ಭಟ್ಕಳ: ಖ್ಯಾತ ಹಿಂದೂಸ್ತಾನಿ ಗಾಯಕ, ನೂರಾರು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಸಂಗೀತ ಶಿಕ್ಷಕ ವಿದ್ವಾನ್ ಅನಂತ ಎಂ.ಹೆಬ್ಬಾರ್ (52) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಸಂಗೀತವೇ ತಮ್ಮ ಉಸಿರನ್ನಾಗಿಸಿಕೊಂಡಿದ್ದ ಅನಂತ ಹೆಬ್ಬಾರ್ ಅವರು ನೂರಾರು ವಿದ್ಯಾರ್ಥಿಗಳಿಗೆ ಸಂಗೀತದ ತರಗತಿಗಳನ್ನು ಮಾಡುವ ಮೂಲಕ ಸಂಗೀತದ ಧಾರೆಯೆರೆಯುತ್ತಿದ್ದರು.
ಭಟ್ಕಳದಲ್ಲಿ ಕಲಾ ಸೌರಭ ಸಂಸ್ಥೆಯನ್ನು ದಿ. ಎನ್.ಜಿ.ಕೊಲ್ಲೆಯವರು ಹುಟ್ಟು ಹಾಕಿದಾಗಿನಿಂದ ಅಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಇವರು, ಮುರ್ಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿಯೂ ಕೂಡಾ ಸಂಗೀತ ಶಿಕ್ಷಕರಾಗಿದ್ದರು.
ಜಿಲ್ಲೆಯಷ್ಟೆ ಅಲ್ಲ ಪಕ್ಕದ ಉಡುಪಿ ಜಿಲ್ಲೆಯಲ್ಲಿಯೂ ಕೂಡಾ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದ ಇವರು ಅತ್ಯಂತ ಮೃಧು ಸ್ವಭಾವದರಾಗಿದ್ದು ತಮ್ಮ ಶಿಷ್ಯರಿಗೆ ಅತ್ಯಂತ ಸಂಯಮದಿAದ ಸಂಗೀತಾಭ್ಯಾಸವನ್ನು ಮಾಡಿಸುತ್ತಿದ್ದರು.
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಪ್ರತಿಮ ಸಾಧಕ, ಸಂಗೀತ ಕ್ಷೇತ್ರದ ದ್ರುವತಾರೆ, ಸರಳ ಸಜ್ಜನಿಕೆಯ ಕಲಾ ಸಾಮ್ರಾಟ, ಸಹಸ್ರಾರು ವಿಧ್ಯಾರ್ಥಿಗಳ ಸಂಗೀತ ಗುರುಗಳಾಗಿದ್ದ ಅವರ ನಿದನ ಸಂಗೀತಾಸಕ್ತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನೂರಾರು ಜನರು ಧಾವಿಸಿ ಮೃತರ ಅಂತಿಮ ದರ್ಶನ ಪಡೆದರು.
ಕಲಾ ಸೌರಭದ ಅಧ್ಯಕ್ಷ ಕೇದಾರ ಕೊಲ್ಲೆ, ಬೀನಾ ವೈದ್ಯ ಸಂಸ್ಥೆಯ ಅಧ್ಯಕ್ಷ ಮಂಕಾಳ ಎಸ್. ವೈದ್ಯ, ಆಡಳಿತಾಧಿಕಾರಿ ಪುಷ್ಪಲತಾ ವೈದ್ಯ, ಹವ್ಯಕ ವಲಯಾಧ್ಯಕ್ಷ ಶಂಭು ಹೆಗಡೆ, ವಿನಾಯಕ ಭಟ್ಟ ಬೆಟ್ಕೂರು, ಎಂ.ಎA.ಹೆಬ್ಬಾರ್, ಪರಮೇಶ್ವರ ಹೆಗಡೆ, ಸದಾಶಿವ ಹೆಗಡೆ, ಪರಮೇಶ್ವರ ಭಟ್ಟ, ರಾಘವೇಂದ್ರ ಹೆಬ್ಬಾರ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.