ಲಕ್ನೋ: ಅಯೋಧ್ಯೆಯ ಐತಿಹಾಸಿಕ ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶವೇ ಕಾಯುತ್ತಿದ್ದು, ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮರು, ಸಿಕ್ಖರು, ಬೌದ್ಧರು, ಕ್ರಿಶ್ಚಿಯನ್ನರೂ ಈ ಸಮಾರಂಭವನ್ನು ಸಂಭ್ರಮಿಸಲು ಯೋಜಿಸುತ್ತಿದ್ದಾರೆ. ಈ ನಡುವೆಯೇ ಉತ್ತರ ಪ್ರದೇಶದ ವಾರಾಣಸಿಯ ಇಬ್ಬರು ಮಹಿಳೆಯರು ಅಯೋಧ್ಯೆಯಿಂದಲೇ ರಾಮ ಜ್ಯೋತಿ ತಂದು ಮುಸಲ್ಮಾನರಿರುವ ಪ್ರತೀ ನಗರಗಳಲ್ಲಿ ಸಂಚರಿಸಿ ರಾಮ ಜ್ಯೋತಿಯನ್ನು ಪಸರಿಸಲು ಮುಂದಾಗಿದ್ದಾರೆ. ಈ ಮೂಲಕ ಶ್ರೀರಾಮ ನಮ್ಮ ಪೂರ್ವಜ ಹಾಗೂ ಪ್ರತಿಯೊಬ್ಬ ಭಾರತೀಯನ ಡಿಎನ್‌ಎ ಒಂದೇ ಎಂಬ ಸ್ಪಷ್ಟ ಸಂದೇಶ ಸಾರುವುದಾಗಿ ಹೇಳಿದ್ದಾರೆ.
ವಾರಾಣಸಿ ನಿವಾಸಿಗಳಾದ ನಜೀನ್ ಅನ್ಸಾರಿ ಹಾಗೂ ನಜ್ಮಾ ಪರ್ವೀನ್ ಎಂಬ ಮುಸ್ಲಿಂ ಮಹಿಳೆಯರು ರಾಮ ಜ್ಯೋತಿಯನ್ನು ತರಲು ಅಯೋಧ್ಯೆಗೆ ತೆರಳಿದ್ದು, ಪಾತಾಳ್‌ಪುರಿ ಮಠದ ಮಹಂತರಾದ ಬಾಲಕ್ ದಾಸ್ ಹಾಗೂ ದೊಮ್‌ರಾಜ್ ಓಂ ಚೌಧರಿ ಅವರ ನೇತೃತ್ವದಲ್ಲಿ ಪಯಣಕ್ಕೆ ಶನಿವಾರ ಚಾಲನೆ ದೊರೆತಿದೆ. ಅಯೋಧ್ಯೆಯಲ್ಲಿ ಮಹಂತರಾದ ಶಂಭು ದೇವ ಆಚಾರ್ಯರು ರಾಮಜ್ಯೋತಿಯನ್ನು ಮಹಿಳೆಯರಿಗೆ ಹಸ್ತಾಂತರಿಸಲಿದ್ದಾರೆ. ರವಿವಾರ ರಾಮ ಜ್ಯೋತಿಗಳು ವಾರಾಣಸಿ ತಲುಪಲಿದ್ದು, ಜ.21ರಿಂದ ರಾಮಜ್ಯೋತಿಯನ್ನು ಪಸರಿಸುವ ಕಾರ್ಯ ಆರಂಭವಾಗಲಿದೆ. ಅದರೊಂದಿಗೆ ಅಯೋಧ್ಯೆಯ ಸರಯೂ ನದಿಯ ಪವಿತ್ರ ನೀರು ಹಾಗೂ ಮಣ್ಣನ್ನು ಕೂಡ ಮಹಿಳೆಯರು ತರಲಿದ್ದಾರೆ. ಮುಸ್ಲಿಂ ಸಮುದಾಯದವರೇ ಈ ರಾಮ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ.
ಯಾವುದೇ ವ್ಯಕ್ತಿ ತನ್ನ ಧರ್ಮವನ್ನು ಬದ ಲಿಸಬಹುದೇ ವಿನಃ ಪೂರ್ವಜರನ್ನಲ್ಲ. ರಾಮ ನಮ್ಮ ಪೂರ್ವಜ. ಮುಸಲ್ಮಾನರಿಗೆ ಮೆಕ್ಕಾ ಹೇಗೋ ಹಾಗೆಯೇ ಭಾರತದ ಸಂಸ್ಕೃತಿ ಮೇಲೆ ನಂಬಿಕೆ ಹೊಂದಿರುವವರಿಗೆ, ಅಯೋಧ್ಯೆ ಪುಣ್ಯಧಾಮವಾಗಿದೆ ಎಂದು ನಜ್ಮಾ ಪರ್ವೀನ್ ಹೇಳಿದ್ದಾರೆ.
ಯಾರೀ ಮಹಿಳೆಯರು ? :
ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಸಂಘರ್ಷ ನಿರ್ವಹಣೆ ವಿಚಾರದ ಕುರಿತು ಅಧ್ಯಯನ ನಡೆಸುತ್ತಿರುವ ನಜ್ಮಾ ಪರ್ವೀನ್ ಹನುಮಾನ್ ಚಾಲೀಸಾ ಹಾಗೂ ರಾಮ ಚರಿತ ಮಾನಸವನ್ನು ಉರ್ದುಗೆ ಭಾಷಾಂತರಿಸಿ ಖ್ಯಾತಿ ಗಳಿಸಿದ್ದರು. ಅಲ್ಲದೇ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಏಕತೆ ಮತ್ತು ಶಾಂತಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರನ್ನು ಕುರಿತಂತೆ ಪಿಎಚ್‌ಡಿ ಅಧ್ಯಯನ ಮಾಡಿದ ಹೆಗ್ಗಳಿಕೆಯೂ ಇವರಿಗಿದೆ. ಇನ್ನು ಮುಸ್ಲಿಂ ಮಹಿಳಾ ಫೌಂಡೇಶನ್‌ನ ಅಧ್ಯಕ್ಷೆಯಾದ ನಜೀನ್ ಅನ್ಸಾರಿ ಅವರು 2006ರಲ್ಲಿ ಸಂಕಟ ಮೋಚನ್ ದೇವಸ್ಥಾನದ ಮೇಲೆ ಬಾಂಬ್ ದಾಳಿ ನಡೆದು ಕೋಮು ಸಂಘರ್ಷ ಶುರುವಾಗಿದ್ದ ಸಂದರ್ಭದಲ್ಲಿ 70 ಮುಸ್ಲಿಂ ಮಹಿಳೆಯರೊಟ್ಟಿಗೆ ದೇವಸ್ಥಾನಕ್ಕೆ ತೆರಳಿ ಹನುಮನ್ ಚಾಲೀಸಾ ಪಠಿಸಿ ಕೋಮುಸೌಹಾರ್ದಕ್ಕೆ ಕರೆ ನೀಡಿದ್ದರು.