Advertisement

ಆರ್‌ಒ ಪ್ಲಾಂಟ್‌ಗೆ ಅಧಿಕಾರಿಗಳ ನಿರ್ಲಕ್ಷ್ಯದ ವೈರಸ್‌!

12:27 PM Mar 11, 2020 | Naveen |

ಮಸ್ಕಿ: ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಮುಂತಾದವುಗಳು ಸಿಗಲೆಂದು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳ ಅಲಕ್ಷ್ಯದಿಂದ ಜನರಿಗೆ ಇನ್ನೂ ಸೌಲಭ್ಯ ದೊರೆಯುತ್ತಿಲ್ಲ.

Advertisement

ಗ್ರಾಮೀಣ ಜನರು ಶುದ್ಧ ನೀರು ಕುಡಿಯಲೆಂದು ಸರ್ಕಾರ ಹಳ್ಳಿಗಳಲ್ಲಿ ಶುದ್ಧ ನೀರು ಘಟಕಗಳನ್ನು ಸ್ಥಾಪಿಸಿದೆ. ಆದರೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ನೀರಿನ ಸೌಲಭ್ಯವಿಲ್ಲದೇ, ವಿದ್ಯುತ್‌ ಸಂಪರ್ಕವಿಲ್ಲದೇ ಮತ್ತು ನಿರ್ವಹಣೆ ಇಲ್ಲದೇ ನಿರುಪಯುಕ್ತವಾಗಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಎಷ್ಟಿವೆ ಘಟಕಗಳು: ಲಿಂಗಸುಗೂರು, ಮಾನ್ವಿ, ಸಿಂಧನೂರು ಈ ಮೂರು ತಾಲೂಕುಗಳ ಹಳ್ಳಿಗಳನ್ನು ಸೇರಿಸಿ ನೂತನ ಮಸ್ಕಿ ತಾಲೂಕು ರಚಿಸಲಾಗಿದೆ. ಲಿಂಗಸುಗೂರು ತಾಲೂಕು ವ್ಯಾಪ್ತಿಯಲ್ಲಿ 32 ಶುದ್ಧ ನೀರಿನ ಘಟಕಗಳಿದ್ದು 2 ಘಟಕಗಳು ಸ್ಥಗಿತಗೊಂಡಿವೆ. ಮಾನ್ವಿ ವ್ಯಾಪ್ತಿಯಲ್ಲಿ 32 ಘಟಕಗಳಿದ್ದು 16 ಸ್ಥಗಿತಗೊಂಡಿವೆ. ಸಿಂಧನೂರು ವ್ಯಾಪ್ತಿಯಲ್ಲಿ 37 ಘಟಕಗಳಿದ್ದು 10 ಘಟಕಗಳು ಸ್ಥಗಿತಗೊಂಡಿವೆ.

ನಿರ್ವಹಣೆಗೆ ಬಾರದ ಗುತ್ತಿಗೆದಾರರು: ಶುದ್ಧ ನೀರು ಘಟಕಗಳ ನಿರ್ವಹಣೆಗೆ ಟೆಂಡರ್‌ ಕರೆದರೂ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಘಟಕಗಳಿಗೆ ಬೀಗ: ನಿರ್ವಹಣೆ ಕೊರತೆ ಮತ್ತು ನೀರು, ವಿದ್ಯುತ್‌ ಸೌಲಭ್ಯ ಇಲ್ಲದ್ದರಿಂದ ಕೆಲ ಗ್ರಾಮಗಳಲ್ಲಿನ ಶುದ್ಧ ನೀರು ಘಟಕಗಳಿಗೆ ಬೀಗ ಜಡಿಯಲಾಗಿದೆ. ಇದರಿಂದಾಗಿ ಗ್ರಾಮೀಣ ಜನತೆ ಕೊಳವೆಬಾವಿಗಳಲ್ಲಿನ ಫ್ಲೋರೈಡ್‌ ಅಂಶವಿರುವ ನೀರನ್ನೇ ಕುಡಿಯುವಂತಾಗಿದೆ. ಸಂತೆಕೆಲ್ಲೂರು ಹಾಗೂ ಅಂಕುಶದೊಡ್ಡಿ ಗ್ರಾಪಂ ವ್ಯಾಪ್ತಿಗಳ ಹಳ್ಳಿಗಳಿಗಾಗಿ ನಾಗಡದಿನ್ನಿ ಹತ್ತಿರ ನಿರ್ಮಿಸಿರುವ ಕೆರೆಯಿಂದ ತುಂಗಭದ್ರಾ ಎಡನಾಲೆಯ ನೀರನ್ನು ಶುದ್ಧೀಕರಿಸದೆ ಹಾಗೆಯೇ ಬಿಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ತಲೇಖಾನ ಗ್ರಾಮದಲ್ಲಿ ಶುದ್ಧ ನೀರಿನ ಘಟಕ 1 ತಿಂಗಳಿಂದ ಸ್ಥಗಿತ ಗೊಂಡಿದೆ. ವಕ್ರಾಣಿ ದೇಸಾಯಿ ಭೋಗಾಪುರ ಗ್ರಾಮಗಳಿಂದ ನೀರು ತರಲಾಗುತ್ತಿದೆ. ಈ ಬಗ್ಗೆ ಪಿಡಿಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ತಲೆಖಾನ ಗ್ರಾಪಂ ಉಪಾಧ್ಯಕ್ಷ ಶೇಷಪ್ಪ ಆರೋಪಿಸಿದ್ದಾರೆ. ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಗಿತಗೊಂಡ ಶುದ್ಧ ನೀರು ಘಟಕಗಳ ಪ್ರಾರಂಭಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಘಟಕಗಳು ಸ್ಥಗಿತ ಸ್ಮಾರ್ಟ್‌
ಇಂಡಿಯಾ ಹೈದರಬಾದ್‌, ಸತೀಶ ಕುಮಾರ ರಾಯಚೂರು, ದೋಶಿನ್‌ ವೆಯೋಲಿಯಾ ಅಹಮದಾಬಾದ್‌, ಮೆಂಬರೆನ್‌ ಫಿಲ್ಟರ ಪುಣೆ, ಪಾನ್‌ ಏಷಿಯಾ ಬೆಂಗಳೂರು, ಎಂ.ಎಸ್‌. ಸೈಂಟಿಫಿಕ್‌ ಹೈದರಾಬಾದ್‌, ಕೋ ಆಪರೇಟಿವ್‌ ರಾಯಚೂರು, ಕ್ರಿಡಲ್‌ ಎಸ್‌ಸಿಪಿ, ಟಿಎಸ್‌ಪಿ, ಕ್ರಿಡಲ್‌ನಿಟಿ ಆಯೋಗ ಮುಂತಾದ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಆದರೆ ಗುತ್ತಿಗೆ ಪಡೆದವರು ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಿದ್ದರಿಂದ ತಾಲೂಕಿನ ಕಾಚಾಪುರ, ಯಾತಗಲ್‌, ನಾಗಡದಿನ್ನಿ, ಎಸ್‌. ರಾಮಲದಿನ್ನಿ, ಹಿರೇದಿನ್ನಿ ಕ್ಯಾಂಪ್‌, ಚಿಕ್ಕದಿನ್ನಿ, ಚಿಲ್ಕರಾಗಿ, ಗುಡಿಹಾಳ, ಬೆಂಚಮರಡಿ, ಮಸ್ಲಿ ಕಾರಲಕುಂಟಿ, ಬಸಾಪುರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಘಟಕಗಳು ಸ್ಥಗಿತಗೊಂಡಿವೆ. ಇದರಿಂದ ಬೇಸಿಗೆಯಲ್ಲಿ ಹಳ್ಳಿಗಳ ಜನರು ಕುಡಿಯುವ ನೀರಿಗಾಗಿ ತತ್ವಾರ ಪಡಬೇಕಾದ ಪರಿಸ್ಥಿತಿ ಇದೆ.

ಹಲವಾರು ಕಾರಣಗಳಿಂದ ಕೆಲ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮುಂದಿನ 15 ರಿಂದ 20 ದಿನಗಳಲ್ಲಿ ಸ್ಥಗಿತಗೊಂಡ ಘಟಕಗಳನ್ನು ಪ್ರಾರಂಭಿಸಲಾಗುವುದು.
ಎಸ್‌.ಡಿ. ವಂದಾಳೆ
ಸಹಾಯಕ ಕಾರ್ಯನಿರ್ವಹಕ ಅಭಿಯಂತರರು,
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ
ಉಪವಿಭಾಗ. ಮಾನ್ವಿ.

ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು ಇವುಗಳ ಪ್ರಾರಂಭಕ್ಕೆ ಮುಂದಾಗಬೇಕು.
ಜಮದಗ್ನಿ ರಂಗಾಪುರ
ಗ್ರಾಮಸ್ಥ

„ಉಮೇಶ್ವರಯ್ಯ ಬಿದನೂರಮಠ

Advertisement

Udayavani is now on Telegram. Click here to join our channel and stay updated with the latest news.

Next