Advertisement

ಮಧುರಗೀತೆಗಳಿಂದ ಮಂತ್ರಮುಗ್ಧಗೊಳಿಸಿದ “ಇನಿದನಿ’

12:30 AM Feb 01, 2019 | |

ಅದೊಂದು ಸುಮಧುರ ಗೀತೆಗಳ ಅಲೆ. ಅಲ್ಲಿಗೆ ಬಂದವರೆಲ್ಲರೂ ಮೂರ್ನಾಲ್ಕು ದಶಕದ ಹಿಂದಿನ ಹಾಡುಗಳನ್ನು ಕೇಳುತ್ತಾ ಭಾವಪರವಶವಾದರು. ಇದಕ್ಕೆಲ್ಲ ಸಾಕ್ಷಿಯಾದದ್ದು ಕಲಾಕ್ಷೇತ್ರ ಕುಂದಾಪುರ 9 ವರ್ಷಗಳಿಂದ ಕುಂದಾಪುರದದಲ್ಲಿ ಆಯೋಜಿಸುತ್ತಿರುವ “ಇನಿದನಿ’ ಸಂಗೀತ ಸಂಜೆ ಮಧುರ ಗೀತೆಗಳ ಗಾಯನ.

Advertisement

ಕುಂದಾಪುರದ ಬೋರ್ಡ್‌ ಹೈಸ್ಕೂಲ್‌ ಮೈದಾನ ದಲ್ಲಿ ಕಿಶೋರ್‌ ಕುಮಾರ್‌ ಸಾರಥ್ಯ ದ ಕಲಾಕ್ಷೇತ್ರ ಕುಂದಾಪುರದ ವತಿಯಿಂದ ನಡೆದ ಇನಿದನಿ ಸಂಗೀತ ಸಂಜೆಯೂ ಹಳೆಯ ಚಿತ್ರಗೀತೆಗಳನ್ನು ಮತ್ತೂಮ್ಮೆ ಕೇಳುವ ಅಪೂರ್ವ ಅವಕಾಶವನ್ನು ಒದಗಿಸಿತ್ತು. 

ಗಗನದಲಿ ಮಳೆಯ ದಿನ ಗುಡುಗಿನ ತನನ ಆ ತನನ ದಿನ ಧರಣಿಯಲಿ ಹಸುರಿನ ಜನನ, ನಗುವ ನಯನ ಮಧುರ ಮೌನ, ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ, ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಹೀಗೆ ಅನೇಕ ಹಾಡುಗಳು ಸುಪ್ರಸಿದ್ಧ ಕಲಾವಿದರ ಕಂಠಸಿರಿಯಲ್ಲಿ ಮೂಡಿ ಬಂದವು. 

ಸಂಗೀತ ಸಂಜೆಗೆ ಜನಸಾಗರ 
ಕೇವಲ 150 ಮಂದಿ ನೋಡುಗರಿಂದ ಆರಂಭಗೊಂಡ ಈ “ಇನಿದನಿ’ ಸಂಗೀತ ಸಂಜೆಗೆ ಈ ಕಳೆದ ಬಾರಿ 8 ಸಾವಿರಕ್ಕೂ ಹೆಚ್ಚು ಮಂದಿ ಕೇಳುಗರು ಬಂದಿದ್ದರೆ, ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಮಂದಿ ತಮ್ಮಿಷ್ಟ ಹಳೆಯ ಹಾಡುಗಳನ್ನು ಮೆಲುಕು ಹಾಕಲು ಬಂದಿದ್ದು ವಿಶೇಷ. ಖ್ಯಾತ ಗಾಯಕರಾದ ಅಜಯ್‌ ವಾರಿಯರ್‌, ಶೃತಿ ಭಿಡೆ, ದಿವ್ಯ ರಾಮಚಂದ್ರ, ವಿನಯ್‌ ಅಡಿಗ, ನಯನ ರಾಜಗೋಪಾಲ್‌, ವೈ.ಎನ್‌. ರವೀಂದ್ರ, ಅಶೋಕ್‌ ಸಾರಂಗ್‌, ಸ್ಥಳೀಯ ಪ್ರತಿಭೆ ಅನನ್ಯ ಕಾಂಚನ್‌ ಅವರು ನೆಚ್ಚಿನ ಗೀತೆಗಳಿಗೆ ಧ್ವನಿಯಾದರು. ಇವರೆಲ್ಲರೂ ಅಂದಿನ ಗೀತೆಗಳ ಗಾಯಕರಂತೆ ತಮ್ಮ ಮಧುರ ಕಂಠದಿಂದ ಹಾಡಿನ ಭಾವ, ರಸಕ್ಕೆ ಅನುಗುಣವಾಗಿ ಧ್ವನಿಯಲ್ಲಿ ಏರಿಳಿತ ತೋರಿ ಮಾಧುರ್ಯ ಗೀತೆಗಳನ್ನು ಹಾಡಿ, ಪ್ರಾವಿಣ್ಯತೆ ಮೆರೆದಿರುವುದು ವಿಶೇಷ. 

 ಡ್ರಮ್ಸ್‌ ವಾದಕ ಕಾರ್ಕಳ ದ ವಾಮನ್‌ ಹಾಗೂ ತಬಲ ವಾದಕ ರಾಜೇಶ್‌ ಭಾಗವತ್‌ ಮೋಡಿ ಮಾಡಿ ದರೆ, ಗಿಟಾರ್‌ನಲ್ಲಿ ರಾಜಗೋಪಾಲ್‌, ಬೇಸ್‌ ಗಿಟಾರ್‌ನಲ್ಲಿ ಟೋನಿ ಡಿಸಿಲ್ವ ಉಡುಪಿ, ಕೊಳಲು ಜಯ ಪ್ರಕಾಶ್‌, ಸಿತಾರ್‌ನಲ್ಲಿ ಸುಮುಖ್‌, ಕೀಬೋರ್ಡ್‌ನಲ್ಲಿ ದೀಪಕ್‌ ಶಿವಮೊಗ್ಗ, ಶಿಜಿಮೋನ್‌, ಕಾಂಗೊದಲ್ಲಿ ಗಣೇಶ್‌ ಹೊಸಬೆಟ್ಟು ಸುರತ್ಕಲ್‌, ಡೋಲಕ್‌ನಲ್ಲಿ ಭಾಸ್ಕರ ಕುಂಬ್ಳೆ ಹಿನ್ನೆಲೆಯಲ್ಲಿ ಸಹಕರಿಸಿದರೆ, ಕೆ.ವಿ. ರಮಣ್‌ ಮೂಡಬಿದಿರೆ ನಿರೂಪಣೆ ಸಂಗೀತ ಸಮ್ಮೊಹನಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟಿತು. 

Advertisement

70-80 ರ ದಶಕದ ಹಾಡುಗಳನ್ನು ಕೇಳುತ್ತಿದ್ದರೆ, ಯಾವುದೋ ಒಂದು ಲೋಕಕ್ಕೆ ಕರೆದೊಯ್ಯುವಂತೆ ಭಾಸವಾಗುತ್ತಿದೆ. ಕಿವಿಯಲ್ಲಿ ಒಂದಾದ ಮೇಲೊಂದರಂತೆ ಆ ಹಳೆಯ ಹಾಡುಗಳು ಮೊಳಗುತ್ತಲೇ ಇರುತ್ತವೆ. ಒಟ್ಟಾರೆ ಸುಮಾರು 4 ಗಂಟೆಗೂ ಹೆಚ್ಚು ಕಾಲ ನಡೆದ ಈ ಇನಿದನಿ ಸಂಗೀತ ಸಂಜೆಯೂ ಮಧುರ ಗೀತೆಗಳಿಂದಲೇ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. 

ಪ್ರಶಾಂತ್‌ ಪಾದೆ 

Advertisement

Udayavani is now on Telegram. Click here to join our channel and stay updated with the latest news.

Next