Advertisement

ಮುಸ್ಲಿಮರ ಧರ್ಮ ಸಮ್ಮೇಳನಕ್ಕೆ ಕಲಾದಗಿಯಲ್ಲಿ ಸಿದ್ಧತೆ

01:40 AM Feb 03, 2019 | |

ಬಾಗಲಕೋಟೆ: ಬ್ರಿಟಿಷರ ಆಳ್ವಿಕೆಯಲ್ಲಿ ಜಿಲ್ಲಾ ಕೇಂದ್ರವಾಗಿದ್ದ ತಾಲೂಕಿನ ಕಲಾದಗಿಯಲ್ಲಿ ಮುಸ್ಲಿಂ ಸಮುದಾಯದ ದಕ್ಷಿಣ ಭಾರತ ಮಟ್ಟದ ಬಡೇ ಇಜ್ತೆಮಾ (ಧರ್ಮ ಸಮ್ಮೇಳನ)ಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ.

Advertisement

ಕಲಾದಗಿಯಿಂದ 3 ಕಿ.ಮೀ. ದೂರದಲ್ಲಿರುವ ಪುನರ್‌ವಸತಿ ಕೇಂದ್ರದ ಅಕ್ಕ-ಪಕ್ಕದ ಸುಮಾರು 650 ಎಕರೆ ಕೃಷಿ ಭೂಮಿಯಲ್ಲಿ ಫೆ. 16ರಿಂದ 18ರವರೆಗೆ 3 ದಿನ ನಡೆಯುವ ಈ ಇಜ್ತೆಮಾಕ್ಕೆ ಪೂರ್ವ ಸಿದ್ಧತೆ ನಡೆದಿದೆ. 82 ಎಕರೆ ಪ್ರದೇಶದಲ್ಲಿ (25 ಲಕ್ಷ ಚದರ ಅಡಿ ಸುತ್ತಳತೆ) ಬೃಹತ್‌ ಪೆಂಡಾಲ್‌ ಹಾಕಲಾಗುತ್ತಿದೆ. ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ ಸಹಿತ ವಿವಿಧೆಡೆಯ ಮುಸ್ಲಿಂ ಸಮುದಾಯದವರು ಪಾಲ್ಗೊಳ್ಳಲಿದ್ದು, ಅವರಿಗೆ ಊಟ-ವಸತಿ ವ್ಯವಸ್ಥೆ ಕಲ್ಪಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇದೊಂದು ಧರ್ಮ ಸಮ್ಮೇಳನ. ಇಲ್ಲಿ ಘೋಷಣೆಗಳು, ಮೆರವಣಿಗೆ ಇರುವುದಿಲ್ಲ. ಕೇವಲ ಕುರಾನ್‌, ಮೊಹ್ಮದ ಪೈಗಂಬರ ಕುರಿತ ಪ್ರವಚನ ನಡೆಯುತ್ತದೆ. ಜತೆಗೆ ಮುಸ್ಲಿಂ ಬಾಂಧವರು, ಇತರೆ ಸಮಾಜ ಬಾಂಧವರೊಂದಿಗೆ ಸೌಹಾರ್ದತೆಯಿಂದ ಜೀವನ ನಡೆಸುವ ಕುರಿತು ಧರ್ಮ ಗುರುಗಳು ತಿಳಿವಳಿಕೆಯ ಬೋಧನೆ ಮಾಡುತ್ತಾರೆ. ನಿತ್ಯ ಸಾಮೂಹಿಕ ಪ್ರಾರ್ಥನೆ, ಪ್ರವಚನ ಬಿಟ್ಟರೆ ಬೇರೆ ಯಾವ ಕಾರ್ಯಕ್ರಮಗಳೂ ನಡೆಯುವುದಿಲ್ಲ. ಈ ಕುರಿತು ಕೆಲವರಿಗೆ ತಪ್ಪು ತಿಳಿವಳಿಕೆಯಿದೆ. ವಿರೋಧ ಮಾಡುವವರು, ಸ್ಥಳಕ್ಕೆ ಬಂದು ನೋಡಬೇಕು. ಈ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು, ಮಹಿಳೆಯರಿಗೆ ಪ್ರವೇಶವಿಲ್ಲ. ಯಾವುದೇ ಧರ್ಮ-ಸಮಾಜದ ಪುರುಷರು ಬಂದು ಭಾಗವಹಿಸಬಹುದು. ಉರ್ದು ಭಾಷೆಯಲ್ಲಿ ನಡೆಯುವ ಪ್ರವಚನವನ್ನು ಕನ್ನಡಕ್ಕೆ ಅನುವಾದ ಮಾಡಲೂ ವ್ಯವಸ್ಥೆ ಮಾಡಲಾಗಿದೆ ಎಂದು ಉಸ್ತುವಾರಿ ನೋಡಿಕೊಳ್ಳುತ್ತಿರುವ ಮೊಹ್ಮದಯಾಸೀನ್‌ ಮೊಮಿನ್‌ ತಿಳಿಸಿದರು.

ಲಕ್ಷಾಂತರ ಜನರಿಗಾಗಿ ಕಾರ್ಯಕ್ರಮ ನಡೆಯುವ ಬೃಹತ್‌ ಪೆಂಡಾಲ್‌ ಸುತ್ತಲಿನ ನಾಲ್ಕು ಕಡೆ ಒಟ್ಟು 2 ಸಾವಿರ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಇಂಗುಗುಂಡಿ ವ್ಯವಸ್ಥೆ ಮಾಡಿದ್ದು, 10 ಸಕ್ಕಿಂಗ್‌ ಯಂತ್ರವನ್ನೂ ತರಿಸಲಾಗುತ್ತಿದೆ. ಎಂಟು ವೈದ್ಯಕೀಯ ಕೇಂದ್ರಗಳು, 80 ಕುಡಿಯುವ ನೀರು ವಿತರಣೆ ಮಾಡುವ ಕೇಂದ್ರಗಳು, ಎರಡು ಆಂಬ್ಯುಲೆನ್ಸ್‌, 34 ಊಟದ ಸ್ಟಾಲ್‌ಗ‌ಳು, ಒಂದು ಸಾವಿರ ಚಿಕ್ಕ ಚಿಕ್ಕ ಹೊಟೇಲ್‌ಗ‌ಳು, 60 ಅಡಿ ಸುತ್ತಳತೆಯ ಎಂಟು ಕೃಷಿ ಹೊಂಡ ತೋಡಲಾಗಿದೆ. ಕುಡಿಯುವ ನೀರಿಗಾಗಿ 1 ಕೋಟಿ ರೂ. ಮೊತ್ತದ ಒಂದು ಲೀಟರ್‌ನ ಶುದ್ಧ ಕುಡಿಯುವ ನೀರಿನ ಬಾಟಲ್‌ಗ‌ಳನ್ನು ಖರೀದಿಸಲಾಗಿದೆ.

ಸಮ್ಮೇಳನಕ್ಕೆ ಕಲಾದಗಿಯ ಸುಮಾರು 78 ರೈತರ, 630 ಎಕರೆಯಷ್ಟು ಭೂಮಿಯನ್ನೇ ಬಳಕೆ ಮಾಡಲಾಗುತ್ತಿದೆ. ಈ ಭೂಮಿಯಲ್ಲಿ ಒಟ್ಟು 16 ಕೊಳವೆ ಬಾವಿಗಳಿವೆ. ಆ ನೀರನ್ನು ಎಂಟು ಕೃಷಿ ಹೊಂಡಗಳಿಗೆ ತುಂಬಿಸಿಕೊಂಡು, 3 ದಿನ ಉಪಯೋಗಿಸಲಾಗುವುದು. ಪ್ರತಿದಿನ ಶಾಖಾಹಾರಿ ಊಟ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಲ್ಲಿ ಹಾಕಲಿರುವ ಹೊಟೇಲ್‌ಗ‌ಳಿಗೂ ಮಾಂಸಾಹಾರ ನೀಡದಂತೆ ಸೂಚನೆ ನೀಡಲಾಗಿದೆ. ಒಟ್ಟಾರೆ, ಇದೊಂದು ಸೌಹಾರ್ದಯುತ ಜೀವನಕ್ಕೆ ಬೋಧನೆ ಮಾಡುವ ಧರ್ಮ ಸಮ್ಮೇಳನ ಆಗಿದೆ ಎಂದು ಮೋಮಿನ್‌ ತಿಳಿಸಿದರು.

Advertisement

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next