Advertisement

Music; ಸುಗಮ ಸಂಗೀತ ಕ್ಷೇತ್ರವನ್ನು ಬೆಳೆಸಲು ಸರಕಾರ ಕಟಿಬದ್ಧವಾಗಬೇಕು

12:52 AM Nov 07, 2023 | Team Udayavani |

ನಾಡಿನ ಸುಗಮ ಸಂಗೀತ ಕ್ಷೇತ್ರಕ್ಕೆ ಸುಮಾರು 70-80 ವರ್ಷ ಗಳ ಇತಿಹಾಸ ಇದೆ. ಕಾವ್ಯ ವನ್ನು ಜನ ಸಾಮಾನ್ಯರಿಗೆ ತಲುಪಿಸಿದ ಏಕೈಕ ಮಾಧ್ಯಮ -“ಸುಗಮ ಸಂಗೀತ’. ಕನ್ನಡ ಹೊರತುಪಡಿಸಿ ಭಾರತೀಯ ಯಾವ ಭಾಷೆಯಲ್ಲೂ ಸುಗಮ ಸಂಗೀತದ ಮೂಲಕ ಕಾವ್ಯವನ್ನು ತಲುಪಿಸುವ ಕೆಲಸವಾಗಿಲ್ಲ.

Advertisement

ನಮ್ಮಲ್ಲಿ ಬೇರೆ ಬೇರೆ ಕಾಲ ಘಟ್ಟದಲ್ಲಿ ಹುಟ್ಟಿದ ಕಾವ್ಯ ಇದಕ್ಕೆ ಕಾರಣ. ಹಳೆಗನ್ನಡ, ನಡುಗನ್ನಡ, ನವೋದಯ, ನವ್ಯ, ದಲಿತ, ಬಂಡಾಯ ಎಲ್ಲ ಇದರಲ್ಲಿ ಬೆರೆತುಕೊಂಡಿವೆ. ರಾಜಕೀಯ ಬೆಳವಣಿಗೆ, ಸಾಮಾಜಿಕ ಬೆಳವಣಿಗೆಗಳ ವೇಳೆ ಕೂಡ ನಮ್ಮಲ್ಲಿ ಬೇರೆ ಬೇರೆ ರೀತಿಯಾದ ಕಾವ್ಯಗಳು ಹುಟ್ಟಿಕೊಂಡಿವೆ. ಹೀಗಾಗಿಯೇ ನಮ್ಮಲ್ಲಿ ಗಮಕ ಮತ್ತು ಶಾಸ್ತ್ರೀಯ ಸಂಗೀತ, ಲಾವಣಿ ಪದ, ಜಾನಪದ ಸಂಗೀತ ಬೇರೆ-ಬೇರೆ ಸಾಹಿತ್ಯ ಬಳಸಿಕೊಳ್ಳಲಾಗುತ್ತದೆ. ಯಾವ ಕಾವ್ಯ ನಮ್ಮಲ್ಲಿ ಸಂಗೀತ ಪ್ರಕಾರವನ್ನು ಒಪ್ಪುತ್ತಿರಲಿಲ್ಲವೋ ಆಗ ಸುಗಮ ಸಂಗೀತ ಪಿತಾಮಹ ಕಾಳಿಂಗರಾಯರು ಬೇರೆ ಬೇರೆ ಕವಿಗಳ ಕಾವ್ಯವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸ್ವರ ಸಂಯೋಜಿಸಿ ನಾಡಿನ ಸುಗಮ ಸಂಗೀತ ಲೋಕಕ್ಕೆ ಹೊಸ ಆಯಾಮ ಕೊಟ್ಟರು.

ಅನಂತರ ಪದ್ಮಚರಣ್‌, ಎಚ್‌.ಕೆ. ನಾರಾಯಣ್‌, ಮೈಸೂರು ಅನಂತಸ್ವಾಮಿ, ಕೀರ್ತನೆಗಳಲ್ಲಿ ಪವಾಡವನ್ನೇ ಸೃಷ್ಟಿಸಿದ ಅಶ್ವತ್ಥ್ ಅವರು ಸುಗಮ ಸಂಗೀತ ಲೋಕವನ್ನು ಮತ್ತೂಂದು ದಿಕ್ಕಿನಡೆಗೆ ಕೊಂಡೊಯ್ದರು. ನಾನು ಮತ್ತು ಅಶ್ವತ್ಥ್ ಸೇರಿ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸುಗಮ ಸಂಗೀತಕ್ಕೆ ಒಂದು ಅವಕಾಶವನ್ನು ಕೊಡಲೇಬೇಕು ಎಂದು ಪಟ್ಟು ಹಿಡಿದ ಪರಿಣಾಮ ಅವಕಾಶ ಸಿಕ್ಕಿತ್ತು. ಹಾಗೆಯೇ ಹೋರಾಟದ ಫ‌ಲವಾಗಿ ಮೈಸೂರು ದಸರಾದಲ್ಲೂ ಅವಕಾಶ ಸಿಕ್ಕಿತು.

ಸುಗಮ ಸಂಗೀತ ಪರಿಷತ್ತು ಹುಟ್ಟಿಕೊಂಡ ಅನಂತರ ಈವರೆಗೂ 18 ಸುಗಮ ಸಂಗೀತ ಸಮ್ಮೇಳನ ನಡೆದಿದೆ. ಡಾ| ಜಿ.ಎಸ್‌.ಶಿವರುದ್ರಪ್ಪ ಅವರು ಸಂಘಟನೆಗೆ ಕಾರಣರಾದವರು. ಬಳಿಕ ಎಚ್‌.ಎಸ್‌.ವೆಂಕಟೇಶಮೂರ್ತಿ, ಎಂ.ಎನ್‌.ವ್ಯಾಸರಾವ್‌, ಲಕ್ಷ್ಮಣ್‌ ರಾವ್‌, ದೊಡ್ಡರಂಗೇ ಗೌಡ, ಲಕ್ಷಿ$¾àನಾರಾಯಣ ಭಟ್ಟ, ನಿಸಾರ್‌ ಅಹಮದ್‌, ಚನ್ನವೀರ ಕಣವಿ ಇವರೆಲ್ಲರೂ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ನಿಂತರು. ನಾಡಿನ ಕವಿಗಳ ಕಾವ್ಯವನ್ನು ಬಹಳ ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ಸುಗಮ ಸಂಗೀತ ಕ್ಷೇತ್ರ ಮಾಡಿದೆ. ಸುಗಮ ಸಂಗೀತ ಕ್ಷೇತ್ರವನ್ನು ತನ್ನ ಜೀವನಾಡಿ ಎಂದು ಹೇಳಿಕೊಳ್ಳುತ್ತಿದ್ದ ಸಿ.ಅಶ್ವತ್ಥ್ ಸೇರಿದಂತೆ, ಸುಗಮ ಸಂಗೀತ ಕ್ಷೇತ್ರವನ್ನು ಸಂರಕ್ಷಿಸಲು ಕೆಲಸ ಮಾಡಿದವರಾರು ಈಗ ಇಲ್ಲ. ನಾನು ಈಗ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದೇನೆ.
ಅಶ್ವತ್ಥ್ ನಿಧನ ಹೊಂದಿ ಸುಮಾರು 13 ವರ್ಷಗಳು ಕಳೆದಿದ್ದು, ಪ್ರತೀವರ್ಷ ಕೂಡ ಗೀತೋತ್ಸವ ಸಮ್ಮೇಳನ ಮಾಡುತ್ತಲೇ ಬಂದಿದ್ದೇವೆ. ಎಲ್ಲ ಕಲಾವಿದರು ಅಶ್ವತ್ಥ್, ಮೈಸೂರು ಅನಂತ ಸ್ವಾಮಿ ಸಂಗೀತ ಸಂಯೋಜನೆಯ ಹಾಡುಗಳನ್ನು ಹಾಡುತ್ತಾ ಬಂದಿದ್ದಾರೆ. ಆಕಾಶವಾಣಿ ನಮಗೆ ಬೆಂಬಲ ನೀಡಿದೆ. ಆದರೆ ದೂರದರ್ಶನದಲ್ಲಿ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ. ವಿಶೇಷವಾಗಿ ಸರಕಾರದಿಂದ ಪೂರಕ ವಾದ ಬೆಂಬಲ, ಅನುದಾನ ದೊರಕುತ್ತಿಲ್ಲ. ಕರ್ನಾಟಕ ಸುವರ್ಣ ಮಹೋ ತ್ಸವದ ಸಂದರ್ಭದಲ್ಲಿ ಕಡ್ಡಾಯ ಗೀತೆಗಳನ್ನು ಹಾಡಲಾಯಿತು. ಆದರೆ ಯಾವ ಕ್ಷೇತ್ರ ಇದಕ್ಕೆ ಸಹಾಯ ಮಾಡಿ ಪೂರಕವಾಗಿ ದುಡಿಯುತ್ತಾ ಬಂದಿದೆಯೋ ಆ ಕ್ಷೇತ್ರವನ್ನು ಬೆಳೆಸುವ ಕೆಲಸವನ್ನು ಸರಕಾರ ಮಾಡದಿರುವುದು ವಿಷಾದದ ಸಂಗತಿ. ಸಿನೆಮಾ ಗೀತೆಗಳನ್ನು ಹಾಡುವವರನ್ನು ಮೆರೆಸುವ ಸರಕಾರ ಸುಗಮ ಸಂಗೀತದವರನ್ನು ಕೈಬಿಟ್ಟಿದೆ. ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಸುಗಮ ಸಂಗೀತಕ್ಕೆ ಮಾನ್ಯತೆ ಕೂಡ ಇಲ್ಲವಾಗಿದೆ. ಸುಗಮ ಸಂಗೀತವನ್ನು ಬೆಳೆಸಲು ಸರಕಾರ ಕಟಿಬದ್ಧವಾಗ ಬೇಕು. ಜತೆಗೆ ಸುಗಮ ಸಂಗೀತಕ್ಕೆ ಒಂದು ಅಕಾಡೆಮಿ ಸ್ಥಾಪಿಸಬೇಕು. ಹೀಗೆ ಮಾಡಿದಾಗ ಮಾತ್ರ ಸುಗಮ ಸಂಗೀತ ಲೋಕ ಉಳಿಯಲು ಸಾಧ್ಯ.

ವೈ.ಕೆ.ಮುದ್ದುಕೃಷ್ಣ
ಹಿರಿಯ ಗಾಯಕರು, ಕರ್ನಾಟಕ ಸುಗಮ ಸಂಗೀತ ಪರಿಷತ್‌ ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next