Advertisement

ಸಂಗೀತ ಪ್ರಾತ್ಯಕ್ಷಿಕೆ –ಹಾಡುಗಾರಿಕೆ

05:31 PM Jun 27, 2019 | mahesh |

ಉಡುಪಿಯ ಎಮ್‌.ಜಿ.ಎಮ್‌ ಕಾಲೇಜಿನಲ್ಲಿ ಜೂ.16ರಂದು ರಾಗಧನ ಹಾಗೂ ಎಮ್‌.ಜಿ.ಎಮ್‌. ಕಾಲೇಜಿನ ಸಹಯೋಗದಲ್ಲಿ ಕಲೈಮಾಮಣಿ ಡಾ| ಸುಂದರ್‌ ಚೆನ್ನೈ ಅವರಿಂದ ಹಾಡುಗಾರಿಕೆ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. ಸೌರಾಷ್ಟ್ರ ರಾಗದ ಪುರಂದರದಾಸರ “ಶರಣು ಸಿದ್ಧಿವಿನಾಯಕ’ದೊಂದಿಗೆ ಕಾರ್ಯಕ್ರಮ ಮೊದಲ್ಗೊಂಡಿತು. ಕರ್ನಾಟಕ ಸಂಗೀತ ಪಿತಾಮಹನ ಬಗ್ಗೆ ವಿವರಿಸಿದ ಬಳಿಕ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾ ಶಾಸ್ತ್ರಿಗಳು, ಗೋಪಾಲಕೃಷ್ಣ ಭಾರತಿ, ಜಯದೇವ, ಪಾಪನಾಶಂ ಶಿವನ್‌, ಸ್ವಾತಿ ತಿರುನಾಳ್‌ ಮುಂತಾದ ವಾಗ್ಗೇಯಕಾರರ ವಿಷಯ, ಸಾಧನೆಗಳ ಬಗ್ಗೆ, ಜೀವನದ ಸ್ವಾರಸ್ಯಕರ ಘಟನೆಗಳ ಬಗ್ಗೆ ಮಾತನಾಡಿದರು. ಆಯಾಯ ವಾಗ್ಗೇಯಕಾರರಿಗೆ ಸಂಬಂಧಿಸಿದ ವಿವರಣೆಗಳೊಂದಿಗೆ, ಅವರ ರಚನೆಗಳನ್ನು ಹಾಡಿ ಅರ್ಥೈಸಿದರು. ಹೀಗೆ ಮೂಡಿ ಬಂದ ಕೃತಿಗಳು, ನಾದಾತನುಮನಿಶಂ (ಚಿತ್ತರಂಜನಿ ), ಚಿಂತಯಾಮಿ ಕಂದಮೂಲ (ಭೈರವಿ), ದೇವಿ ಬ್ರೋವ ಸಮಯಮಿದೇ (ಚಿಂತಾಮಣಿ), ಸಭಾಪತಿಕಿ (ಅಭೋಗಿ), ಸ್ಮರತಿಮುಮಾಂ ಸದಯಂ(ಬೇಹಾಗ್‌), ನಿಜಗಾದಸಾ ಯದುನಂದನೇ(ಸಿಂಧು ಭೈರವಿ), ಉನ್ನೆಯೆಲ್ಲಾ ವೇರೆಗತಿ (ಕಲ್ಯಾಣಿ), ಶ್ರೀ ರಾಮಚಂದ್ರ ಕೃಪಾಳು (ಭಜನ್‌), ಮುದ್ದುಗಾರು ಯಶೋದ (ಕುರಂಜಿ). ವಿಸ್ತಾರ ಹಾಗೂ ಮನೋಧರ್ಮಕ್ಕಾಗಿ ಅಭೋಗಿ ಮತ್ತು ಕಲ್ಯಾಣಿ ರಾಗಗಳನ್ನು ಆರಿಸಿಕೊಂಡರು. ಸ್ಡರ ಪ್ರಸ್ತಾರಗಳು ಸರಳವಾಗಿದ್ದು ಸರ್ವ ಲಘುವಿನಲ್ಲಿ ರಾಗದ ಸೊಬಗನ್ನು ತೆರೆದು ತೋರಿಸುವಂತಿತ್ತು. ಲೆಕ್ಕಾಚಾರದ ಕ್ಲಿಷ್ಟಕರ ಮುಕ್ತಾಯಗಳನ್ನು ಅಗತ್ಯವಿದ್ದಷ್ಟು ಮಾತ್ರ ಬಳಸಲಾಗಿತ್ತು. ಗಾಯಕರು ಕರ್ನಾಟಕ ಶಾಸ್ತ್ರೀಯ ಸಂಗೀತದ ಶಾಸ್ತ್ರ‌ ವಿಭಾಗ‌ದಲ್ಲಿ ಹೆಚ್ಚು ರಸಗ್ರಾಹಿಗಳೂ, ಅರಿತವರೂ, ಬೋಧನಪ್ರಿಯರೂ ಆಗಿದ್ದಾರೆ. ವಿದ್ವತದರ್ಶನ ಎನ್ನುವುದಕ್ಕಿಂತ, ಅವರ ಹಾಡುಗಾರಿಕೆಯು ಪ್ರಾತ್ಯಕ್ಷಿಕೆಗೆ ಹೆಚ್ಚು ಪೂರಕವಾಗಿತ್ತು ಎಂದು ಹೇಳಬಹುದು. ಪ್ರಾತ್ಯಕ್ಷಿಕೆಯು ವಾಗ್ಗೇಯಕಾರರ ಕುರಿತಾಗಿದ್ದು ಬಹುತೇಕ ಕರ್ನಾಟಕ ಸಂಗೀತದ ಹೆಚ್ಚಿನ ರಚನಕಾರರನ್ನು ಒಳಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಗಣರಾಜ ಕಾರ್ಲೆ ಹಾಗೂ ನಿಕ್ಷಿತ್‌ ಟಿ. ಪುತ್ತೂರು ಕ್ರಮವಾಗಿ ಪಿಟೀಲು ಹಾಗೂ ಮೃದಂಗ ಸಹಕಾರವನ್ನಿತ್ತರು.

Advertisement

ವಿದ್ಯಾಲಕ್ಷ್ಮೀ ಕಡಿಯಾಳಿ

Advertisement

Udayavani is now on Telegram. Click here to join our channel and stay updated with the latest news.

Next