Advertisement

ಮಸ್ಕಿ ಅಖಾಡ: ಪ್ರತಿಷ್ಠೆ ಕಣಕ್ಕಿಟ್ಟ ನಾಯಕರು

06:50 PM Apr 07, 2021 | Team Udayavani |

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಕಾಂಗ್ರೆಸ್‌  ಬಿಜೆಪಿಯ ಕೆಲ ಘಟಾನುಘಟಿ ನಾಯಕರ ಪ್ರತಿಷ್ಠೆಗೆ
ಕಾರಣವಾಗಿದ್ದು, ಪ್ರಚಾರದ ಅಬ್ಬರ ಜೋರಾಗಿದೆ. ಗೆದ್ದು ಅಸ್ತಿತ್ವ ಸಾಬೀತು ಮಾಡುವ ನಿಟ್ಟಿನಲ್ಲಿ ಉಭಯ ಪಕ್ಷಗಳ ನಾಯಕರು ಪೈಪೋಟಿಯಲ್ಲಿ ಪ್ರಚಾರ
ನಡೆಸುತ್ತಿದ್ದಾರೆ.

Advertisement

ಈ ಚುನಾವಣೆಯಲ್ಲಿ ಉಭಯ ಪಕ್ಷಗಳಿಗೆ ಸೋಲು, ಗೆಲುವಿನಿಂದ ಹೆಚ್ಚೇನು ನಷ್ಟವಾಗಲಿಕ್ಕಿಲ್ಲ. ಬಿಜೆಪಿ ಪೂರ್ಣ ಸಂಖ್ಯಾಬಲದೊಂದಿಗೆ ಸರ್ಕಾರ ನಡೆಸುತ್ತಿದ್ದರೆ,
ವಿಪಕ್ಷದಲ್ಲಿರುವ ಕಾಂಗ್ರೆಸ್‌ಗೆ ಗೆದ್ದರೂ ಸೋತರೂ ವಿಪಕ್ಷ ಸ್ಥಾನವೇ ಗಟ್ಟಿ. ಆದರೆ, ಚುನಾವಣೆ ಉಸ್ತುವಾರಿ ಹೊತ್ತಿರುವ ಮುಖಂಡರು ಮಾತ್ರ ತಮ್ಮ ಛಾಪು
ಮೂಡಿಸಿ ಪ್ರಾಬಲ್ಯ ಪ್ರದರ್ಶಿಸಲು ಅಸ್ತ್ರವಾದಂತಿದೆ. ಈಗಾಗಲೇ ಬಿಜೆಪಿಗೆ ನೆಲೆ ಇಲ್ಲದ ಕೆ.ಆರ್‌.ಪೇಟೆಯಲ್ಲೂ ಕಮಲ ಅರಳಿಸುವ ಮೂಲಕ ಗಮನ ಸೆಳೆದ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಕ್ಷೇತ್ರದಲ್ಲೇ ಬಿಡಾರ ಹೂಡಿದ್ದಾರೆ.

ಮಸ್ಕಿಯಲ್ಲೂ ಪಕ್ಷದ ಬಾವುಟ ಹಾರಿಸುವ ಓಡಾಟ ನಡೆಸಿದ್ದಾರೆ. ಎಸ್‌ಟಿ ಮತ ಸೆಳೆಯುವ ಜತೆಗೆ ಈ ಭಾಗದಲ್ಲಿ ತಮ್ಮ ಅಸ್ತಿತ್ವ ತೋರಲು ಶ್ರೀರಾಮುಲು ಕೂಡಾ ‌ಹೆಣಗಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಕೂಡ ಭರ್ಜರಿ ಪ್ರಚಾರ ನಡೆಸಿದ್ದು, ಶತಾಯ ಗತಾಯ ಗೆಲುವಿನ ದಡ ಸೇರುವ ತವಕದಲ್ಲಿದ್ದಾರೆ.

ರಾಜಕೀಯ ಅಸ್ತಿತ್ವ ಪ್ರಶ್ನೆ: ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮಾತ್ರ ಅವರ ಬೆನ್ನಿಗೆ ನಿಂತಿರುವ ನಾಯಕರಿಗೂ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿದೆ. ಪ್ರಚಾರ ನಡೆಸಿ ಪಕ್ಷ ಗೆಲ್ಲಿಸುವ ಮೂಲಕ ತಮ್ಮ ವೈಯಕ್ತಿಕ ವರ್ಚಸ್ಸು ಹೆಚ್ಚಿಸಿಕೊಳ್ಳುವಲ್ಲಿಯೂ ನಾಯಕರ ನಡೆ ಕಂಡು ಬರುತ್ತಿದೆ. ಮತ್ತೂಮ್ಮೆ ಸಿಎಂ ಕನಸು ಕಾಣುತ್ತಿರುವ ಸಿದ್ದರಾಮಯ್ಯ, ಮುಂದಿನ ಸಿಎಂ ಎಂದು  ಬಿಂಬಿಸಿಕೊಳ್ಳುತ್ತಿರುವ ಡಿ.ಕೆ. ಶಿವಕುಮಾರ, ಡಿಸಿಎಂ ಹುದ್ದೆ ತಪ್ಪಿಸಿಕೊಂಡ ಶ್ರೀರಾಮುಲು, “ಚುನಾವಣೆ
ಚಾಣಕ್ಯ’ ಸ್ಥಾನ ಗಟ್ಟಿಸಿಕೊಳ್ಳಬೇಕಿರುವ ವಿಜಯೇಂದ್ರ ಹೀಗೆ ಎಲ್ಲರಿಗೂ ಒಂದೊಂದು ಧ್ಯೇಯೋದ್ದೇಶ ಕಂಡು ಬರುತ್ತಿದೆ.

ಹೈಕಮಾಂಡ್‌ಗೆ ಸಂದೇಶ: ಮಸ್ಕಿ ಉಪ ಚುನಾವಣೆ ಫಲಿತಾಂಶ ಮೇಲೆ ಹೈಕಮಾಂಡ್‌ ಚಿತ್ತವೂ ಇದೇ ಎನ್ನುತ್ತವೆ ಪಕ್ಷದ ಮೂಲಗಳು. ಆಪರೇಶನ್‌ ಕಮಲದ
ಮೊದಲ ವಿಕೆಟ್‌ ಪ್ರತಾಪಗೌಡ ಪಾಟೀಲರ ಸೋಲು ಕಾಂಗ್ರೆಸ್‌ಗೆ ದೊಡ್ಡ ಪ್ರತೀಕಾರವಾದರೆ, ಸರ್ಕಾರ ಆಡಳಿತಕ್ಕೆ ಬರಲು ನೆರವಾದ ಅವರ ಗೆಲುವು ಬಿಜೆಪಿಗೂ
ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಹೈಕಮಾಂಡ್‌ ಗಮನ ಸೆಳೆದ ಪ್ರತಾಪಗೌಡರು ಈಗ ಸೋತರೂ ಗೆದ್ದರೂ ಮತ್ತೂಮ್ಮೆ ಹೈಕಮಾಂಡ್‌ ಗಮನ ಸೆಳೆಯಬಹುದು
ಎಂದು ವಿಶ್ಲೇಷಿಸಲಾಗುತ್ತದೆ.

Advertisement

*ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next