ಹುಬ್ಬಳ್ಳಿ: ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕುರಿತಾಗಿ ಪರ-ವಿರೋಧ ಕೂಗು ಜೋರಾಗಿದೆ. ಆಂಧ್ರಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ಮೂರ್‍ನಾಲ್ಕು ತಲೆಮಾರಿನಿಂದ ದೇಸಿ ಗೋವುಗಳ ಪೋಷಣೆಯಲ್ಲಿ ತೊಡಗಿದ್ದು, ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕರ್ನಾಟಕದ ಸ್ನೇಹಿತರೊಬ್ಬರ ಜತೆ ಸೇರಿ ಬಳ್ಳಾರಿ ಬಳಿ ಗೋಶಾಲೆ ಹಾಗೂ ಉತ್ಪನ್ನಗಳ ಘಟಕ ಆರಂಭಿಸಿದೆ.
ಬರದಿಂದಾಗಿ ಮೇವಿನ ಕೊರತೆ ಕಂಡು ಬಂದರೂ ಗೋವುಗಳನ್ನು ಮಾರಾಟ ಇಲ್ಲವೇ ಕಸಾಯಿಖಾನೆಗೆ ನೀಡದೆ ಸಂಕಷ್ಟಗಳ ಸವಾಲುಗಳನ್ನು ಎದುರಿಸಿ ಮಕ್ಕಳಂತೆ ಪೋಷಣೆಯ ಹೃದಯವಂತಿಕೆ ತೋರಿದೆ. ಮಕ್ಕಳಿಂದ ವೃದ್ಧರವರೆಗೆ ಇಡೀ ಕುಟುಂಬವೇ ಗೋ ಮಾತೆ ಸೇವೆಗೆ ಸಮರ್ಪಿಸಿಕೊಂಡಿದೆ. ಆಂಧ್ರಪದೇಶದ ಕರ್ನೂಲು ಜಿಲ್ಲೆಯ ಪತ್ತಿಕೊಂಡಂ ಬಳಿಯ ದೇವರಕೊಂಡ ಮಂಡಲದ ಬಂಟುಪಲ್ಲಿ ಗ್ರಾಮದಲ್ಲಿ ಚಾಂದ್‌ಬಾಷಾ ಅವರ ಇಡೀ ಕುಟುಂಬ ಓಂಗೋಲ್ ತಳಿ ಸೇರಿದಂತೆ ವಿವಿಧ ಜಾತಿ ದೇಸಿ ಹಸುಗಳನ್ನು ಪೋಷಿಸುತ್ತಿದೆ. ರೈತರು ಯಾರಾದರೂ ತಮ್ಮ ಬರಡಾದ ಹಸುಗಳನ್ನು ನೀಡಿದರೂ ಅವುಗಳನ್ನು ತೆಗೆದುಕೊಂಡು ಪೋಷಣೆ ಕಾರ್ಯದಲ್ಲಿ ತೊಡಗಿದೆ.
400 ಗೋವುಗಳ ಸಾಕಣೆ: ಚಾಂದ್‌ಬಾಷಾ ಪದವೀಧರರಾಗಿದ್ದು, ತಮ್ಮ ತಾತ, ಮುತ್ತಾತನ ಕಾಲದಿಂದಲೂ ಬಂದ ದೇಸಿ ಗೋವುಗಳ ಸಾಕಣೆ ಮುಂದುವರೆಸಿದ್ದಾರೆ, ಅಭಿವೃದ್ಧಿಪಡಿಸಿದ್ದಾರೆ, ವಿಸ್ತರಿಸಿದ್ದಾರೆ, ಗೋ ಆಧಾರಿತ ಉತ್ಪನ್ನಗಳ ತಯಾರಿಕೆ, ಮೌಲ್ಯವರ್ಧನೆ ಕಾರ್ಯದಲ್ಲಿ ತೊಡಗಿದ್ದಾರೆ. ತಮ್ಮ ಮಕ್ಕಳನ್ನು ಗೋ ಸೇವೆಯಲ್ಲಿ ತೊಡಿಸುವ ಮೂಲಕ ಕುಟುಂಬ ಪರಂಪರೆ ಮುಂದುವರೆಸಿದ್ದಾರೆ. ಪ್ರಸ್ತುತ ಚಾಂದ್‌ಬಾಷಾ ಕುಟುಂಬದವರು ಸುಮಾರು 350-400 ದೇಸಿ ಗೋವುಗಳ ಸಾಕಣೆಯಲ್ಲಿ ತೊಡಗಿದ್ದಾರೆ. ಆರ್ಥಿಕವಾಗಿ ಸಂಕಷ್ಟವಿದ್ದರೂ, ದೇಸಿ ಹಸುಗಳ ವಿಚಾರದಲ್ಲಿ ಹೃದಯ ಶ್ರೀಮಂತಿಕೆ ತೋರಿದ್ದಾರೆ. ಬರಡಾದ ಹಸುಗಳನ್ನು ಕಸಾಯಿಖಾನೆಗೆ ನೀಡುವ ಸ್ಥಿತಿಯಲ್ಲಿ, ಹಸುಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಕರ್ನೂಲ್ ಜಿಲ್ಲೆಯ ಬಂಟುಪಲ್ಲಿ ಗ್ರಾಮ ಬರ ಪೀಡಿತ ಪ್ರದೇಶವಾಗಿದ್ದು, ಕಳೆದ ಐದಾರು ವರ್ಷಗಳ ಹಿಂದೆ ಕಂಡು ಬಂದ ತೀವ್ರ ಬರ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಹಸುಗಳಿಗೆ ಮೇವಿನ ಕೊರತೆ ಎದುರಾದಾಗ ಹಸುಗಳಿಗೆ ಆಹಾರ ಹೇಗೆ ಎಂಬ ಚಿಂತೆ ಎದುರಾಗಿತ್ತು. ಆದರೂ ಎದೆಗುಂದದೆ ಬಳ್ಳಾರಿ ಇನ್ನಿತರ ಕಡೆಯಲ್ಲಿ ಸ್ನೇಹಿತರಿಂದ ಭತ್ತದ ಹುಲ್ಲು ತೆಗೆದುಕೊಂಡು ಹೋಗಿ ಹಸುಗಳನ್ನು ಸಾಕುವ ಸಾಹಸ ಮೆರೆದಿದ್ದಾರೆ.
ಬಳ್ಳಾರಿಯಲ್ಲಿ ಗೋ ಸಾಕಣೆ: ಚಾಂದ್‌ಬಾಷಾ ಆಂಧ್ರಪ್ರದೇಶದವರಾಗಿದ್ದರೂ ಬಳ್ಳಾರಿಯೊಂದಿಗೆ ನಂಟು ಸಾಕಷ್ಟಿದೆ. ಸ್ನೇಹಿತರ ದೊಡ್ಡ ಗುಂಪು ಇದೆ.ಸ್ನೇಹಿತ ಹಾಗೂ ಸಾಫ್ಟ್ವೇರ್ ಕಂಪನಿ ಉದ್ಯೋಗಿ ಅಶೋಕ ಕುಮಾರ ಎನ್ನುವವರು ಉದ್ಯೋಗತೊರೆದು ಕೃಷಿ, ಗೋ ಸಾಕಣೆಗೆ ಮುಂದಾಗಿದ್ದರು. ಚಾಂದ್‌ಬಾಷಾ ಅವರು ದೇಸಿ ಗೋವುಗಳ ಸಾಕಣೆಗೆ ಪ್ರೇರಣೆ ನೀಡಿ, ಮಹತ್ವದ ಸಾಥ್ ನೀಡಿದ್ದರು. ಇದರಿಂದ ಇದೀಗ ಬಳ್ಳಾರಿ ಬಳಿ ಸುಮಾರು 100 ಹಸುಗಳ ಸಾಕಣೆ ಕಾರ್ಯ ನಡೆಯುತ್ತಿದೆ. ಚಾಂದ್‌ಬಾಷಾ ಅವರ ಕುಟುಂಬ ಕೈಗೊಂಡ ಗೋ ಆಧಾರಿತ ಉತ್ಪನ್ನಗಳ ಕಾಯಕವನ್ನು ಅಶೋಕ ಕುಮಾರ ಬಳ್ಳಾರಿಯಲ್ಲಿ ಆರಂಭಿಸುವ ಮೂಲಕ ಕರ್ನಾಟಕದ ರೈತರು ಹಾಗೂ ಜನರಿಗೆ ಆರೋಗ್ಯ-ಕೃಷಿ ಉದ್ದೇಶಿತ ಉತ್ಪನ್ನಗಳನ್ನು ತಯಾರು ಮಾಡತೊಡಗಿದ್ದಾರೆ. ಕರ್ನಾಟಕದಲ್ಲಿ ಗೋ ಆಧಾರಿತ ಉತ್ಪನ್ನಗಳು ರೈತರಿಗೆ ಮಹತ್ವದ ಸಹಕಾರಿ ಆಗಿವೆ ಎಂಬುದು ಚಾಂದ್‌ಬಾಷಾ ಅವರ ಸ್ನೇಹಿತಕೆ.ಎಂ.ಮಂಜುನಾಥಸ್ವಾಮಿ ಅವರ ಅನಿಸಿಕೆ.
ಸ್ವದೇಶ್ ಕೌ ಪ್ರೊಡೆಕ್ಟ್ಸ್: ಗೋವುಗಳ ಸಾಕಣೆ, ಕುಟುಂಬ ನಿರ್ವಹಣೆ ಹಿನ್ನೆಲೆಯಲ್ಲಿ ಗೋ ಆಧಾರಿತ ಉತ್ಪನ್ನಗಳ ಚಿಂತನೆ ಮೂಡಿತ್ತು. ಈ ನಿಟ್ಟಿ ನಲ್ಲಿ ಮಹತ್ವದ ಹೆಜ್ಜೆ ಇರಿಸಿದ ಚಾಂದ್‌ಬಾಷಾ, ಆರೋಗ್ಯ, ಕೃಷಿ ಸೇರಿದಂತೆ ಸುಮಾರು 10-12 ಉತ್ಪನ್ನಗಳನ್ನು ತಯಾರಿಸುವ ಸಾಹಸ ತೋರಿ ದ್ದಾರೆ. ಹಲ್ಲುಪುಡಿ,ಫಿನಾಯಿಲ್, ಗೋ ಅರ್ಕಾ, ಗೋ ಸಗಣಿಯ ಒಣಗಿದ ಕುಳ್ಳು ಇನ್ನಿತರ ಉತ್ಪ ನ್ನಗಳು ಇವೆ. ಕೃಷಿ ಬಳಕೆ ಉದ್ದೇಶದಿಂದ ಜೀವಾಮೃತ, ಸಂಜೀವಿನಿ, ರಾಮಬಾಣ, ಸುದರ್ಶನಚಕ್ರ, 6ಎಎಂ ಎಂಬ ಹೆಸರಿನ ಐದು ಉತ್ಪನ್ನಗಳನ್ನುತಯಾರಿಸುತ್ತಿದ್ದು, ಇದರ ಬಳಕೆಯಿಂದ ಉತ್ತಮ ಫಲಿತಾಂಶವೂ ಬಂದಿದೆ.
ಚಾಂದ್‌ಬಾಷಾ ಕುಟುಂಬದ ಮಕ್ಕಳು ಸೇರಿ ದಂತೆ ಎಲ್ಲರೂ ಬ್ರಾಹ್ಮಿ ಮೂಹುರ್ತ ಎಂದೇ ಕರೆ ಯುವ ಬೆಳಗಿನ ಜಾವ 4 ರಿಂದ ಸೂರ್ಯೋದಯದ 6 ಗಂಟೆವರೆಗೆ ಗೋವುಗಳ ಮೂತ್ರ ಸಂಗ್ರಹಮಾಡುತ್ತಾರೆ. ಅದನ್ನು ಸಂಪ್ರದಾಯ ಬದ್ಧವಾಗಿಯೇ ಅರ್ಕಾವಾಗಿ ತಯಾರು ಮಾಡಲಾಗುತ್ತದೆ.ಕುಟುಂಬದ ಪ್ರತಿಯೊಬ್ಬರೂ ಗೋವು, ಅವುಗಳ ಕರುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದೇಸಿ ಗೋವುಗಳ ಪ್ರೇಮ ಮೆರೆಯುವ ಮೂಲಕ ಮಾದರಿ-ಪ್ರೇರಣೆಯಾಗಿದ್ದಾರೆ.
ದೇಶದ ಕೃಷಿ ನಿಂತಿರುವುದೇ ಗೋವಿನ ಮೇಲೆ. ಪ್ರತಿಯೊಬ್ಬರ ರೈತ ಕನಿಷ್ಟಎರಡು ದೇಸಿ ಹಸುಗಳನ್ನು ಹೊಂದಬೇಕೆಂಬ ಬಯಕೆ ನನ್ನದು. ಕೃಷಿ-ಆರೋಗ್ಯದೃಷ್ಟಿಯಿಂದ ದೇಸಿ ಗೋವುಗಳ ಸಾಕಣೆಅನಿವಾರ್ಯ ಹಾಗೂ ವರ್ಣಿಸಲಸಾಧ್ಯ.ಬಂಟುಪಲ್ಲಿಯಲ್ಲಿ ಗೋಶಾಲೆ ಕಟ್ಟಡಕ್ಕೆಂದು 35 ಸೇಂಟ್ಸ್ ನಿವೇಶನ ಖರೀದಿದ್ದೇನೆ. ಆದರೆ, ಆರ್ಥಿಕ ಕಾರಣದಿಂದ ಕಟ್ಟಡ ಸಾಧ್ಯವಾಗಿಲ್ಲ. ಬಯಲಲ್ಲಿ ಗೋಮಾತೆಯರು ತಂಗುವುದು ನಿತ್ಯವೂ ಮನಸ್ಸಿಗೆ ನೋವು ಉಂಟು ಮಾಡುತ್ತಿದೆ. –
ಚಾಂದ್‌ಬಾಷಾ, ಗೋ ಪಾಲಕ
-ಅಮರೇಗೌಡ ಗೋನವಾರ