ಹೈದರಾಬಾದ್ : ಪರಸ್ಪರರ ಮದುವೆಗೆ ಹೆತ್ತವರ ಒಪ್ಪಿಗೆ ಇಲ್ಲದ ಕಾರಣಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಒಂದೇ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಮುಸ್ಲಿಂ ಯುವ ಜೋಡಿ, ಕೊನೆಗೂ ಸಾವಿನ ದವಡೆಯಿಂದ ಪಾರಾದಾಗ ಅವರ ಹೆತ್ತವರೇ ಮದುವೆಗೆ ಒಪ್ಪಿಗೆ ನೀಡಿ ಕಾಜಿಯನ್ನು ಕರೆಸಿಕೊಂಡು ಆಸ್ಪತ್ರೆಯಲ್ಲೇ ಈ ಯುವ ಜೋಡಿಯ ವಿವಾಹವನ್ನು ನೆರವೇರಿಸಿದ ಸಿನಿಮೀಯ ಘಟನೆ ವಾಸ್ತವದಲ್ಲಿ ನಡೆದಿರುವುದು ವರದಿಯಾಗಿದೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ನಿವಾಸಿಗಳಾದ 21ರ ಹರೆಯದ ನವಾಜ್ ಮತ್ತು 18ರ ಹರೆಯದ ರೇಶ್ಮಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗಲು ಬಯಸಿದ್ದರು. ಆದರೆ ಅವರಿಬ್ಬರ ಮನೆಯವರು ಇದನ್ನು ವಿರೋಧಿಸಿದ್ದರು.
ಪರಿಣಾಮವಾಗಿ ರೇಶ್ಮಾ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಗಂಭೀರ ಸ್ಥಿತಿಯಲ್ಲಿ ಆಕೆಯನ್ನು ಹೆತ್ತವರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.
ಪ್ರಿಯತಮೆಯ ಆತ್ಮಹತ್ಯೆಯ ಸುದ್ದಿ ತಿಳಿದ ಪ್ರಿಯಕರ ನವಾಜ್ ಕೂಡ ಕೀಟ ನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ. ಆತನ ಹೆತ್ತವರು ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿದರು.
ಸಕಾಲದಲ್ಲಿ ದೊರಕಿದ ಚಿಕಿತ್ಸೆಯಿಂದ ಇಬ್ಬರೂ ಪ್ರೇಮಿಗಳು ಸಾವಿನ ದವಡೆಯಂದ ಪಾರಾದರು. ಇವರು ಪರಸ್ಪರರನ್ನು ಬಿಟ್ಟಿರಲಾರರು ಎಂಬುದನ್ನು ಅರಿತ ಅವರ ಹೆತ್ತವರು ಕೂಡಲೇ ಅವರ ಮದುವೆಗೆ ಒಪ್ಪಿಕೊಂಡು ಕಾಜಿಯನ್ನು ಕರೆಸಿ ಆಸ್ಪತ್ರೆಯಲ್ಲೆ ಜನವರಿ 10ರಂದು ನಿಕಾಹ್ ವಿಧಿಯನ್ನು ನೆರವೇರಿಸಿದರು.