ಟೆಹರಾನ್: ದಕ್ಷಿಣ ಇರಾನ್‌ನ ಪ್ರಮುಖ ಶಿಯಾ ಮುಸ್ಲಿಂ ಮಸೀದಿ ಮೇಲೆ ಬುಧವಾರ ನಡೆದ ಉಗ್ರರ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಶಿರಾಜ್ ನಗರದ ಶಾ ಚೆರಾಗ್ ನಲ್ಲಿ ಸಂಜೆಯ ಪ್ರಾರ್ಥನೆಯ ಸಮಯದಲ್ಲಿ ಶಸ್ತ್ರಸಜ್ಜಿತ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಸೀದಿಯಲ್ಲಿ ನೆರೆದಿದ್ದವರ ಮೇಲೆ ದಾಳಿಕೋರರು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಗವರ್ನರ್ ಮೊಹಮ್ಮದ್-ಹಾದಿ ಇಮಾನಿಹ್ ತಿಳಿಸಿದ್ದಾರೆ.
ಇದನ್ನೂ ಓದಿ : ರಷ್ಯಾ 400 ಇರಾನ್ ಡ್ರೋನ್‌ಗಳನ್ನು ಬಳಸಿದೆ: ವೊಲೊಡಿಮಿರ್ ಝೆಲೆನ್ಸ್ಕಿ
ಪ್ರತ್ಯಕ್ಷದರ್ಶಿಯೊಬ್ಬರು ರಾಜ್ಯ ಸುದ್ದಿ ಸಂಸ್ಥೆ ಐಆರ್‌ಎನ್‌ಎಗೆ ಸಂಜೆ ಪ್ರಾರ್ಥನೆ ಪ್ರಾರಂಭವಾಗುತ್ತಿದ್ದಂತೆ “ಮಹಿಳೆಯರ ಕೂಗು ಕೇಳಿಸಿತು” ಮತ್ತು “ಉಗ್ರರು ಮಸೀದಿ ಪ್ರವೇಶಿಸಿ ಮನಬಂದಂತೆ ಗುಂಡು ಹಾರಿಸಿದರು” ಎಂದು ಹೇಳಿದರು.
ಇರಾನಿನ ಮಾಧ್ಯಮಗಳು ಮಸೀದಿಯೊಳಗೆ ರಕ್ತಸಿಕ್ತ ದೇಹಗಳನ್ನು ಬಟ್ಟೆಯಿಂದ ಮುಚ್ಚಿರುವುದನ್ನು ತೋರಿಸುವ ಚಿತ್ರಗಳು ಮತ್ತು ವಿಡಿಯೋ ತುಣುಕಗಳನ್ನು ಪ್ರಕಟಿಸಿವೆ. ಮೃತಪಟ್ಟವರಲ್ಲಿ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.
ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿದೆ.