ರೋಹಟಕ್ : ಗೋರಕ್ಷರೆನಿಸಿಕೊಂಡವರು ಜನರ ಮೇಲೆ ಅಲ್ಲಲ್ಲಿ ದಾಳಿ ನಡೆಸುತ್ತಿರುವ ಸುದ್ದಿಗಳನ್ನು ನಾವು ಕೇಳುತ್ತಿರುವ ನಡುವೆಯೇ, ಇಲ್ಲಿನ ಮುಸ್ಲಿಂ ತಂದೆಯೊಬ್ಬರು ತಮ್ಮ ಮಗಳಿಗೆ ಮದುವೆಯ ಸಂದರ್ಭದಲ್ಲಿ ದನವೊಂದನ್ನು ವಿಶೇಷ ಉಡುಗೊರೆಯಾಗಿ ಕೊಟ್ಟಿರುವ ಅಪರೂಪದ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ .
ಟೈಮ್ಸ್ ಆಫ್ ಇಂಡಿಯಾ ಮಾಡಿರುವ ವರದಿಯ ಪ್ರಕಾರ ಸೋನಿಪತ್ ಜಿಲ್ಲೆಯ ಖರ್‌ಖೊಡ್ಡ ಗ್ರಾಮದ ನಿವಾಸಿಯಾಗಿರುವ ನೂರ್ ಖಾನ್ ಅವರು ತಮ್ಮ ಮಗಳು ಗುಲ್‌ಷಾನಾ ಳ ನಿಕಾಹ್ ಸಂದರ್ಭದಲ್ಲಿ ದನವನ್ನು ಉಡುಗೊರೆಯಾಗಿ ನೀಡಿದರು. ದೇಶೀ ತಳಿಯ ದನದ ಈ ಕರುವಿಗೆ ಏನಿಲ್ಲವೆಂದರೂ 11,000 ರೂ.ಗಳಿಂದ 15,000 ರೂ.ಗಳ ಬೆಲೆ ಇದೆ.
“ನನ್ನ ಮಗಳು ಗುಲ್‌ಷಾನಾ ದನ-ಕರುಗಳನ್ನು ತುಂಬಾ ಪ್ರೀತಿಸುತ್ತಾಳೆ. ತಾನು ಹೋಗಿ ಬರುವ ಹಾದಿಯಲ್ಲಿ ಯಾವುದೇ ದನ ಕರುಗಳನ್ನು ಕಂಡರೂ ಅವುಗಳಿಗೆ ತಿನ್ನಲು ಬೆಲ್ಲ ಇತ್ಯಾದಿಗಳನ್ನು ಕೊಡುತ್ತಿದ್ದಳು. ಹಾಗಾಗಿ ಅವಳಿಗೆ ಮನೆಯ ದನದ ಕರುವನ್ನೇ ಮದುವೆ ಸಂದರ್ಭದಲ್ಲಿ ಉಡುಗೊರೆಯಾಗಿ ಕೊಟ್ಟೆ’ ಎಂದು ತಂದೆ ನೂರ್ ಖಾನ್ ಹೇಳುತ್ತಾರೆ.
ಮಗಳಿಗೆ ಮದುವೆ ಸಂದರ್ಭದಲ್ಲಿ ದನವನ್ನು ಉಡುಗೊರೆಯಾಗಿ ಕೊಟ್ಟ ಪ್ರಸಂಗ ಬಹುಷಃ ಇದೇ ಮೊದಲಿರಬೇಕು ಎನ್ನಲಾಗಿದೆ.
ತನ್ನ ಮನೆಯದ ದನದ ಕರುವನ್ನೇ ತನ್ನ ತಂದೆ ತನಗೆ ನಿಕಾಹ್‌ನಲ್ಲಿ ಉಡುಗೊರೆಯಾಗಿ ಕೊಟ್ಟಿರುವುದು ಗುಲ್‌ಗಾನಾಗೆ ತುಂಬಾ ಖುಷಿ ಕೊಟ್ಟಿದೆ. ನಾನಿದನ್ನು ಗಂಡನ ಮನೆಯಲ್ಲಿ ಚೆನ್ನಾಗಿ ಸಾಕುವೆ; ಅಲ್ಲಿ ಎಲ್ಲರನ್ನೂ ಆ ಮೂಲಕ ಖುಷಿಪಡಿಸುವೆ ಎಂದಾಕೆ ಹೇಳುತ್ತಾಳೆ.