗಿರುತ್ತದೆ. ಜತೆಗೆ ರೋಗಗ್ರಸ್ಥವಾಗಿರುವ ಕುರಿಯನ್ನು ಬಲಿಕೊಡುವುದಿಲ್ಲ. ಬಲಿಗಾಗಿ ಆರೋಗ್ಯವಾಗಿರುವ ಹಾಗೂ ದಷ್ಟಪುಷ್ಟವಾಗಿರುವ ಕುರಿಯನ್ನು ನೀಡಲಾಗುತ್ತದೆ ಎಂದು ಮುಸ್ಲಿಮ್ ಮುಖಂಡ ಫಸಲ್ ಪಾಷ ಹೇಳುತ್ತಾರೆ.
ಮೂರು ಭಾಗವಾಗಿ ಮಾಂಸ ವಿಂಗಡಣೆ: ಬಕ್ರೀದ್ ಹಬ್ಬದಲ್ಲಿ ಬಲಿ ನೀಡಿದ ಪ್ರಾಣಿ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಿ, ಒಂದು ಭಾಗ ಸಂಬಂಧಿಕರಿಗೆ, 2ನೇ ಭಾಗವನ್ನು ಬಡವರಿಗೆ ಹಂಚುತ್ತಾರೆ. ಮೂರನೇ ಭಾಗವನ್ನು ಮನೆಯವರಿಗೆ ಉಳಿಸಿಕೊಳ್ಳುವ ಸಂಪ್ರದಾಯವಿದೆ. ಪ್ರವಾದಿ ಇಬ್ರಾಹಿಂನ ದೈವಾಜ್ಞೆ ಪಾಲನೆ ನೆನಪನ್ನು ಬಲಿದಿನದಂದು ಪುನರಾವರ್ತನೆಗೆ ಒಳಪಡಿಸುವುದು ವಿಶೇಷ.
ಮಾರಾಟಕ್ಕೆ ಸಿದ್ಧಗೊಳಿಸುವ ಮಾಲೀಕರು: ಮಾರಾಟ ಮಾಡಲು ಹಲವು ತಿಂಗಳಿನಿಂದ ಕುರಿಗಳನ್ನು ತಯಾರು ಮಾಡಲಾಗುತ್ತದೆ. ಕೊಬ್ಬಿದ, ಹೆಚ್ಚು ತೂಕವುಳ್ಳ ಕುರಿಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ಕುರಿಯನ್ನು ಕೊಬ್ಬವಂತೆ ಮಾಡುವುದಕ್ಕೆ ಆದ್ಯತೆ ನೀಡುತ್ತೇವೆ. ಹಬ್ಬ ಒಂದು ತಿಂಗಳು ಇದ್ದಂತೆ ಕುರಿಗೆ ಹೆಚ್ಚು ಆರೈಕೆ ಮಾಡಲಾಗುತ್ತದೆ. ಪೌಷ್ಟಿಕ ಆಹಾರ, ತಾಜ ಸೊಪ್ಪು ಹೀಗೆ ಹತ್ತು ಹಲವಾರು ರೀತಿಯಲ್ಲಿ ಕುರಿ ನೋಡಿಕೊಳ್ಳಲಾಗುತ್ತದೆ. ಬಳಿಕ ಇದನ್ನು ಹಬ್ಬದಂದು ಕುರಿಯನ್ನು ಅಲ್ಲಾಹನಿಗೆ ಬಲಿ ನೀಡಲಾಗುತ್ತದೆ ಎಂದು ಜಾಮೀಯ ಮಸೀದಿ ಹೈದರ್‌ಸಾಬ್ ಹೇಳುತ್ತಾರೆ.
ತ್ಯಾಗ ಬಲಿದಾನದ ಹಬ್ಬ: ಪ್ರವಾದಿ ಇಬ್ರಾಹಿಂ, ತಮ್ಮ ಮಗ ಇಸ್ಮಾಯಿಲ್‌ನನ್ನು ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನೇ ಈದ್-ಉಲ್-ಅದಾ (ಬಕ್ರೀದ್)ಎನ್ನಲಾಗುತ್ತದೆ. ತನ್ನ ಮಗನನ್ನು ಬಲಿ ಕೊಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಸ್ಮಿಲ್ಲಾ ಎಂದು ಹೇಳಿ ಮಗನ ಕತ್ತಿನ ಮೇಲೆ ಹಲವಾರು ಬಾರಿ ಕತ್ತಿ ಹರಿಸಿದರೂ ಕತ್ತು ಕುಯ್ಯುವುದಿಲ್ಲ. ಆ ವೇಳೆಯಲ್ಲಿ ದೇವದೂತ ಜಿಬ್ರಾಯಿಲ್ ಪ್ರತ್ಯಕ್ಷರಾಗಿ ಒಂದು ದುಂಬಿ (ದಷ್ಟಪುಷ್ಟ ಕುರಿ)ಯನ್ನು ಆ ಜಾಗದಲ್ಲಿ ಇಡುತ್ತಾರೆ. ಆಗ ಶ್ರದ್ಧೆ ಹಾಗೂ ನಿಷ್ಠೆಯಿಂದ ಕುರಿ ಬಲಿ ನೀಡಿ ಇಸ್ಲಾಂ ಧರ್ಮದಲ್ಲಿ ಸುವರ್ಣ ದಿನವಾಗಿಬಿಡುತ್ತದೆ.
ಬಕ್ರೀದ್ ಹಬ್ಬದಲ್ಲಿ ಕುರಿಗಳಿಗೆ ಹೆಚ್ಚು ಬೇಡಿಕೆ. 10-15 ಕುರಿ ಸಾಕಿದ್ದೇವೆ. ಹಬ್ಬದಿಂದಾಗಿ ಆದಾಯ ಉತ್ತಮವಾಗಿದೆ. ಜತೆಗೆ ಮನೆಗೆ ಬಂದು ಕುರಿ ಖರೀದಿಸುವುದರಿಂದ ದಲ್ಲಾಳಿಗಳ ಹಸ್ತಕ್ಷೇಪ ಇರುವುದಿಲ್ಲ. ನ್ಯಾಯಯುತ ಬೆಲೆ ದೊರೆಯುತ್ತದೆ.
-ನಾರಾಯಣ ಸ್ವಾಮಿ, ಬೈಚಾಪುರ
* ಎಸ್.ಮಹೇಶ್