ಗದಗ: ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಭವ್ಯ ಇತಿಹಾಸವಿದೆ. ಅನೇಕ ಬಗೆಯ ಕಾಯಿಲೆಗಳನ್ನು ಶಮನಗೊಳಿಸುವಷ್ಟು ಶಕ್ತಿಯುತವಾಗಿದೆ. ಮನಸ್ಸಿಗೆ ಮುದ ನೀಡುವ ಸಂಗೀತಕ್ಕೆ ಮನಸೋಲದವರೇ ಇಲ್ಲ ಎಂದು ಡಾ|ಅನ್ನದಾನಿ ಹಿರೇಮಠ ಹೇಳಿದರು.
ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆ ಬಳಗಾನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗದಗಿನ ಬಣ್ಣದ ಮನೆ ಆರ್ಟ್ ಅಡ್ಡಾದಲ್ಲಿ ನಡೆದ ಸಂಗೀತ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭವ್ಯ ಭಾರತದ ಇತಿಹಾಸದ ಪುಟಗಳನ್ನು ನಾವು ನೋಡುತ್ತಾ ಹೋದಂತೆ ಹಿಂದಿನ ಕಾಲದಿಂದಲೂ ನಾವು ರಾಜಮಹಾರಾಜರ ಆಸ್ಥಾನದಲ್ಲಿ ಸಂಗೀತ ಮತ್ತು ನೃತ್ಯಗಳು ನಡೆಯುತ್ತಿದ್ದೇವೆಂದು ನಾವು ಇತಿಹಾಸದ ಪುಟಗಳಲ್ಲಿ ಉಲ್ಲೇಖೀಸಿದೆ. ಅರಸರ ಆಸ್ಥಾನದಲ್ಲಿ ಸಂಜೆ ದೇವ ನರ್ತಕಿಯರು, ದಾಸಿಯರು ಎಂದು ಕರೆಯಲ್ಪಡುತ್ತಿದ್ದ ಕಲಾವಿದರು, ಸಂಗೀತ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾಜರು, ಸಾಮಂತರು ಮತ್ತು ಮಂತ್ರಿಗಳು ಮನರಂಜನಾ ಕೂಟವನ್ನು ಸವಿಯುತ್ತಿದ್ದರು ಎಂದು ವಿವರಿಸಿದರು.
ಮುಖ್ಯ ಅತಿಥಿ ಪ್ರೊ. ಕೆ.ಎಚ್.ಬೇಲೂರ ಮಾತನಾಡಿ, ಸಂಗೀತಕ್ಕೆ ಅದ್ಭುತ ಶಕ್ತಿ ಇದೆ. ಮನುಷ್ಯನಿಗೆ ಯಾವುದೇ ರೀತಿಯ ಮಾನಸಿಕ ಒತ್ತಡ ಬಂದಾಗ, ಉತ್ತಮ ಸಂಗೀತವನ್ನು ಆಲಿಸುವುದರಿಂದ ಮನಸ್ಸು ಹಗುರವಾಗುತ್ತದೆ ಎಂದರು.
ಬಣ್ಣದ ಮನೆಯ ಆರ್ಟ್ ಅಡ್ಡಾ ಅಧ್ಯಕ್ಷ ವಿಜಯ ಕಿರೇಸೂರ ಮಾತನಾಡಿ, ಗದಗನ್ನು ಸಂಗೀತ ಕ್ಷೇತ್ರವನ್ನಾಗಿಸಿ ಕೀರ್ತಿ ಪಂ.ಪಂಚಾಕ್ಷರಿ ಗವಾಯಿಗಳು ಹಾಗೂ ಶ್ರೀ ಗುರು ಪುಟ್ಟರಾಜ ಗುರುಗಳಿಗೆ ಸಲ್ಲುತ್ತದೆ. ಕಲಾವಿದರು ಸಮಾಜಕ್ಕೆ ಸಂದೇಶ ವಾಹಕರಿದ್ದಂತೆ ಎಂದರು. ಸಂಸ್ಥೆಯ ಅಧ್ಯಕ್ಷ ಸೋಮಶೇಖರ ದೊಡ್ಡಮನೆ ಮಾತನಾಡಿದರು. ವೇದಿಕೆ ಮೇಲೆ ಜಾನಪದ ಕಲಾವಿದ ಬಸವರಾಜ ಈರಣ್ಣವರ, ಶಿವಪುತ್ರಪ್ಪ ಕಾಳೆ, ಗೌಡಪ್ಪ ಬೊಮ್ಮಪ್ಪನವರ ಇತರರು ಉಪಸ್ಥಿತರಿದ್ದರು.