Advertisement

ದೇವಸ್ಥಾನಕ್ಕೆ ಶ್ರೀಕೃಷ್ಣನ ವರ್ಣಚಿತ್ರ ಉಡುಗೊರೆ |ಮುಸ್ಲಿಂ ಯುವತಿಯ ಕನಸು ನನಸು

03:58 PM Sep 29, 2021 | Team Udayavani |

ಕೋಯಿಕ್ಕೋಡ್ : ದೇವರನಾಡು ಕೇರಳದ ಮುಸ್ಲಿಂ ಯುವತಿ ಜಸ್ನಾ ಸಲೀಂ ಅವರ ಬಹುದಿನಗಳ ಕನಸು ಇಂದು ಈಡೇರಿದೆ.

Advertisement

ಕಳೆದ ಕೆಲ ವರ್ಷಗಳ ಹಿಂದೆ ಯುವತಿ ಜಸ್ನಾ ಅವರ ಹೆಸರು ಎಲ್ಲೆಡೆ ಕೇಳಿ ಬಂದಿತ್ತು. ಅದಕ್ಕೆ ಕಾರಣ ಅವರು ಬಿಡಿಸಿದ ವರ್ಣಚಿತ್ರಗಳು. ದೇವರ ಭಾವಚಿತ್ರಗಳ ಪೆಂಟಿಂಗ್ ಈಕೆಗೆ ಅಚ್ಚುಮೆಚ್ಚು. ಕಳೆದ 6 ವರ್ಷಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ವಿವಿಧ ದೇವರ ಕಲಾಕೃತಿಗಳನ್ನು ಕುಂಚದಲ್ಲಿ ಅರಳಿಸಿದ್ದಾರೆ. ತರಬೇತಿ ಪಡೆಯದೆ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿರುವ ಜಸ್ನಾ ಅವರಲ್ಲಿ ಬಹುದಿನಗಳ ಆಸೆಯೊಂದಿತ್ತು. ಅದು ಇದೀಗ ಈಡೇರಿದೆ.

ಇದುವರೆಗೆ ಅವರು ರಚಿಸಿದ ವರ್ಣಚಿತ್ರಗಳಲ್ಲಿ ಹಿಂದೂ ದೇವರುಗಳ ಭಾವಚಿತ್ರಗಳೇ ಹೆಚ್ಚು. ತಾವು ಮಾಡಿದ ಕೃಷ್ಣನ ಪೆಂಟಿಂಗ್‍ನ್ನು ದೇವಸ್ಥಾನಕ್ಕೆ ನೀಡಬೇಕೆನ್ನುವುದು ಈಕೆಯ ಬಯಕೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿ ಬಂದಿದ್ದು ಭಾನುವಾರ ಉಲನಾಡು ಗ್ರಾಮದ ಶ್ರೀಕೃಷ್ಣದೇವಸ್ಥಾನಕ್ಕೆ ತನ್ನ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಜಸ್ನಾ, “ಶ್ರೀಕೃಷ್ಣನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದು ಮತ್ತು ಆ ದೇವರ ಮುಂದೆ ನನ್ನ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡುವುದು ನನ್ನ ದೊಡ್ಡ ಕನಸಾಗಿತ್ತು. ಪಂಡಲಂನ ಉಲನಾಡು ಶ್ರೀಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ನನ್ನ ಕನಸು ನನಸಾಗಿದ್ದಕ್ಕೆ ತುಂಬಾ ಸಂತೋಷವಾಯಿತು. ಈ ಸಂಭ್ರಮವನ್ನು ವ್ಯಕ್ತಪಡಿಸಲು ನನಗೆ ಪದಗಳು ಸಿಗುತ್ತಿಲ್ಲ. ಈ ದೇವಸ್ಥಾನದ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು “ಎಂದು ಜಸ್ನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next