ಬೆಂಗಳೂರು: ಆಧುನಿಕ ಯುಗದ ಅಭಿರುಚಿಗೆ ತಕ್ಕಂತೆ ಸಂಗೀತವನ್ನು ಹೊಸತನದೊಂದಿಗೆ ರಚಿಸುವ ಅಗತ್ಯತೆ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಗಾಯನ ಸಮಾಜ ಸಂತ ತ್ಯಾಗರಾಜಸ್ವಾಮಿ 251ನೇ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ 48ನೇ ಸಂಗೀತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಲಲಿತ ಕಲೆಗಳ ಮುಂದೆ ದೊಡ್ಡ ಸವಾಲಿದೆ. ಇವು ಕೇವಲ ಶಾಸ್ತ್ರೀಯವಾಗಿಯಷ್ಟೇ ಉಳಿಯಬಾರದು. ಜನಪರವಾಗಿರಬೇಕು ಮತ್ತು ಜನಪ್ರಿಯವಾಗಬೇಕು ಎಂದು ಹೇಳಿದರು.
ನೂರಾರು ವರ್ಷಗಳ ಇತಿಹಾಸವಿರುವ ಶಾಸ್ತ್ರೀಯ ಸಂಗೀತಗಳು ಆಗಿನ ಕಾಲಕ್ಕೆ ಗೌರವಯುತವಾಗಿತ್ತು ನಿಜ. ಆದರೆ, ಈಗ ಅನೇಕ ಸಂಗತಿಗಳ ಮುಖಾಂತರವಾಗಿ ಆ ಮನೋಧರ್ಮದಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗುತ್ತಾ ಬಂದಿವೆ. ಹಾಗಾಗಿ ಈ ಕಾಲಘಟ್ಟಕ್ಕೆ ತಕ್ಕಂತೆ ಹಿಂದಿನ ಗಟ್ಟಿಯಾದ ಬೇರನ್ನೇ ಆಶ್ರಯಿಸಿ ಈಗಿನ ಅಭಿರುಚಿಗೆ ತಕ್ಕಂತೆ ರಾಗ, ವಿನ್ಯಾಸಗಳಲ್ಲೂ ಬದಲಾವಣೆಯಾಗಬೇಕಿದೆ ಎಂದು ತಿಳಿಸಿದರು.
ಮಕ್ಕಳಿಗೆ ಈಗಿನಿಂದಲೇ ಶಾಸ್ತ್ರೀಯ ಸಂಗೀತ ಪ್ರಕಾರಗಳನ್ನು ಪರಿಚಯಿಸುವ ಅಗತ್ಯವಿದೆ. ನಮ್ಮ ತಂದೆ ನಾರಾಯಣಶಾಸಿ ಅವರಿಗೆ ಸಂಗೀತ ಕೇಳುವ ಆಸಕ್ತಿ ಇತ್ತು. ಗಂಗೂಬಾಯಿ ಹಾನಗಲ್, ಪಂಡಿತ್ ಭೀಮಸೇನ್ ಜೋಷಿ ಸೇರಿದಂತೆ ಅನೇಕರ ಸಂಗೀತ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಸಂಗೀತ ಜ್ಞಾನವಿಲ್ಲದಿದ್ದರೂ, ಹಿಂದುಸ್ತಾನಿ ಸಂಗೀತ ಕೇಳಿದ್ದರಿಂದ ಇಂದು ಸದಭಿರುಚಿ ಬರಲು ಕಾರಣವಾಗಿದೆ. ಮಕ್ಕಳಲ್ಲಿ ಸಂಗೀತಾಸಕ್ತಿ ಬೆಳೆಸಿದರೆ, ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ ಎಂದರು.
ಗಾಯನ ಸಮಾಜ ಮುಂದಿನ ದಿನಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಸಂಗೀತ ಸಂಸ್ಥೆಗಳ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮಗಳ ಆಯೋಜನೆ ಮಾಡಿದರೆ, ಯುವಜನರು ಹೆಚ್ಚಾಗಿ ಸಂಗೀತದಲ್ಲಿ ಪಾಲ್ಗೊಳ್ಳಲು ಸಹಾಯವಾಗುತ್ತದೆ. ಪ್ರತಿವರ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಕರ್ಣಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತಾಸಕ್ತ ಯುವಜನರಿಗೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಸಾನಿಧ್ಯವನ್ನು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ವಹಿಸಿದ್ದರು. ಮಯ್ನಾಸ್ ಕಂಪನಿ ಮಾಲೀಕ ಡಾ.ಪಿ.ಸದಾನಂದಮಯ್ಯ, ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ.ಪ್ರಸಾದ್ ಉಪಸ್ಥಿತರಿದ್ದರು.
ದತ್ತಿ: ಬೆಂಗಳೂರು ಗಾಯನ ಸಮಾಜದಲ್ಲಿ ತಮ್ಮ ತಂದೆ ನಾರಾಯಣಶಾಸಿ ಅವರ ಹೆಸರಿನಲ್ಲಿ ದತ್ತಿ ಸ್ಥಾಪಿಸಲು ಕೇಂದ್ರ ಸಚಿವ ಅನಂತಕುಮಾರ್ 11 ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.