Advertisement
ಕಾರ್ತೀಕ ಸೋಮವಾರದ ಹಿನ್ನೆಲೆಯಲ್ಲಿ ವಿಶೇಷವಾಗಿ ಅಲಂಕೃತಗೊಂಡಿದ್ದ ಮಲ್ಲಿಕಾರ್ಜುನ ಸ್ವಾಮಿಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು, ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿ ಸಂಭ್ರಮಿಸಿದರು. ಸಂಜೆಯಾಗುತ್ತಿದ್ದಂತೆ ಸಮಾರೋಪ ಸಮಾರಂಭದ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದವರ ಉತ್ಸಾಹ ಇಮ್ಮಡಿಗೊಳಿಸಿದ್ದು, ನಟ ವಿಜಯ್ ರಾಘವೇಂದ್ರ ಅವರು ಹಾಡಿದ “ನೀಡು ಶಿವ ನೀಡದಿರೂ ಶಿವ’ ಗೀತೆ. ಬಳಿಕ ಖ್ಯಾತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ತಂಡ ನಡೆಸಿಕೊಟ್ಟ “ಪರಂಪರೆ’ ಹೆಸರಿನ ಗೀತಾಗಾಯನ ಕೇಳುಗರನ್ನು ಪುಳಕಿತರನ್ನಾಗಿಸಿತು.
“ರಂಗಭೂಮಿ ಕಲಾವಿದ ಪರಮ ಶಿವನ್ ಮಾತನಾಡಿ “ಸುಬ್ಬಯ್ಯ ನಾಯ್ಡು ನಾಟಕ ಕಂಪೆನಿಯಲ್ಲಿ ನಾನು ಹಾರ್ಮೋನಿಯಂ ಮೇಷ್ಟ್ರಾಗಿದ್ದ ವೇಳೆ ರಾಜ್‌ಕುಮಾರ್ ಅವರಿಗೆ ಆಂಜನೇಯನ ಪಾತ್ರ ಮಾಡಿಸಿದ್ದೆ. ಆ ಸಂದರ್ಭದಲ್ಲಿ ರಾಜ್‌ಕುಮಾರ್ ನನ್ನನ್ನು ಅಣ್ಣಾವ್ರೆ, ಅಣ್ಣಾವ್ರೆ ಎಂದು ಕರೀತಿದ್ರು, ಎಲ್ಲರ ಬಳಿ ಅಣ್ಣಾವ್ರು ಎಂದು ಕರೆಸಿಕೊಳ್ಳುತ್ತಿದ್ದ ಅವರು ನನ್ನ ಅಣ್ಣಾ ಅಂತಾ ಕರೆಯುತ್ತಿದ್ರು,’ ಎಂದು ಮೆಲುಕು ಹಾಕಿದರು.
Related Articles
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ ಶಿವರಾಂ ಮಾತನಾಡಿ, ಮೊದಲ ಬಾರಿಗೆ ನಡೆಸಿದ ಕಡಲೆಕಾಯಿ ಪರಿಷೆ ಅಭೂತಪೂರ್ವ ಯಶಸ್ಸುಗಳಿಸಿದೆ. ಹೀಗಾಗಿ ಮುಂದೆ ನಡೆಯುವ ಹುಣ್ಣಿಮೆ ಹಬ್ಬ ಮುಗಿದ ಮಾರನೇ ದಿನ, ಆಯಾ ಕಾಲಮಾನಕ್ಕೆ ಸಿಗುವ ಹಣ್ಣುಗಳ (ಮಾವು,ಹಲಸು) ಸಂತೆ ನಡೆಸಲು ನಿರ್ಧರಿಸಲಾಗಿದೆ.
Advertisement
ನೇರವಾಗಿ ರೈತರೇ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ ಇದರಿಂ ಕಾಯಕಯೋಗಿಗಳಿಗೆ ಬೆನ್ನೆಲುಬು ನೀಡಿದಂತಾಗುತ್ತದೆ.ಡಿಸೆಂಬರ್ ತಿಂಗಳ ಹುಣ್ಣಿಮೆಯಲ್ಲಿ ನಡೆಯುವ ಹಬ್ಬದಲ್ಲಿ ರಾಮಚಂದ್ರ ಅಡಪ ಸಂಗೀತ ನಿರ್ದೇಶನದಲ್ಲಿ ಸುಮಾರು 15 ಮಂದಿಗಾಯಕರ ಗೀತಗಾಯನ ನಡೆಸಲಾಗುವುದು ಎಂದರು.
ಕಿಕ್ಕಿರಿದು ಸೇರಿದ್ದ ಜನರು!ಕಾರ್ತಿಕ ಮಾಸದ ಸೋಮವಾರ ಅಂಗವಾಗಿ ಕಾಡು ಮಲ್ಲಿಕಾರ್ಜುನ ಸ್ವಾಮಿ, ನಂದಿತೀರ್ಥ ಶಿವಲಿಂಗ, ಲಕ್ಷ್ಮಿ ನರಸಿಂಹಸ್ವಾಮಿ, ಗಂಗಮ್ಮ, ಗಣೇಶ, ಬಸವ ಸೇರಿದಂತೆ ವಿವಿಧ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 7-30ರಿಂದ ಧಾರ್ಮಿಕ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಂದ ದೇವಾಲಯದ ರಸ್ತೆ ತುಂಬಿಹೋಗಿತ್ತು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡ ಭಕ್ತರು, ಬಳಿಕ ಕಡಲೆಕಾಯಿ ಪರಿಷೆಯಲ್ಲಿ ಸುತ್ತಾಡಿದರು. ಜಾತ್ರೆಯ ವಾತಾವರಣ ನಿರ್ಮಾಣವಾಗಿದ್ದರಿಂದ ಕಬ್ಬು, ಸಿಹಿತಿನಿಸುಗಳು ಭರಾಟೆ ಜೋರಾಗಿತ್ತು.