ಮಸ್ಕಿ: ಮನುಷ್ಯನಿಗೆ ಆರೋಗ್ಯವೇ ಸಂಪತ್ತು. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದ ಸಮುದಾಯ ಭವನದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಎಲ್ಲರೂ ರಾಸಾಯನಿಕ ಯುಕ್ತವಾದ ಆಹಾರವನ್ನು ಸೇವಿಸುತ್ತಿರುವುದರಿಂದ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಡ ಜನರಿಗೆ ಹೃದಯ ರೋಗ ಹಾಗೂ ಮೂತ್ರಪಿಂಡದ ತೊಂದರೆಯಂತಹ ರೋಗಗಳು ದುಬಾರಿಯಾಗಿ ಪರಿಣಮಿಸಿದೆ. ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಜನರಿಗೆ ಸಮರ್ಪಕವಾಗಿ ದೊರಕದ ಕಾರಣ ಕ್ಷೇತ್ರದಲ್ಲಿನ ಬಡ ಜನರಿಗಾಗಿ ಈ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಎಂದರು.
ಶಿಬಿರದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು ತಪಾಸಣೆ ನಂತರ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಾದಲ್ಲಿ ಅವರ ಪ್ರಯಾಣ ವೆಚ್ಚವನ್ನು ಭರಿಸಲಾಗುವುದು. ಶಾಸಕನಾಗಿ ಈ ಹಿಂದೆ ಸರ್ಕಾರದ ಅನೇಕ ಯೋಜನೆಗಳನ್ನು ತಂದು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಹೇಳಿದರು.
ಗಚ್ಚಿನಮಠ ಶ್ರೀ ವರರುದ್ರಮುನಿ ಶಿವಾಚಾರ್ಯ ಶ್ರೀಗಳು ಮಾತನಾಡಿ, ರಾಜಕಾರಣದಲ್ಲಿದ್ದು, ಸಾಮಾಜಿಕ ಸೇವೆ ಮಾಡುತ್ತಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರ ಕಾರ್ಯ ಶ್ಲಾಘನೀಯ. ಡಾ| ಬಿ.ಎಚ್. ದಿವಟರ್ ಮಾತನಾಡಿದರು. ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಲೂಕು ವೈದ್ಯಾ ಧಿಕಾರಿ ಡಾ| ನಾಗರಾಜ ಚೌಶೆಟ್ಟಿ, ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವೈದ್ಯ ಡಾ| ಪ್ರಮೋದ, ಡಾ| ಪವನಕುಮಾರ, ವಿಶ್ವನಾಥಸ್ವಾಮಿ, ಮುಖಂಡ ಮಹಾದೇವಪ್ಪಗೌಡ, ಅಂದಾನೆಪ್ಪ ಗುಂಡಳ್ಳಿ, ಪಿಎಸ್‌ಐ ಸಣ್ಣ ಈರೇಶ, ರಾಜಾನಾಯಕ, ದೊಡ್ಡಪ್ಪ ಕಡಬೂರ, ವಿಶ್ವನಾಥರೆಡ್ಡಿ ಅಮೀನಗಡ, ಬಸವರಾಜಸ್ವಾಮಿ ಹಸಮಕಲ್ಲ, ಪಂಪಾಪತಿ ಹೂವಿನಬಾವಿ ಇತರರು ಇದ್ದರು. ವಿವಿಧ ಗ್ರಾಮಗಳ ನೂರಾರು ಜನ ಶಿಬಿರದಲ್ಲಿ
ಪಾಲ್ಗೊಂಡಿದ್ದರು.