ಗುವಾಹಟಿ: ಅಸ್ಸಾಂನ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಂ ಸಮುದಾಯದವರು ಶೇ.35ರಷ್ಟಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಅವರು ಅಲ್ಪಸಂಖ್ಯಾತರಲ್ಲ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿಯಲ್ಲಿ ಮಾತನಾಡಿದ ಅವರು, ಅಧಿಕಾರ ಎನ್ನುವುದು ಹೊಣೆಗಾರಿಕೆಯಿಂದ ಬರುತ್ತದೆ. ರಾಜ್ಯದ ಪ್ರಗತಿಯಲ್ಲಿ ಅವರೂ ಸಹಭಾಗಿಗಳಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
“ಮುಸ್ಲಿಂ ಸಮುದಾಯ ಅಸ್ಸಾಂನ ಒಟ್ಟು ಜನಸಂಖ್ಯೆಯ ಶೇ.35ರಷ್ಟಿದೆ. ಹೀಗಾಗಿ, ಅವರು ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲ. ಇತರೆ ಅಲ್ಪಸಂಖ್ಯಾತರನ್ನು ರಕ್ಷಿಸುವುದು ಅವರ ಕರ್ತವ್ಯವಾಗಿದೆ. ರಾಜ್ಯದ ಜನರು ತಮ್ಮ ಸಂಸ್ಕೃತಿ ದಾಳಿಗೆ ಒಳಗಾಗಲಿದೆ ಎಂಬ ಭೀತಿಯಲ್ಲಿದ್ದಾರೆ. ಸೌಹಾರ್ದತೆ ಎನ್ನುವುದು ಕೊಡು-ಕೊಳ್ಳುವಿಕೆಯಂತೆ. ಮುಸ್ಲಿಮರು ಸಂಕರಿ ಮತ್ತು ಸತ್ತಿರಿಯಾ ಸಂಸ್ಕೃತಿಯ ರಕ್ಷಣೆಯ ಮಾತಾಡಲಿ. ಹತ್ತು ವರ್ಷಗಳ ಹಿಂದೆ ನಾವು ಅಲ್ಪಸಂಖ್ಯಾತರಾಗಿರಲಿಲ್ಲ. ಆದರೆ, ಈಗ ನಾವಾಗಿದ್ದೇವೆ’ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಜನರು ಪ್ರತಿಪಕ್ಷದಲ್ಲಿದ್ದಾರೆ ಮತ್ತು ಶಾಸಕರಾಗಿದ್ದಾರೆ. ಜತೆಗೆ ಅಧಿಕಾರವನ್ನೂ ಹೊಂದಿದ್ದಾರೆ. ಹೀಗಾಗಿ, ರಾಜ್ಯದ ಬುಡಕಟ್ಟು ಸಮುದಾಯದವರಿಗೆ ಮೀಸಲಾಗಿ ಇರುವ ಹಕ್ಕುಗಳನ್ನು ರಕ್ಷಿಸುವುದೂ ಅವರ ಹೊಣೆಯಾಗಿರುತ್ತದೆ ಎಂದಿದ್ದಾರೆ ಸಿಎಂ ಶರ್ಮಾ. ಅಸ್ಸಾಂನ ಬೋರಾ ಮತ್ತು ಕಲಿತಾ ಸಮುದಾಯವರು ಜಮೀನು ಹೊಂದಿರದೇ ಇದ್ದರೆ, ಇಸ್ಲಾಂ ಮತ್ತು ರಹಮಾನ್ (ಅಸ್ಸಾಂನಲ್ಲಿ ಮುಸ್ಲಿಂ ಜಾತಿಸೂಚಕ ಹೆಸರುಗಳು) ಆ ಜಮೀನುಗಳನ್ನು ಹೊಂದುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.