ನವಲಗುಂದ: ಪಟ್ಟಣದ ನಾಗಲಿಂಗ ಸ್ವಾಮಿ ಮಠದ ಆರವಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ-ಹಿರಿಯ ಪತ್ರಕರ್ತ ಅನಂತ ಭೀ. ಸುಂಕದ ಅವರ ಗೀತ ಸಂಕಲನ (ಗೀತ ಚೈತನ್ಯ) ಪುಸ್ತಕ ಲೋಕಾರ್ಪಣೆಗೊಂಡಿತು. ಅಜಾತನಾಗಲಿಂಗ ಮಠ ವೀರೇಂದ್ರ ಸ್ವಾಮೀಜಿ ಮಾತನಾಡಿ,ಪುಸ್ತಕಗಳು ಜ್ಞಾನದ ಭಂಡಾರ.
ಓದಿನಿಂದ ಜ್ಞಾನದ ಜೊತೆಗೆ ಬದುಕಿನ ಬಲ ನೀಡುವ ಸಾಂಸ್ಕೃತಿಕ ಸ್ಪರ್ಶವೋ ಸಾಧ್ಯವಾಗುತ್ತದೆ. ಆದ್ದರಿಂದ ಸಾಹಿತ್ಯ ಜ್ಞಾನ-ಸಂಸ್ಕೃತಿಯ ಭಾಗ್ಯಕ್ಕಾಗಿ ಗ್ರಂಥಾಧ್ಯಯನ ಅಗತ್ಯ ಎಂದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪೊ| ಸಿ.ಎಸ್. ಹೊಸಮಠ ಅಧ್ಯಕ್ಷತೆ ವಹಿಸಿ, ಅನಂತ ಸುಂಕದರ ಸಾಹಿತ್ಯ ರಚನೆ ಬಹುಮುಖ್ಯವಾಗಿದೆ.
ಇವರ ಮೊದಲ ಕೃತಿ ಗೀತಾರಾಧನೆ ಮತ್ತು ಲೋಕಾರ್ಪಣೆಗೊಂಡ ಗೀತ ಚೈತನ್ಯದಲ್ಲೂ ಅವರ ಭಾವ ನಿರೂಪಣೆ, ಗೇಯತ್ವದೊಂದಿಗೆ ಗೀತಗಳ ಗಮನ ಸೆಳೆಯುತ್ತಿವೆ ಎಂದರು. ಹುರಕಡ್ಲಿ ಅಜ್ಜ ಕಲ್ಯಾಣ ಕೇಂದ್ರದ ಸಂಚಾಲಕ ಟಿ.ವಿ. ಮಹಾಂತೇಶ ಕೃತಿ ಲೋಕಾರ್ಪಣೆ ಮಾಡಿದರು.
ಶಾಸಕ ಎನ್.ಎಚ್. ಕೋನರಡ್ಡಿ,ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಚ್. ಸತೀಶ, ಸಂಕಲನ ಪ್ರಕಾಶಕರಾದ ಎಸ್.ಕೆ. ಪಾಟೀಲ, ನಿವೃತ್ತ ಪ್ರಾಚಾರ್ಯರಾದ ಪೊ| ಎಂ.ಕೆ. ಬೆಳಗಲಿ, ಎಚ್.ಜಿ. ಕುರ್ಲಕರ್ಣಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಗಿರೀಜಾ ಕೊಳಲಿನ, ಸದಸ್ಯರಾದ ಶ್ರೀಕಾಂತ ಪಾಟೀಲ,ಮಂಜುನಾಥ ಜಾಧವ, ವಿಶ್ವಾನಾಥ ಹೊಸುರ ಇದ್ದರು. ಸುಂಕದ ಅವರನ್ನು ಸತ್ಕರಿಸಲಾಯಿತು. ದೇವರಾಜ ಕರಿಯಪ್ಪನವರ ಸ್ವಾಗತಿಸಿದರು. ಡಿ.ಎಚ್. ಮಳಲಿ ನಿರೂಪಿಸಿದರು.ಬಸವರಾಜ ಹೊನ್ನಕುದರಿ ವಂದಿಸಿದರು.