ಕಲಬುರಗಿ: ಕೋವಿಡ್ -19 ಸೋಂಕು ನಿಯಂತ್ರಣ ನಿಟ್ಟಿನಲ್ಲಿ ರಂಜಾನ್ ಹಬ್ಬದವರಿಗೆ ಅಂಗಡಿಗಳನ್ನು ತೆರೆಯದಿರಲು ಕಲಬುರಗಿ ನಗರದ ಮುಸ್ಲಿಂ ವ್ಯಾಪಾರಿಗಳ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೇ, ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸದಂತೆಯೂ ಸಮುದಾಯದ ಜನರಲ್ಲಿ ಮನವಿ ಮಾಡಲಾಗಿದೆ.
ದೇಶದಲ್ಲಿ ಮಹಾಮಾರಿ ಕೋವಿಡ್-19 ವ್ಯಾಪಕವಾಗಿ ಹರಡಿ ಸಾವಿರಾರು ಜನರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೋವಿಡ್ ಭೀತಿ ಮತ್ತು ಲಾಕ್ ಡೌನ್ ದಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ, ದಿನದಿಂದ ದಿನಕ್ಕೆ ಸೋಂಕು ಹರಡುತ್ತಿದೆ. ಹೀಗಾಗಿ ಹೆಚ್ಚು ಜನರು ಸೇರುವುದರಿಂದ ಮತ್ತಷ್ಟು ಅಪಾಯಕ್ಕೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ ಎಂದು ವ್ಯಾಪಾರಿಗಳು ಈ ತೀರ್ಮಾನ ತೆಗೆದುಕೊಂಡಿದ್ದಾರೆ.
ಕಲಬುರಗಿ ಆರೆಂಜ್ ಝೋನ್ ನಲ್ಲಿ ಬರುವುದರಿಂದ ಸರ್ಕಾರದ ನಿಯಮಗಳ ಪ್ರಕಾರ ಬಟ್ಟೆ ವ್ಯಾಪಾರ, ಬೇಕರಿ ಮತ್ತು ಹೋಟೆಲ್ ನಲ್ಲಿ ಪಾರ್ಸೆಲ್ ಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೂ, ಮುಸ್ಲಿಂ ಧರ್ಮ ಗುರುಗಳು ಮತ್ತು ಸಮುದಾಯದ ಪ್ರಮುಖ ಮುಖಂಡರು ಹಾಗೂ ಬಟ್ಟೆ ವ್ಯಾಪಾರಿಗಳು ಒಟ್ಟಾಗಿ ಸಮಾಲೋಚನೆ ನಡೆಸಿ ಅಂಗಡಿಗಳನ್ನು ಮೇ 23ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕರ್ನಾಟಕ ಪೀಪಲ್ಸ್ ಫೋರಂ ಸಂಸ್ಥಾಪಕ ಡಾ. ಮಹ್ಮದ್ ಅಜಗರ್ ಚುಲಬುಲ್ ತಿಳಿಸಿದ್ದಾರೆ.
ಮುಸ್ಲಿಂ ಬಾಂಧವರು ಈ ಬಾರಿ ಹೊಸ ಬಟ್ಟೆ ಖರೀದಿ ಸಂಭ್ರಮದಿಂದ ಆಚರಿಸುವ ಬದಲು ವಿಪತ್ತು ಪರಿಹಾರಕ್ಕಾಗಿ ಎಲ್ಲ ಬಾಂಧವರು ಶೃದ್ಧಾಭಾವದಿಂದ ಪ್ರಾರ್ಥನೆ ಮಾಡಬೇಕು. ಅಲ್ಲದೇ ಕಷ್ಟದಲ್ಲಿ ಇರುವ ಜನರಿಗೆ ನೆರವಾಗಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಆದೇಶವನ್ನು ಪಾಲಿಸಿ, ಅತ್ಯಂತ ಸರಳವಾಗಿ ಪವಿತ್ರ ರಂಜಾನ್ ಹಬ್ಬ ಆಚರಿಸೋಣ ಎಂದು ಕರೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ನ್ಯಾಯವಾದಿ ವಹಾಜ್ ಬಾಬಾ, ಮುಖಂಡರಾದ ನಜರ್ ಮೊಹಮ್ಮದ್ ಖಾನ್, ಇಲಿಯಾಸ್ ಸೇಠ್ ಬಾಗಬಾನ್, ಅಬ್ದುಲ್ ರಹೀಮ್ ಮಿರ್ಚಿ, ಇರ್ಫಾನ್, ಆರೀಫ್ ಅಲಿ ಮನಿಯಾರ್ ಸೇರಿದಂತೆ ಮುಂತಾದವರು ಇದ್ದರು.