Advertisement

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

10:18 AM Mar 20, 2020 | mahesh |

ಹಿರಿಯ ವಯಲಿನ್‌ ವಿ| ವಸಂತಿ ರಾಮ ಭಟ್‌ ಅವರು ತಮ್ಮ ಜನ್ಮದಿನ ಮತ್ತು ಜನ್ಮ ನಕ್ಷತ್ರ ಈ ಎರಡೂ ಸಂದರ್ಭಗಳಲ್ಲಿ ಸಂಗೀತದ ರಸದೌತಣವನ್ನು ಆಯೋಜಿಸಿದ್ದರು. ಅಂತೆಯೇ ಈ ಸಂಗೀತ ವೈಭವವನ್ನು ವಿದ್ಯಾಧಿದೇವತೆ ಸರಸ್ವತಿಗೆ ಮತ್ತು ಗುರುಗಳಿಗೆ ಸಮರ್ಪಿಸಿದರು.

Advertisement

ನ.29 ರಂದು ಅವರ ನಿವಾಸದಲ್ಲಿ ಪಿಟೀಲಿನ ನಿನಾದವು ಅನುರಣಿಸಿತು. ಒಂದು ಗಂಟೆ ಕಾಲ ವಸಂತಿ ಭಟ್‌ ಅವರ ಶಿಷ್ಯರು ತಮ್ಮ ಸ್ತರಕ್ಕೆ ಅನುಗುಣವಾಗಿ ಪಿಳ್ಳಾರಿ ಗೀತೆಗಳಿಂದ ತೊಡಗಿ ದೇವರನಾಮದ ವರೆಗೆ ಸುಶ್ರಾವ್ಯವಾಗಿ ನುಡಿಸಿದರು.

ಅನಂತರ ಶ್ರೀ ವೇಣುಗೋಪಾಲ ಶಾನುಭೋಗ ಮತ್ತು ವಸಂತಿ ರಾಮ ಭಟ್‌ ಅವರಿಂದ ಜಂಟಿ ವಯಲಿನ್‌ ವಾದನ ನಡೆಯಿತು. ಈ ಇಬ್ಬರು ಕಲಾವಿದರದ್ದೂ ವಿಭಿನ್ನ ರೀತಿಯ ಪಾಠಾಂತರ. ಸ್ವಂತಿಕೆಯ ಬೇರುಗಳನ್ನು ನೀರೆರೆದು ಪೋಷಿಸುತ್ತ ಕೆಲವು ದಶಕಗಳಿಂದಲೂ ತಮ್ಮದೇ ಬಾನಿಯಲ್ಲಿ ಪಿಟೀಲು ನುಡಿಸಿದ ಅನುಭವ ಅವರದು. ಹಾಗಿದ್ದರೂ ಸುಮಾರು ಎರಡುವರೆ ಗಂಟೆ ಕಾಲ ಒಳ್ಳೆ ಹೊಂದಾಣಿಕೆಯಿಂದ ಅವರಿಬ್ಬರೂ ಒಂದು ಪರಿಪೂರ್ಣ ಕಛೇರಿಯನ್ನು ನೀಡಿದರು.

ಶಹನ ವರ್ಷಾದೊಂದಿಗೆ ಗತ್ತಿನ ಆರಂಭ. ಚಕ್ರವಾಕ (ಗಜಾನನ), ಗೌಳಿ ಪಂತು (ತೆರೆದೀಯಕ) ಅಠಾಣಾ (ಅನುಪಮ), ಕಾಪಿನಾರಾಯಣಿ (ಸರಸಸಾಮದಾನ) ಕೃತಿಗಳ ನಿರೂಪಣೆಯ ನಂತರ ಪಂತುವರಾಳಿಯಲ್ಲಿ ಪರ್ಯಾಯವಾಗಿ ರಾಗ ವಿಸ್ತರಿಸಿದ ಕಲಾವಿದರು ನಿನ್ನೇ ನೆರ ನಮ್ಮಿನಾನು ಕೃತಿ ಮತ್ತು ನೆರವೆಲ್‌ ಅನಂತರ, ಗಣಿತಯುಕ್ತವಾದ ಹತ್ತಾರು ಮುಕ್ತಾಯಗಳ ಸ್ವರವಿನಿಕೆಗಳನ್ನು ನೀಡಿ ರಂಜಿಸಿದರು. ತ್ವರಿತಗತಿಯ ಜಗನ್ಮೋಹಿನಿ (ಶೋಭಿಲ್ಲು ), ಚಂದ್ರ ಜ್ಯೋತಿ (ಬಾಗಾಯನಯ್ಯ) ಕೃತಿಗಳ ನಂತರ ರಾಗಂ-ತಾನಂ-ಪಲ್ಲವಿಗಾಗಿ ಕಾಂಭೋಜಿಯನ್ನು ಎತ್ತಿಕೊಳ್ಳಲಾಯಿತು. ರೂಢಿಗತವಾದ ಮನೋಧರ್ಮ ಸಂಚಾರಗಳನ್ನು ಪರ್ಯಾಯವಾಗಿ ನೇಯ್ದುಕೊಳ್ಳುತ್ತ ಬೆಳೆಸಲಾದ ಕಾಂಭೋಜಿಯ ರಾಗವಿಸ್ತಾರ ಮತ್ತು ಅನಂತರದ ತಾನಂ ರಸಿಕರಿಗೆ ಮುದ ನೀಡಿದವು.

ಹರೇ ರಾಮ ಗೋವಿಂದ ಮುರಾ| ರೇ… ಮುಕುಂದ ಮಾ||ಧವ… ಎಂಬ ಪಲ್ಲವಿಯನ್ನು ಚತುರಸ್ರ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನುಡಿಸಿದ ವಾದಕರು, ರಾಗಮಾಲಿಕೆಯಲ್ಲಿ ಸೊಗಸಾದ ಸ್ವರವಿನಿಕೆಗಳನ್ನು ನೀಡಿದರು.

Advertisement

ಈ ಕಛೇರಿಯ ಗರಿಮೆಗೆ ಅನುಗುಣವಾಗಿ ಉನ್ನತಮಟ್ಟದ ತನಿ ಆವರ್ತನವನ್ನು ನೀಡಿದ ಸೂರಳಿ ಗಣೇಶಮೂರ್ತಿ (ಮೃದಂಗ) ಮತ್ತು ಸೂರಳಿ ರಮಾಕಾಂತ್‌ (ಮೋರ್ಚಿಂಗ್‌) ಇಬ್ಬರೂ ಅಭಿನಂದನಾರ್ಹರು. ಒಂದೆರಡು ಲಘು ಪ್ರಸ್ತುತಿಗಳೊಂದಿಗೆ ಕಛೇರಿ ಕೊನೆಗೊಂಡಿತು. ಗಟ್ಟಿಮುಟ್ಟಾದ ತಳಹದಿಯನ್ನು ಹೊಂದಿದ್ದು, ಹಿಂದಿನ ದಶಕಗಳನ್ನು ನೆನಪಿಸಿದ ಈ ನುಡಿಸಾಣಿಕೆಯ ಸಾಂಗತ್ಯ ಒಂದು ವಿನೂತನ ಅನುಭವವಾಗಿತ್ತು.

ಡಿ.12ರಂದು ಉಡುಪಿಯ ನೂತನ ರವೀಂದ್ರ ಮಂಟಪದಲ್ಲಿ ಮೈಸೂರು ನಾಗರಾಜ್‌ ಮತ್ತು ಮೈಸೂರು ಮಂಜುನಾಥ್‌ ಸೋದರರಿಂದ ದ್ವಂದ್ವ ಪಿಟೀಲು ವಾದನ ನಡೆಯಿತು.

ಸಾವೇರಿ ವರ್ಣದ ನಂತರ ನಾಸಿಕಾಭೂಷಣಿಯ (ಮಾರ ವೈರಿ) ವಿವಾದಿಛಾಯೆಗಳ ಹೊಳಹುಗಳನ್ನು ಮತ್ತು ರೀತಿಗೌಳದ (ಜನನೀ ನಿನುವಿನಾ) ನೈಜಮಾಧುರ್ಯವನ್ನು ನಿಧಾನವಾಗಿ, ಎಸಳೆಸಳಾಗಿ ತೆರೆದಿಟ್ಟ ಕಲಾವಿದರು ಪ್ರಧಾನವಾಗಿ ಲತಾಂಗಿಯನ್ನು ಆಯ್ದುಕೊಂಡರು. (ಮರಿವೇರೆ – ಖಂಡಛಾಪು ತಾಳ).

ಉತ್ತಮ ರಾಗವಿಸ್ತಾರ, ಕೃತಿ ನಿರೂಪಣೆ ಮತ್ತು ವಿವಿಧ ನಡೆಗಳಲ್ಲಿ ನೀಡಲಾದ ಸ್ವರವಿನಿಕೆಗಳು ಲಯಪ್ರಿಯರ ಮೆಚ್ಚುಗೆಯನ್ನು ಪಡೆದವು. ರಾಗಂ-ತಾನಂ-ಪಲ್ಲವಿಗಾಗಿ ಭಾಗೇಶ್ರೀ ರಾಗವನ್ನು ಆಯ್ದುಕೊಂಡ ಕಲಾವಿದರು ತಮ್ಮ ವಿಸ್ತಾರವಾದ ಮನೋಧರ್ಮದ, ಅಂತೆಯೇ ಪಿಟೀಲನ್ನು ನೂತನವಾದ ಆಯಾಮಗಳಲ್ಲಿ ದುಡಿಸಿಕೊಳ್ಳುವ ಚಾಕಚಕ್ಯತೆಯಿಂದ ಅದ್ಭುತವಾದ ರಾಗ-ಹಂದರವನ್ನು ನಿರ್ಮಿಸಿ ಶ್ರೋತೃಗಳನ್ನು ಬೇರೆಯೇ ಗಾನ ಪ್ರಪಂಚಕ್ಕೆ ಕರೆದೊಯ್ದರು. ತಾನಂ ಅನಂತರ ಮಾ||ಧವ ಕೇಶವ ಉಡುಪಿ ಶ್ರೀ ಕೃ|ಷ್ಣಾ ವಾಸಂತಿ ಪ್ರಿಯ …|| ಎಂಬ ಅತೀತ ಎಡುಪ್ಪಿನ ಪಲ್ಲವಿಯನ್ನು ಆಗಿಂದಾಗಲೇ ರಚಿಸಿ – ಚತುರಸ್ರ ತ್ರಿಪೋಟಿ ತಾಳದಲ್ಲಿ ಅಚ್ಚುಕಟ್ಟಾಗಿ ನುಡಿಸಿದರು. ರಾಗಮಾಲಿಕೆಯಲ್ಲಿ (ನಾಟಕುರುಂಜಿ, ಹಮೀರ ಕಲ್ಯಾಣಿ, ಮಧುಕಂಸ) ವಿದ್ವತೂ³ರ್ಣವಾದ ಕಲ್ಪನಾ ಸ್ವರಗಳು ಕರ್ಣರಂಜಕವಾಗಿ ಮೂಡಿ ಬಂದವು.

ಕಛೇರಿಯ ಒಟ್ಟಂದಕ್ಕೆ ಪೂರಕವಾಗುವಂತೆ ಹದವರಿತು ಸಹವಾದನ ನೀಡಿದ ಕೆ.ಯು. ಜಯಚಂದ್ರ ರಾವ್‌ (ಮೃದಂಗ) ಮತ್ತು ಗಿರಿಧರ ಉಡುಪಿ (ಘಟಂ) ಇಬ್ಬರೂ ತನಿ ಆವರ್ತನದಲ್ಲೂ ನವೀನ ಪ್ರಯೋಗಗಳಿಂದ ರಸಿಕರನ್ನು ಬೆರಗುಗೊಳಿಸಿದರು.ದೇವರನಾಮ ಮತ್ತು ಸಿಂಧುಭೈರವಿ ತಿಲ್ಲಾನಾದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸರೋಜ ಆರ್‌. ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next