ಉಳ್ಳಾಲ: ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಸ್ಥಾಪಕ, ಹಿರಿಯ ಧಾರ್ಮಿಕ ವಿದ್ವಾಂಸ ಅಲ್ ಹಾಜ್ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ (73) ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾಗಿದ್ದಾರೆ.
ಅಬ್ಬಾಸ್ ಮುಸ್ಲಿಯಾರ್ ಅವರ ಪರಿಚಯ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ಎಂಬಲ್ಲಿ 1946ರ ಜನವರಿ 1ರಂದು ಮುಹಮ್ಮದ್ ಕುಂಞಿ ಬೀಫಾತಿಮಾ ಹಜ್ಜುಮ್ಮ ದಂಪತಿಯ ಪುತ್ರನಾಗಿ ಅಬ್ಬಾಸ್ ಉಸ್ತಾದ್ ಜನಿಸಿದರು.
ಹಾಕತ್ತೂರಿನಲ್ಲಿ ಅಹ್ಮದ್ ಮುಸ್ಲಿಯಾರ್ ಅವರಿಂದ ಮದ್ರಸ ಕಲಿಕೆ ಆರಂಭ. 1957ರಲ್ಲಿ ಕೊಡಂಗೇರಿಯಲ್ಲಿ ದರ್ಸ್ ಗೆ ಸೇರ್ಪಡೆಗೊಂಡು ಕೆ.ಸಿ.ಅಬ್ದುಲ್ಲಾ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. ಅಲ್ಲಿ 5 ವರ್ಷ ದರ್ಸ್ ಕಲಿತ ಬಳಿಕ ಕೇರಳದ ತಿರುಮಟ್ಟೂರಿನಲ್ಲಿ ಸಿಪಿ ಮುಹಮ್ಮದ್ ಕುಟ್ಟಿ ಮುಸ್ಲಿಯಾರ್ ರಿಂದ ಕಲಿಕೆ ಮುಂದುವರಿಕೆ. 1965ರಲ್ಲಿ ‘ಉಳ್ಳಾಲ ತಂಙಳ್’ ಎಂದೇ ಖ್ಯಾತರಾದ ಸೈಯದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್‌ರ ಬಳಿ ದರ್ಸ್ ಕಲಿಕೆ. ಬಳಿಕ ಅವರ ನಿರ್ದೇಶನದಂತೆ ದೇವ್ ಬಂದ್ ನಲ್ಲಿ ಕಾಲೇಜಿಗೆ ಸೇರ್ಪಡೆ. ಅಲ್ಲಿನ ಬಹ್ಮತುಲ್ ಇಸ್ಲಾಂ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಸ್ಥಾನದ ಜವಾಬ್ದಾರಿ.
1968ರಲ್ಲಿ ಊರಿಗೆ ಮರಳಿ ಬಂದರಲ್ಲದೆ 1969ರಲ್ಲಿ ದೇಲಂಪಾಡಿ ಮಸೀದಿಯಲ್ಲಿ ಸೇವೆ ಆರಂಭಿಸಿದರು. ಅಲ್ಲಿ 5 ವರ್ಷ ಖತೀಬ್, ಮುದರ್ರಿಸ್ ಆಗಿ ಸೇವೆ ಸಲ್ಲಿಸಿದರು. ನಂತರ ಉಜಿರೆಯಲ್ಲಿ ಸೇವೆ ಆರಂಭಿಸಿದರು. ನಂತರ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಸಿ.ಪಿ.ಮುಹಮ್ಮದ್ ಕುಂಞಿ ಮುಸ್ಲಿಯಾರ್‌ರ ಆಹ್ವಾನದ ಮೇರೆಗೆ 1975ರಲ್ಲಿ ಮಂಜನಾಡಿಯಲ್ಲಿ ಸೇವೆ ಆರಂಭ. ಮುದರ್ರಿಸ್ ಆಗಿ 21 ವರ್ಷ ಸೇವೆ ಸಲ್ಲಿಸಿದರು.
1979ರಲ್ಲಿ ಹಡಗಿನಲ್ಲಿ ಹಜ್ ಯಾತ್ರೆ ಮಾಡಿದ್ದರಲ್ಲದೆ 1990ರಲ್ಲಿ ತನ್ನ ತಾಯಿಯ ಕೋರಿಕೆಯಂತೆ ಹಜ್ ಯಾತ್ರೆ ಮಾಡಿದರು. 1972ರಲ್ಲಿ ಮಂಜನಾಡಿ ಉಸ್ತಾದ್ ರ ಮೂರನೇ ಮಗಳು ಆಸಿಯಾರನ್ನು ಮದುವೆಯಾದರು. ಉಳ್ಳಾಲ ತಂಙಳ್ ನಿಖಾಹ್ ನೇತೃತ್ವ ವಹಿಸಿದ್ದರು. ಈ ದಂಪತಿಗೆ 5 ಗಂಡು ಮತ್ತು 3 ಹೆಣ್ಮಕ್ಕಳಿದ್ದಾರೆ.
1980ರಲ್ಲಿ ಕಾಞಂಗಾಡಿನ ಪಯಕಡಪ್ಪುರಂಬ ಎಂಬಲ್ಲಿ ಮಾವನ ಮನೆಯ ಬಳಿಯೇ ಸ್ವಂತ ಮನೆ ನಿರ್ಮಿಸಿದರು.
ಸಂತಾಪ
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದ ಮಹಾನ್ ಚೇತನ ಮಂಜನಾಡಿ ಅಬ್ಬಾಸ್ ಉಸ್ತಾದ್ ಅವರ ನಿಧನ ವಾರ್ತೆ ತಿಳಿದು ಅತೀವ ದುಖವಾಯಿತು. ನಾನು ಶಾಸಕನಾಗಿರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಜನಾಡಿ ಪ್ರದೇಶದಲ್ಲಿ ಅಲ್ ಮದೀನಾ ಎಂಬ ಹೆಸರಲ್ಲಿ ಹಲವಾರು ಧಾರ್ಮಿಕ, ಲೌಕಿಕ ವಿದ್ಯಾಸಂಸ್ಥೆ ಹಾಗೂ ಅನಾಥಾಲಯವನ್ನು ಮುನ್ನಡೆಸುತ್ತಿದ್ದ ಉಸ್ತಾದರು ನಾಡಿನ ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ. ದೇವರು ಅವರ ಪಾರತ್ರಿಕ ಜೀವನವನ್ನು ಸುಗಮಗೊಳಿಸಲಿ. ಕುಟುಂಬಿಕರಿಗೆ, ಉಲಮಾ ಉಮರಾಗಳಿಗೆ, ಶಿಷ್ಯ ವರ್ಗಕ್ಕೆ ದುಖ ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುವೆನು.
- ಯು.ಟಿ.ಖಾದರ್
ಶಾಸಕರು ಮತ್ತು ಮಾಜಿ ಸಚಿವರು.