ರಾಗಧನದ ವಾರ್ಷಿಕ ಮಹಾಸಭೆಯ ಅಂಗವಾಗಿ ಮೇ 5ರಂದು ಎಮ್.ಜಿ.ಎಮ್. ಕಾಲೇಜಿನಲ್ಲಿ ಬಂಟ್ವಾಳದ ಡಾ| ಮಹೇಶ್ ಎಮ್. ಎಸ್. ಭಟ್ ಹಾಗೂ ಶಶಾಂಕ್ ಭಟ್ ಅವರ ಹಾಡುಗಾರಿಕೆ ನಡೆಯಿತು. ಕಲಾವಿದರು ಭೈರವಿಯ ಅಟತಾಳದ ವಿರಿಬೋಣಿ ವರ್ಣದಿಂದ ಹಾಡುಗಾರಿಕೆಯನ್ನು ಪ್ರಾರಂಭಿಸಿದರು. ಮುಂದೆ ನಾಟದಲ್ಲಿ ಮಾಣಿಕ್ಯ ವೀಣಾ ಶ್ಲೋಕದೊಂದಿಗೆ ಸರಸೀರುಹಾಸನಪ್ರಿಯೇ ಕೃತಿಯನ್ನು ಹಾಡಿ “ಸರಸ್ವತೀ’ ಯಲ್ಲಿ ಸ್ವರಪ್ರಸ್ತಾರವನ್ನು ಮಾಡಿದರು. ಮುಂದೆ ಲತಾಂಗಿಯಲ್ಲಿ”ಮರಿವೇರೆ’ ಕೃತಿಯನ್ನು ರಾಗಾಲಾಪನೆ ಹಾಗೂ ಕಲ್ಪನಾ ಸ್ವರಗಳೊಂದಿಗೆ ಪ್ರಸ್ತುತಿ ಪಡಿಸಿದರು. ಆ ಬಳಿಕ ಉತ್ತಮ ಸಂಗತಿಗಳೊಂದಿಗೆ ಜಗನ್ಮೋಹಿನಿಯ ಶೋಭಿಲ್ಲು, ಪ್ರಧಾನ ರಾಗವಾಗಿ ಕಾಂಭೋಜಿಯನ್ನು ಎತ್ತಿಕೊಂಡು ಒಳ್ಳೆಯ ಆಲಾಪನೆಯನ್ನೂ ಸ್ವರಪ್ರಸ್ತಾರವನ್ನೂ ಮರಕತವಲ್ಲೀಂ ಕೃತಿಯೊಂದಿಗೆ ನಿರೂಪಿಸಿದರು. ತರುವಾಯ ಲಘು ಪ್ರಸ್ತುತಿಗಳಾದ ಅಲ್ಲಿ ನೋಡಲು ರಾಮ ( ನಾಟಕುರಂಜಿ), ಆರಭಿ ರಾಗ ಪ್ರಿಯೇ ಶಂಕರೀ (ರಾಗಮಾಲಿಕೆ), ಸುರುಟಿಯಲ್ಲಿ ತಿಲ್ಲಾನ, ಹಾಗೂ ಮಧ್ಯಮಾವತಿಯ ವಿನಾಯಕುನಿವಲೆಯೊಂದಿಗೆ ಈ ಕಾರ್ಯಕ್ರಮ ಮುಕ್ತಾಯಗೊಂಡಿತು. ನಿರಾಯಾಸವಾಗಿ ಮಂದ್ರ, ತಾರಗಳೆರಡರಲ್ಲೂ ಸುಲಭವಾಗಿ ಸಂಚರಿಸಬಲ್ಲ ಕಂಠಸಿರಿ ಹಾಗೂ ಉತ್ತಮ ಪಾಠಾಂತರಗಳು ಈ ಗಾಯಕರಿಗೆ ಪೂರಕವಾದವು. ಆದರೆ ಯಾವುದಾದರೂ ಕೃತಿಗೆ ನೆರವಲ್ ಮಾಡಿದ್ದರೆ ಚೆನ್ನಾಗಿತ್ತು. ಈ ಕಛೇರಿಗೆ ಹೈದರಾಬಾದಿನ ಯುವ ಕಲಾವಿದೆ ಶಿವಾನಿ ಗಾಯತ್ರಿಯವರು ವಯೊಲಿನ್ ನುಡಿಸಿದರು. ಒಂದೊಂದು ರಾಗದಲ್ಲಿಯೂ, ರಾಗದ ಆಳದ ಒಳಹೊಕ್ಕು ಪರಿಪಕ್ವತೆಯಿಂದ ನುಡಿಸಿದ ಪರಿ ನೆನಪಿನಲ್ಲಿ ಉಳಿಯವಂತೆ ಮಾಡಿತು. ಹಾಗೆಯೇ ಗಾಯನಕ್ಕೆ ಬೇಕಾದ ರೀತಿಯಲ್ಲಿ ಮೃದಂಗ ನುಡಿಸಿ, ಇನ್ನೂ ಕೇಳಬೇಕೆಂದೆನಿಸುವ ರೀತಿಯಲ್ಲಿ ತನಿ ಆವರ್ತನವನ್ನು ನುಡಿಸಿದವರು ಮಂಗಳೂರಿನ ಸುನಾದ ಕೃಷ್ಣ ಆಮೈ.
ವಿದ್ಯಾಲಕ್ಷ್ಮೀ ಕಡಿಯಾಳಿ