Advertisement
ಪಂತುವರಾಳಿಯ ಮೈಸೂರು ವಾಸುದೇವಾಚಾರ್ಯರ ಶಂಕರಿ ನಿನ್ನೆ, ಅದೇಕೋ ಇತ್ತೀಚೆಗೆ ಕೇಳಿಬರುತ್ತಲಿಲ್ಲ. ಅದರ ಸೊಗಸಾದ ಸಾಹಿತ್ಯ ಮತ್ತು ನೆರವಲ್ ಜಾಗಗಳನ್ನು ನೀಲಾ ಮಾಮಿ ಸುಂದರವಾಗಿ ಹಿಡಿದಿದ್ದರು. ಆನಂದಭೈರವಿಯ ಓ ಜಗದಂಬಾದಲ್ಲಿ ಅವರು ನೀಡಿದ ವರಸೆಗಳಲ್ಲಿ ಒಂದಿಷ್ಟೂ ಉತ್ಪ್ರೇಕ್ಷೆ ಇರದು. ನೀಲಾ ಮಾಮಿಯವರು ಎತ್ತಿಕೊಂಡ ಕಾಣಾ ಕಣ್‌ಕೋಟಿ ವೇಣು ಎಂಬ ಕಾಂಭೋದಿ ರಚನೆಯು ಪೂರ್ಣಪ್ರಮಾಣದಲ್ಲಿ ತನ್ನ ಬೆಡಗನ್ನು ಹೊಮ್ಮಿಸಿತು. ಮೇಲ್‌ಸ್ಥಾಯಿಯಲ್ಲಿ ಹೆಚ್ಚಿನ ಸಂಚಾರವನ್ನು ಬಯಸುವ ಕಾಂಭೋದಿ ನೀಲಾಮಾಮಿಗೆ ಒಂದಿಷ್ಟೂ ತ್ರಾಸ ನೀಡಲಿಲ್ಲ. ವಯಸ್ಸಿನ ಕಡೆಗೆ ಒಂದಿಷ್ಟೂ ಗಮನ ಕೊಡದೆ ಅನಾಯಾಸವಾಗಿ ಗಾಂಧಾರ, ಮಧ್ಯಮ, ಪಂಚಮಗಳನ್ನು ಚ್ಯುತಿ ಇಲ್ಲದೆ ಶ್ರುತಿಲೀನತೆಯ ಶುದ್ಧತೆಯೊಂದಿಗೆ ಅವರು ಹಾಡಿದ ಈ ಕಾಂಭೋದಿ ಕೇಳುವುದಕ್ಕೆ ಕೋಟಿ ಕಿವಿಗಳೇ ಬೇಕು. ಇವರೊಂದಿಗೆ ಸಮರ್ಪಕವಾಗಿ ವಯಲಿನ್‌ನಲ್ಲಿ ಅನುಸರಣೆಯನ್ನು ಹಾಗೂ ತನಿಯಾಗಿ ಸುಂದರ ಆಲಾಪನೆಯನ್ನು ಸಮರ್ಪಕವಾಗಿ ನೀಡಿದ ಚಾರುಲತಾ ರಾಮಾನುಜಂ ಅಭಿನಂದನಾರ್ಹರು. ಮನ್ನಾರ್‌ಕೋಯಿಲ್ ಬಾಲಾಜಿಯವರ ಮೃದಂಗವಾದನದಲ್ಲಿ ನೀಲಾ ಮಾಮಿಯವರ ಮನೋಧರ್ಮಕ್ಕೆ ಅನುರಣಿಯಾಗಿ ನಡೆಯಿಸಿಕೊಂಡು ಹೋದ ಗೆಯೆ ಇದ್ದಿತು. ಅವರು ಅನಾವಶ್ಯಕವಾದ ಉರಟು ನಡೆಗಳನ್ನು ಹಾಕಿ ನೀಲಾ ಮಾಮಿಯವರು ಹಾಡುವ ಸಾಹಿತ್ಯಾಕ್ಷರಗಳನ್ನು ನುಂಗಿ ಹಾಕಲಾರರು. ಬಾಲಾಜಿಯವರದು ಜಾಣ್ಮೆಯ ನಡೆ, ಲೆಕ್ಕಾಚಾರ, ನುಡಿಕಾರ. ಬಹಳ ಕಾಲ ಸ್ಮರಣೆಯಲ್ಲಿ ಉಳಿಯಬಲ್ಲ ಸಂಗೀತ ನೀಲಾ ಮಾಮಿಯವರದು.
Advertisement
ಹಿತಮಿತ ನೀಲಾ ಸಂಗೀತ ಮನೋಧರ್ಮ
06:34 PM Aug 22, 2019 | mahesh |