Advertisement

ಮಳೆಗಾಲಕ್ಕೆ ಮಶ್ರೂಮ್‌ ಖಾದ್ಯಗಳು

11:04 PM Jul 11, 2019 | mahesh |

ಮಳೆಗಾಲ ಬಂತೆಂದರೆ ಕಲ್ಲಣಬೆ, ಕೊಡೆ ಅಣಬೆ ಅಲ್ಲಲ್ಲಿ ಸಿಗುತ್ತದೆ. ಮಶ್ರೂಮ್‌ನಿಂದ (ಅಣಬೆ) ವಿವಿಧ ರೀತಿಯ ಅಡುಗೆ ತಯಾರಿಸಬಹುದು. ಇದು ವಿಟಾಮಿನ್‌ “ಡಿ’ ಹೊಂದಿರುವುದಲ್ಲದೆ ದೇಹದ ಜೀವಕೋಶ ರಕ್ಷಿಸಲು ಸಹಕಾರಿಯಾಗಿದೆ. ದೇಹದ ತೂಕ ನಿರ್ವಹಣೆಗೆ ಮತ್ತು ಬಾಯಿರುಚಿ ಹೆಚ್ಚಿಸಲು ಮಶ್ರೂಮ್‌ನ ಸಾರು, ಮಸಾಲಾ, ಪಲಾವ್‌, ಮಶ್ರೂಮ್‌ ದೋಸೆ, ಮಶ್ರೂಮ್‌ ಸಾಂಗ್‌ ಇತ್ಯಾದಿ ಮಾಡಿ ಸವಿಯಿರಿ.

Advertisement

ಮಶ್ರೂಮ್‌ ಸಾಂಗ್‌ (ಅಣಬೆ)
ಬೇಕಾಗುವ ಸಾಮಗ್ರಿ: ಮಶ್ರೂಮ್‌- 2 ಕಪ್‌, ಮೆಣಸಿನ ಹುಡಿ- 3 ಚಮಚ, ನೀರುಳ್ಳಿ- 2, ಟೊಮೆಟೊ- 2, ಕೊತ್ತಂಬರಿಸೊಪ್ಪು , ಎಣ್ಣೆ- 4 ಚಮಚ, ಅರಸಿನ ಹುಡಿ- 1/2 ಚಮಚ, ಉಪ್ಪು ರುಚಿಗೆ, ಸಾಸಿವೆ, ಕರಿಬೇವು ಸೊಪ್ಪು ಒಗ್ಗರಣೆಗೆ.

ತಯಾರಿಸುವ ವಿಧಾನ: ಮಶ್ರೂಮ್‌ ಶುಚಿಗೊಳಿಸಿ ಸ್ವಲ್ಪ ನೀರು ಹಾಕಿ ಬೇಯಿಸಿಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ತಯಾರಿಸಿ. ನೀರುಳ್ಳಿ ಸಣ್ಣಗೆ ಹೆಚ್ಚಿ ಹಾಕಿ, ಹಸಿವಾಸನೆ ಹೋದ ಮೇಲೆ ಟೊಮೆಟೊ ಹಾಕಿ ಹುರಿದು ಅರಸಿನ ಹುಡಿ ಹಾಕಿ ಬೇಯಿಸಿಟ್ಟ ಮಶ್ರೂಮ್‌, ಉಪ್ಪು , ಕೊತ್ತಂಬರಿಸೊಪ್ಪು ಹಾಕಿ ಮುಚ್ಚಿ ಕುದಿಸಿರಿ. ಊಟಕ್ಕೆ, ಪೂರಿ, ಚಪಾತಿ, ದೊಸೆಯೊಂದಿಗೆ ಅತ್ಯಂತ ರುಚಿಕರ.

ಮಶ್ರೂಮ್‌ ಪಲಾವ್‌
ಬೇಕಾಗುವ ಸಾಮಗ್ರಿ: ಶುಚಿಗೊಳಿಸಿ ತುಂಡರಿಸಿದ ಮಶ್ರೂಮ್‌- 2 ಕಪ್‌, ಈರುಳ್ಳಿ ಚೂರು- 2 ಕಪ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌- 1 ಚಮಚ, ಹಸಿ ಬಟಾಣಿ- 1/2 ಕಪ್‌, ಚಕ್ಕೆ ತುಂಡು- 1 ಇಂಚು, ತೇಜ್‌ಪತ್ತಾ- 2, ಜಜ್ಜಿದ ಕಾಳುಮೆಣ ಸ್ವಲ್ಪ, ಬಾಸುಮತಿ ಅಕ್ಕಿ ಇಲ್ಲವೆ ಗಂಧಸಾಲೆ ಅಕ್ಕಿ 1 ಕಪ್‌, ಕ್ಯಾರೆಟ್‌ ತುರಿ- 1/2 ಕಪ್‌, ಅರಸಿನ ಪುಡಿ- 1 ಚಮಚ, ಎಣ್ಣೆ- 4 ಚಮಚ, ತುಪ್ಪ- 2 ಚಮಚ.

ತಯಾರಿಸುವ ವಿಧಾನ: ಕುಕ್ಕರ್‌ ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಈರುಳ್ಳಿ ಚೂರು ಬಾಡಿಸಿ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹಸಿವಾಸನೆ ಹೋಗುವವರೆಗೆ ಕೈಯಾಡಿಸಿ. ಕ್ಯಾರೆಟ್‌ ತುರಿ, ಬಟಾಣಿ, ಅರಸಿನ ಹುಡಿ, ಜಜ್ಜಿದ ಚಕ್ಕೆ, ಕಾಳುಮೆಣಸು, ತೇಜ್‌ಪತ್ತಾ, ಉದ್ದಕ್ಕೆ ಸೀಳಿದ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನ ಚೂರು, ತುಪ್ಪ , ಮಶ್ರೂಮ್‌, ಉಪ್ಪು ಹಾಕಿ 2 ಕಪ್‌ ನೀರು ಹಾಕಿ. ಕುಕ್ಕರ್‌ ಮುಚ್ಚಿ ಎರಡು ವಿಸಿಲ್‌ ಬಳಿಕ ಗ್ಯಾಸ್‌ ಸಿಮ್‌ನಲ್ಲಿಟ್ಟು 2 ನಿಮಿಷ ಇಡಿ. ಟೊಮೆಟೊ, ಸೌತೆ, ಈರುಳ್ಳಿ ಮೊಸರಿ ಸಲಾಡ್‌ ಜೊತೆ ಸವಿಯಿರಿ.

Advertisement

ಮಶ್ರೂಮ್‌ ಸಾನ್ನಣ (ಖಾರದೋಸೆ)
ಬೇಕಾಗುವ ಸಾಮಗ್ರಿ: ಮಶ್ರೂಮ್‌- 2 ಕಪ್‌, ಅಕ್ಕಿಹಿಟ್ಟು- 1 ಕಪ್‌, ಕೆಂಪುಮೆಣಸಿನ ಹುಡಿ- 3 ಚಮಚ, ಹುಣಸೆಹಣ್ಣು- ಗೋಲಿ ಗಾತ್ರ, ಬೆಲ್ಲ ಚಿಕ್ಕ ತುಂಡು, ರುಚಿಗೆ ಉಪ್ಪು , ದೋಸೆ ತೆಗೆಯಲು ಎಣ್ಣೆ.

ತಯಾರಿಸುವ ವಿಧಾನ: ಮಶ್ರೂಮ್‌ ಸ್ವತ್ಛಗೊಳಿಸಿಡಿ. ಒಂದು ಪಾತ್ರೆಯಲ್ಲಿ ಅಕ್ಕಿಹಿಟ್ಟು , ಮೆಣಸಿನ ಹುಡಿ, ಹುಣಸೆಹಣ್ಣಿನ ರಸ, ತುರಿದ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕಲಸಿ ಮಶ್ರೂಮ್‌ ಚೂರು ಹಾಕಿ ಪುನಃ ಚೆನ್ನಾಗಿ ತಿರುವಿರಿ. ದೋಸೆ ಕಾವಲಿ ಕಾದ ನಂತರ ಎಣ್ಣೆ ಹಾಕಿ ತೆಳುವಾದ ದೋಸೆ ಹಾಕಿ ಎರಡೂ ಬದಿ ಕಾಯಿಸಿರಿ. ಊಟದೊಡನೆ ಸವಿಯಲು ರುಚಿ.

ಅಣಬೆ (ಮಶ್ರೂಮ್‌) ಸಾರು
ಬೇಕಾಗುವ ಸಾಮಗ್ರಿ: ಮಶ್ರೂಮ್‌- 1 ಕಪ್‌, ಈರುಳ್ಳಿ- 2, ಟೊಮ್ಯಾಟೊ- 1, ಖಾರದ ಪುಡಿ- 2 ಚಮಚ, ಧನಿಯಾಪುಡಿ- 1 ಚಮಚ, ಶುಂಠಿ ಪೇಸ್ಟ್‌- 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ , ಕಾಯಿತುರಿ- 1/2 ಕಪ್‌, ಒಗ್ಗರಣೆಗೆ ಕರಿಬೇವು, ಸಾಸಿವೆ, ಎಣ್ಣೆ. ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಈರುಳ್ಳಿ, ಟೊಮ್ಯಾಟೊ, ಶುಂಠಿ ಪೇಸ್ಟ್‌, ಧನಿಯಾ ಪುಡಿ, ಖಾರದ ಪುಡಿ, ತೆಂಗಿನಕಾಯಿ ರುಬ್ಬಿ ಪಾತ್ರೆಗೆ ಹಾಕಿ ಉಪ್ಪು ಹಾಕಿಡಿ. ಅಣಬೆಯನ್ನು ಶುಚಿಗೊಳಿಸಿ ತೊಳೆದು ಚಿಕ್ಕದಾಗಿ ತುಂಡರಿಸಿ. ಸಾರಿನ ಪಾತ್ರೆಗೆ ಹಾಕಿ ಕೊತ್ತಂಬರಿ ಸೊಪ್ಪನ್ನು ಹಾಕಿ ಬೇಯಿಸಿ ಕರಿಬೇವು ಸಾಸಿವೆ ಒಗ್ಗರಣೆ ಮಾಡಿ ಹಾಕಿ ಮುಚ್ಚಿಡಿ.

ಮಳೆಗಾಲದಲ್ಲಿ ಅನ್ನದೊಂದಿಗೆ ಕಲಸಿ ಸೇವಿಸಿದರೆ ನಾಲಗೆ ರುಚಿ ಹೆಚ್ಚುವುದು. ಸಾರನ್ನು ಕುಡಿದರೂ ಆರೋಗ್ಯಕಾರಿ.

ಎಸ್‌. ಜಯಶ್ರೀ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next