Advertisement

ಮುಸ್ಲಿಂ ಯಕ್ಷಗಾನ ಕಲಾವಿದನ ಕಥನ “ಬಣ್ಣ ಬಣ್ಣದ ಬದುಕು’

04:32 PM May 23, 2017 | |

ಮುಂಬಯಿ: ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆ ಸಾರುವ ಕರ್ನಾಟಕ ಕರಾವಳಿ ತೀರದ ಹೆಸರಾಂತ ಪತ್ರಕರ್ತ, ಲೇಖಕ ಇಸ್ಮಾಯಿಲ್‌ ಮೂಡುಶೆಡ್ಡೆ ನಿರ್ದೇಶನದ ಚಿತ್ರ “ಬಣ್ಣ ಬಣ್ಣದ ಬದುಕು’ ಕಳೆದ ಶುಕ್ರವಾರ (ಮೇ 19) ಕರ್ನಾಟಕ ರಾಜ್ಯದ್ಯಂತ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ. ಮುಂಬಯಿ ಮೂಡಲ ಜಗತ್ತಿನಲ್ಲಿ ಗುರುತಿಸಿಕೊಂಡಿರುವ   ಕಲಾವಿದ  ರವಿರಾಜ್‌ ಶೆಟ್ಟಿ ಈ ಚಿತ್ರದ ನಾಯಕನಾಗಿ ನಟಿಸಿದ್ದು ಈಗಾಗಲೇ ಒಂದೆರಡು ತುಳು ಚಿತ್ರಗಳಲ್ಲಿ ಅಭಿನಯಿಸಿರುವ ರವಿರಾಜ್‌ ಶೆಟ್ಟಿ ಮೂಲತಃ  ಕರಾವಳಿಯ ಮಲೆನಾಡಿನ ಅರಳು ಪ್ರತಿಭೆ.

Advertisement

ಆರಂಭದಲ್ಲಿ ಮುಸ್ಲಿಂ ಯುವಕನ ಪಾತ್ರ ಮಾಡೋದು ಹೇಗೆ ಎಂದು ಹೆದರಿದ್ದೆ. ಆದರೆ ಈ ಚಿತ್ರದ ಕಥೆ ನನ್ನನ್ನು ತುಂಬಾ ಆಕರ್ಷಿಸಿತು ಎಂದು ಪತ್ರಕರ್ತರನ್ನುದ್ದೇಶಿಸಿ ರವಿರಾಜ್‌ ಹೇಳಿದರು. ಚಿತ್ರದ ಬಿಡುಗಡೆಯ ಕುರಿತಂತೆ “ಬಣ್ಣ ಬಣ್ಣದ ಬದುಕು’ ಚಿತ್ರ ತಂಡ ತನ್ನ ಅನುಭವಗಳನ್ನು ಹಂಚಿಕೊಂಡಿತು.

ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಇಸ್ಮಾಯಿಲ್‌ ಮೂಡುಶೆಡ್ಡೆ ಮಾತನಾಡುತ್ತ, ಕರಾವಳಿ ಭಾಗದ ಓರ್ವ ಮುಸ್ಲಿಂ ಯಕ್ಷಗಾನ ಕಲಾವಿದನ ಜೀವನದ ಕಥೆ. ಮಂಗಳೂರು ಭಾಗದಲ್ಲಿ ಕೋಮು ಗಲಭೆ ನಡೆಯುತ್ತಿದ್ದ ಸಮಯದಲ್ಲಿ ಮುಸ್ಲಿಂ ಕಲಾವಿದನಿಂದ ರಾಮ, ಕೃಷ್ಣನ ಪಾತ್ರಗಳನ್ನು ಮಾಡಲು ಬಿಡುವರೋ ಇಲ್ಲವೋ ಎಂಬುದನ್ನು ಹೇಳುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಳೆದ ಹಲವಾರು ತಿಂಗಳಿಂದ ಅಸೌಖ್ಯದಿಂದ ಬಳಲುತ್ತಿರುವ ನಟ ಸತ್ಯಜಿತ್‌ ಕೂಡ ಈ ಚಿತ್ರದಲ್ಲಿ ಅಭಿನಯಿಸಿರುವುದು ಅಭಿಮಾನವೆನಿಸಿದೆ. ಅಲ್ಲದೆ, ಈ ತರದ ಸಿನಿಮಾಗಳನ್ನು ನಿರ್ಮಿಸಲು ನಿರ್ಮಾಪಕರ ಸಹಕಾರ ತುಂಬಾ ಮುಖ್ಯ. ನಿರ್ಮಾಣ ಹಂತದಲ್ಲಿ ನಿರ್ಮಾಪಕ ಕೃಷ್ಣನಾಯ್ಕ ಅವರು ತುಂಬಾ ಪ್ರೋತ್ಸಾಹ ಹಾಗೂ ಉತ್ತೇಜನ ಕೊಟ್ಟಿದ್ದಾರೆ. ಅಲ್ಲದೆ ನನ್ನ ಸ್ನೇಹಿತರು ಕೂಡ ಬೆಂಬಲಿಸಿದ್ದಾರೆ ಎಂದು ಇಸ್ಮಾಯಿಲ್‌ ಹೇಳಿದರು.

ಈ ಚಿತ್ರದಲ್ಲಿ ಹಿರಿಯ ನಟ ಸತ್ಯಜಿತ್‌ ಬಹುಮುಖ್ಯ ಪಾತ್ರವೊಂದರಲ್ಲಿ ಕಾಣಿಸಿ

Advertisement

ಕೊಂಡಿದ್ದು, ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ಅನಂತರ ಸತ್ಯಜಿತ್‌ ಅನಾರೋಗ್ಯಕ್ಕೆ ತುತ್ತಾಗಿ ತಮ್ಮ ಕಾಲು  ಕಳೆದುಕೊಳ್ಳ

ಬೇಕಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕೃಷ್ಣ ನಾಯಕ್‌ ಅವರು ಸತ್ಯಜಿತ್‌ ಅವರ ವೈದ್ಯಕೀಯ ಖರ್ಚಿಗೆಂದು ಎರಡೂವರೆ ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿರುವ ಬಗ್ಗೆ ಸ್ಮರಿಸಿದ ಅವರು,  ಈ ಚಿತ್ರದ ನಿರ್ಮಾಪಕ   ಅನಾರೋಗ್ಯದ ಕಾರಣ ಇಂದು ನಿರ್ಮಾಪಕ ಕೃಷ್ಣನಾಯ್ಕ ಅವರು ಹಾಜರಿಲ್ಲ ಆದರೂ ಅವರು ನನ್ನ ಪಾಲಿನ ದೇವರು ಎಂದೂ ಇಸ್ಮಾಯಿಲ್‌ ತಿಳಿಸಿದರು.

ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿ, ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿರ್ಮಾಪಕರು ತುಂಬಾ ಸಹಕಾರ ನೀಡಿದರು. ಅಲ್ಲಿನ ಜನ ಕೂಡ ತಮ್ಮ ಮನೆಯವರ ಥರ ಎಲ್ಲಾ ಕಲಾವಿದರನ್ನು ಆತ್ಮೀಯತೆಯಿಂದ ನೋಡಿಕೊಂಡರು ಎಂದು ಹೇಳಿದರು. ಅಂತೆಯೇ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಿಯಾ ತನ್ನ ಪಾತ್ರದ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು.

ಕಿರುತೆರೆ ನಟಿ ಅಪೂರ್ವಶ್ರೀ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ತುಳು ನಟಿ ಅನ್ವಿತಾ ಸಾಗರ ಈ ಚಿತ್ರದ ನಾಯಕಿ ಉಳಿದ ಪಾತ್ರವರ್ಗಗಳಲ್ಲಿ ರಮೇಶ್‌ ಭಟ್‌, ಗೋಪಿನಾಥ್‌ ಭಟ್‌ ಅಭಿನಯಿಸಿದ್ದಾರೆ. ಯಕ್ಷಗಾನ ಭಾಗವತ ಪಟ್ಲ ಸತೀಶ್‌ ಶೆಟ್ಟಿ 

ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ.  ಶ್ರೀ ಮುತ್ತುರಾಮ್‌ ಕ್ರಿಯೇಷನ್ಸ್‌ ಬ್ಯಾನರ್‌ನಡಿ ಕೃಷ್ಣ ನಾಯ್ಕ ಅವರು ನಿರ್ಮಿಸಿರುವ ಈ 
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಇಸ್ಮಾಯಿಲ್‌ ಮೂಡುಶೆಡ್ಡೆ ಅವರು ನಿರ್ದೇಶನ ಮಾಡಿದ್ದಾರೆ.

ಸಂಘಟಕ ಸುರೇಶ್‌ ಶೆಟ್ಟಿ ಯೆಯ್ನಾಡಿ ಮುಂದಾಳತ್ವದಲ್ಲಿ ಇದೇ ಜೂನ್‌ 2 ರಂದು ಶುಕ್ರವಾರ ಮುಂಬಯಿಯಲ್ಲಿನ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ ಎಂದು ಚಿತ್ರದ ರೂವಾರಿ ಇಸ್ಮಾಯಿಲ್‌ ಮೂಡುಶೆಡ್ಡೆ ತಿಳಿಸಿದ್ದಾರೆ.

ಚಿತ್ರ ಬಿಡುಗಡೆ ಕುರಿತ ಪತ್ರಿಕಾಗೋಷ್ಟಿಯಲ್ಲಿ ಇಸ್ಮಾಯಿಲ್‌ ಮೂಡುಶೆಡ್ಡೆ, ಕರ್ನಿರೆ ವಿಶ್ವನಾಥ್‌ ಶೆಟ್ಟಿ, ಪಟ್ಲ ಸತೀಶ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಯೆಯ್ನಾಡಿ ಮತ್ತಿತರರು ಹಾಜರಿದ್ದರು.

 ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next