ಕುಂದಗೋಳ: ನಗರದ ಶ್ರೀಮಂತ ನಾನಾಸಾಹೇಬ ನಾಡಗೇರ ಅವರ ವಾಡೆಯಲ್ಲಿ ಗುರುವಾರ್ಯ ಪಂ| ಸವಾಯಿ ಗಂಧರ್ವರ ಪುಣ್ಯಸ್ಮರಣೋತ್ಸವ ಅಂಗವಾಗಿ ಸತತ 67 ವರ್ಷಗಳಿಂದ ಅಹೋರಾತ್ರಿ ಸಂಗೀತ ನಡೆಯುತ್ತ ಬಂದಿದ್ದು, ದೇಶದ ವಿವಿಧ ಭಾಗಗಳಿಂದ ಸಂಗೀತ ದಿಗ್ಗಜರು ಆಗಮಿಸಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
ಈ ಸಲವೂ ಸಹ ಸೆ.24ರಂದು ಅಹೋರಾತ್ರಿ ಸಂಗೀತೋತ್ಸವ ಆಯೋಜಿಸಲಾಗಿದ್ದು, ಖ್ಯಾತ ಸಂಗೀತ ಕಲಾವಿದರು, ದಿಗ್ಗಜರು ಬಂದು ಯಾವುದೇ ಫಲಾಪೇಕ್ಷೆಯಿಲ್ಲದೇ ಸಂಗೀತ ಸೇವೆ ನೀಡಲಿದ್ದಾರೆ. 400 ವರ್ಷಗಳ ಪುರಾತನವಾದ ನಾಡಗೇರ ವಾಡೆ ಸಂಗೀತದಿಂದ ದೇಶದುದ್ದಕ್ಕೂ ಹೆಸರುವಾಸಿಯಾಗಿದೆ. ಈ ವಾಡೆಯು ಸಂಗೀತಗಾರರಿಗೆ ತವರು ಇದ್ದಂತೆ. ಈ ವಾಡೆಯಲ್ಲಿ ಹಾಡಲು ಅವಕಾಶ ಸಿಗುವುದೇ ಒಂದು ಭಾಗ್ಯವಾಗಿದೆ. ಶ್ರೀಮಂತ ನಾನಾಸಾಹೇಬ ನಾಡಗೇರ ಅವರು ಅನೇಕ ಸಂಗೀತಾಸಕ್ತರನ್ನು ಪೋಷಿಸಿ ಬೆಳಿಸಿ ಸಂಗೀತ ಲೋಕಕ್ಕೆ ಅರ್ಪಿಸಿದ
ಮಹಾನ್ ತಪಸ್ವಿ ಆಗಿದ್ದಾರೆ. ಭಾರತ ರತ್ನ ಪಂ| ಭೀಮಸೇನ್ ಜೋಶಿ, ವಿದುಷಿ ಡಾ| ಗಂಗೂಬಾಯಿ ಹಾನಗಲ್, ಉಸ್ತಾದ ಫಿರೋಜ ದಸ್ತೂರ ಹೀಗೆ ಅನೇಕರನ್ನು ಸಂಗೀತ ಲೋಕಕ್ಕೆ ಸಮರ್ಪಿಸಿದ ಕೀರ್ತಿ ಕುಂದಗೋಳ ನಾಡಗೀರ ವಾಡೆಗೆ ಸಲ್ಲುತ್ತದೆ.
ಸವಾಯಿ ಗಂಧರ್ವರ ಬಾಲ್ಯದ ಹಿನ್ನೆಲೆ: ಕುಂದಗೋಳದ ರಾಮಭಾವು ಗಣೇಶ ಜೋಶಿ (ಸವಾಯಿ ಗಂಧರ್ವರು) ಹುಟ್ಟಿನಿಂದಲೂ ಮಧ್ಯಮ ವರ್ಗದ ಜನರ ಪರಿಸರದಲ್ಲಿ ಬೆಳೆದು ಬಂದವರು. ಕುಂದಗೋಳದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದು ಇಲ್ಲಿನ ರಂಗನಗೌಡರ ನಾಡಗೇರ ಮನೆಯಲ್ಲಿ ಜೋಯಸಕಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತ ಬಂದಿದ್ದರು. ಒಂದು ಬಾರಿ ಗಣೇಶ ಜೋಶಿಯವರ ಪುತ್ರ ರಾಮಭಾವು(ಬಾಲಗಂಧರ್ವ) ಗುರುಗಳ ಬೆರವ್ ಕೀ ಚೀಜ್ ಜಮಿನಾ ಕೀ ತೀರ್
ಹಾಡೊಂದನ್ನು ಗುಣಗಾನ ಮಾಡುತ್ತಿದ್ದರು. ಖಾನ್ ಸಾಹೇಬರು ಈ ಹುಡುಗನ ಸುರೇಲಿ ಕಂಠಕ್ಕೆ ಮನಸೋತು ಈ ಬಾಲಕನ್ನು ನನ್ನ ಜತೆ ಕಳಿಸಿಕೊಡಿ ಎಂದು ರಂಗೇಗೌಡರಿಗೆ ಸೂಚಿಸಿದಾಗ ಅದಕ್ಕೆ ಸಮ್ಮತಿಸಿದ ಗೌಡರು ಖಾನ್ ಸಾಹೇಬರ ಜತೆಗೆ ಸಂಗೀತ ಕಲಿಯುವುದಕ್ಕಾಗಿ ಕಳುಹಿಸಿಕೊಟ್ಟರು. ಬಾಲಕ ರಾಮಭಾವು ಕಿರಾಣಾಗರಡಿಯಲ್ಲಿ ಪಕ್ವಗೊಂಡು ಪಳಗಿದರು. ಆ ಕಾಲದಲ್ಲಿ ಮಹಾರಾಷ್ಟ್ರ ರಂಗಭೂಮಿಯಲ್ಲಿ ಬಾಲಗಂಧರ್ವರು ಒಂದು ಸುವರ್ಣದ ಅಂಕವನ್ನೇ ತೆರೆದಿದ್ದರು. ಹಲವಾರು ಸಂಗೀತದ ದಾಟಿಗಳನ್ನು ರಾಗ ರಾಗಣಿಗಳನ್ನು ನೂರಾರು ಚೀಜ್ ಗಳ ಭಂಡಾರವನ್ನು ಬೆಳೆಸಿಕೊಂಡಿದ್ದರಿಂದ ಯಾವುದೇ ರಂಗಗೀತೆಯಾದರೂ ಸರಿ ಇವರ ಕಂಠದಿಂದ ರಂಗೇರಿ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಿತ್ತು. ಸವಾಯಿ ಗಂಧರ್ವರ ತಂದೆಯವರು ತೀರಿಕೊಂಡರೆಂದು ಸುದ್ದಿ ತಿಳಿದು ಕುಂದಗೋಳಕ್ಕೆ ಬಂದರು. ತಮ್ಮ 32ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ಮನೆತನದ ಎಲ್ಲ ಉಸ್ತುವಾರಿ ಬಿದ್ದಿದ್ದರಿಂದ ಕುಂದಗೋಳದಲ್ಲೇ ವಾಸಿಸತೊಡಗಿದರು.
ಮುಂದೆ ಸವಾಯಿ ಗಂಧರ್ವರಿಗೆ ಅರ್ಧಾಂಗ ವಾಯು ಆದಾಗ ಶಿಷ್ಯೆ ಗಂಗೂಬಾಯಿ ಹಾನಗಲ್ ಅವರು ತಮ್ಮ ಗುರುಗಳಿಗೆ ತಮ್ಮ ಮನೆಯ ಒಂದು ಕೋಣೆಯನ್ನು ಬಿಟ್ಟು ಕೊಟ್ಟು ಔಷಧೋಪಚಾರ ನೋಡಿಕೊಂಡರು. ಆ ಮೇಲೆ ಗಂಗೂಬಾಯಿಗೆ ಮತ್ತೆ ಎರಡು ಅಪರೂಪದ ರಾಗಗಳನ್ನು ಕಲಿಸಿದರೆಂದು ಗಂಗಜ್ಜಿ ತನ್ನ ಉಸಿರು ಇರುವವರಿಗೂ ಮುಕ್ತಕಂಠದಿಂದ ಹೊಗಳುತ್ತಲೇ ಬಂದರು.
ಸವಾಯಿ ಗಂಧರ್ವರು ಕರ್ನಾಟಕ-ಮಹಾರಾಷ್ಟ್ರದ ಕೊಂಡಿಯಾಗಿದ್ದರು. ಕುಂದಗೋಳವು ಗಂಧರ್ವರ ಜನ್ಮಭೂಮಿಯಾದರೆ, ಮಹಾರಾಷ್ಟ್ರ ಅವರ ಕರ್ಮಭೂಮಿಯಾಗಿತ್ತು. ಸವಾಯಿ ಗಂಧರ್ವರು 1952 ಡಿಸೆಂಬರ್ 9ರಂದು ಸ್ವರ್ಗಸ್ಥರಾದರು. ಸವಾಯಿ ಗಂಧರ್ವರ ಹೆಸರಿನಲ್ಲಿ ಪ್ರತಿವರ್ಷ ಕುಂದಗೋಳ ವಾಡೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತ ಬಂದಿದ್ದು, ಇಲ್ಲಿ ಸಂಗೀತ ಸೇವೆ ನಡೆಸಿಕೊಡುವುದೇ ಒಂದು ಸೌಭಾಗ್ಯವಾಗಿದೆ.
-ಶೀತಲ ಮುರಗಿ