Advertisement

ಅಣಬೆಯಿಂದ ಆದಾಯ

07:18 PM Mar 01, 2020 | Sriram |

ಕೃಷಿ ಕೆಲಸಗಳಲ್ಲಿ ಮಹಿಳೆಯರ ಸಹಕಾರ ಅಗತ್ಯವಾಗಿ ಬೇಕಾಗುತ್ತದೆ. ಅದರೆ, ತಾವೇ ಮುಂದೆ ನಿಂತು ಕೃಷಿಯಲ್ಲಿ ತೊಡಗುವ ಮಹಿಳೆಯರು ಅಪರೂಪ. ಈ ಸಾಲಿಗೆ ಸೇರ್ಪಡೆಗೊಳ್ಳುತ್ತಾರೆ ಗಂಗಾವತಿಯ ರೈತ ಮಹಿಳೆ ವಾಣಿಶ್ರೀ. ಅಣಬೆ ಕೃಷಿಯಲ್ಲಿ ತೊಡಗಿರುವ ಅವರು ಸ್ನಾತಕೋತ್ತರ ಪದವೀಧರೆ ಎನ್ನುವುದು ಇನ್ನೊಂದು ಅಚ್ಚರಿ.

Advertisement

ದೂರದರ್ಶನ, ದಿನಪತ್ರಿಕೆಗಳ ಮೂಲಕ ಅಣಬೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಸಿಕೊಂಡ ವಾಣಿಶ್ರೀಯವರು ಪತಿ ವೀರೇಶ್‌ರೊಂದಿಗೆ ಚರ್ಚಿಸಿ, ಸಮೀಪದ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳ ಸಲಹೆಯಂತೆ ಕೊಪ್ಪಳದ ಹುಲಿಗಿಯಲ್ಲಿ ಅಣಬೆ ಬೇಸಾಯ ತರಬೇತಿ ಪಡೆದುಕೊಂಡರು. ತಮ್ಮ 60×40 ಚದರ ಅಡಿ ಜಾಗದಲ್ಲಿ ಸುಮಾರು 3 ಲಕ್ಷ ವೆಚ್ಚದಲ್ಲಿ ಕತ್ತಲೆ ಕೋಣೆ ಮತ್ತು ಬೆಳಕಿನ ಕೋಣೆಗಳುಳ್ಳ ವುಡನ್‌ ಶೆಡ್‌ ನಿರ್ಮಿಸಿಕೊಂಡು. ಹುಲ್ಲು ಕತ್ತರಿಸುವ ಯಂತ್ರ, ಹಸಿರು ನೆರಳಿನ ಪರದೆ, ನೀರು ಸಿಂಪಡಣೆಗೆ ಬೇಕಾದ ಸಲಕರಣೆಗಳನ್ನು ಕೊಂಡುಕೊಂಡು, ಶೆಡ್‌ನ‌ಲ್ಲಿಯೇ ನೀರಿನ ತೊಟ್ಟಿ ನಿರ್ಮಿಸಿಕೊಂಡರು. ಇಂದು ಒಣಹುಲ್ಲನ್ನು ಬಳಸಿಕೊಂಡು ರಾಸಾಯನಿಕ ಮುಕ್ತ ಅಣಬೆಯನ್ನು ಬೆಳೆಯುತ್ತಿದ್ದಾರೆ.

ಕೃಷಿ ವಿಧಾನ
ಒಂದೊಂದು ಇಂಚಿನಷ್ಟು ಅಳತೆಯ ನೆಲ್ಲು ಹುಲ್ಲನ್ನು ಕತ್ತರಿಸಿಕೊಂಡು, ಫಾರ್ಮಾಲಿನ್‌ ಹಾಗೂ ಕಾರ್ಬನ್‌ಡೈಜಿನ್‌ ಮಿಶ್ರಿತ ನೀರಿನಲ್ಲಿ ಕನಿಷ್ಠ 12 ಗಂಟೆಗಳವರೆಗೂ ನೆನೆಸಿಡುತ್ತಾರೆ. ತದನಂತರ ನೀರನ್ನೆಲ್ಲಾ ಬಸಿದು, ಇನ್ನೂ ಸ್ವಲ್ಪ ತೇವಾಂಶ ಇರುವಂತೆಯೇ 18- 20 ಇಂಚಿನಷ್ಟು ಉದ್ದದ ಪಾಲಿಥೀನ್‌ ಕವರಿನ ಚೀಲಗಳಲ್ಲಿ ಒಂದು ಇಂಚು ಹುಲ್ಲು, ತದನಂತರ ಅಣಬೆ ಬೀಜಗಳನ್ನು ಹಾಕಲಾಗುತ್ತದೆ. ಅದೇ ರೀತಿ ಪ್ರತಿ ಚೀಲಗಳಲ್ಲಿಯೂ ಮೂರರಿಂದ ನಾಲ್ಕು ಲೇಯರ್‌ಗಳನ್ನು ಮಾಡುತ್ತಾರೆ. ಕೊನೆಗೆ ಚೀಲವ‌ನ್ನು ಮುಚ್ಚಿ, ಗಾಳಿಗಾಗಿ ಸಣ್ಣ ಸಣ್ಣ ಕಿಂಡಿಗಳನ್ನು ಮಾಡಿ ಸುಮಾರು 30 ರಿಂದ 32 ಡಿಗ್ರಿ ಉಷ್ಣಾಂಶವಿರುವ ಹಸಿರು ಪರದೆಯುಳ್ಳ ಕತ್ತಲೆಯ ಕೋಣೆಯಲ್ಲಿಡುತ್ತಾರೆ. ಹೀಗೆ ಮಾಡಿಟ್ಟ ದಿನಾಂಕವನ್ನು ಗುರುತು ಮಾಡಿಟ್ಟುಕೊಳ್ಳುತ್ತಾರೆ. ಹದಿನೈದರಿಂದ ಇಪ್ಪತ್ತು ದಿನಗಳೊಳಗೆ ಫಾರ್ಮಲಿನ್‌ನಿಂದಾಗಿ ಹುಲ್ಲಿನ ಭಾಗವೆಲ್ಲಾ ಬಿಳಿಯಾಗಿರುತ್ತದೆ. ತದನಂತರ ಬೀಜ ಬಿತ್ತನೆಯಾಗಿರುವ ಪಾಲಿಥೀನ್‌ ಕವರಿನ ಚೀಲಗಳನ್ನು ಬೆಳಕಿನ ಕೋಣೆಗೆ ಸ್ಥಳಾಂತರಿಸುತ್ತಾರೆ. ಇಲ್ಲಿಂದ ದಿನಂಪ್ರತಿ ಮೂರು ಬಾರಿಯಂತೆ ನೀರನ್ನು ಸಿಂಪಡಿಸಬೇಕಾಗುತ್ತದೆ. ಇದಾಗಿ ನಾಲ್ಕೇ ದಿನಕ್ಕೆ ಅಣಬೆಯು ಕಟಾವಿಗೆ ಸಿದ್ಧವಾಗುತ್ತದೆ. ಆರಂಭಿಕ ಹಂತದಲ್ಲಿ ಮಾತ್ರ ಒಂದು ತಿಂಗಳಷ್ಟು ಸಮಯ ತೆಗೆದುಕೊಳ್ಳುತ್ತದೆಯಾದರೂ ನಂತರದ ಹಂತದಲ್ಲಿ ವಾರಕ್ಕೊಮ್ಮೆ ಕನಿಷ್ಠ ಮೂರು ಬಾರಿ ಫ‌ಸಲು ದೊರೆಯುತ್ತದೆ.

ಲಾಭದ ಲೆಕ್ಕಾಚಾರ
ಪಾಲಿಥೀನ್‌ ಬ್ಯಾಗ್‌ ಸಿದ್ಧಪಡಿಸುವುದು, ಹುಲ್ಲು ಕತ್ತರಿಸಿ ನೆನೆಸಿಡುವುದು, ಒಣಗಿಸಿ ಬೀಜ ಬಿತ್ತುವುದು, ನೀರು ಸಿಂಪಡಣೆ ಮುಂತಾದ ಸಣ್ಣ ಸಣ್ಣ ಕೆಲಸಗಳಿಗಾಗಿ ತಿಂಗಳಿಗೆ ಸುಮಾರು 5 ರಿಂದ 6 ಸಾವಿರಗಳಷ್ಟು ಖರ್ಚು ಬರುತ್ತದೆ. ದಿನಕ್ಕೆ ನಾಲ್ಕರಿಂದ ಆರು ಕಿಲೋಗಳಷ್ಟು ಆಯಿಸ್ಟರ್‌ ಮತ್ತು ಮಿಲ್ಕಿà ಅಣಬೆಯನ್ನು ಉತ್ಪಾದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತೀ ಕಿಲೋಗೆ 300ರೂ. ದರ ಇದೆ. ಪ್ರತೀ ವಾರ ಕನಿಷ್ಠ 15,000 ರೂ.ಗಳಷ್ಟು ಆದಾಯ ದೊರೆಯುತ್ತಿದೆ. “ಇಲ್ಲೀವರೆಗೆ 1,500 ಕಿಲೋಗ್ರಾಂಗೂ ಅಧಿಕ ಆಯಿಸ್ಟರ್‌ ಅಣಬೆಯನ್ನು ಬೆಳೆದಿದ್ದೇನೆ. ಒಣಗಿದ ಅಣಬೆಗೂ ಒಳ್ಳೆಯ ಬೇಡಿಕೆಯಿದ್ದು ಪ್ರತೀ ಕಿಲೋಗೆ ಸುಮಾರು 1000 ರೂಗಳಷ್ಟು ಮಾರುಕಟ್ಟೆಯಿದೆ’ ಎನ್ನುತ್ತಾರೆ ವಾಣಿಶ್ರೀ.

ಪತಿ ಸಾಥ್‌
ವಾಣಿಶ್ರೀಯವರು ಬೆಳೆಯುತ್ತಿರುವ ಅಣಬೆ, ರಾಸಾಯನಿಕ ಮುಕ್ತವಾಗಿದೆ. ಪತಿ ವೀರೇಶ್‌ರವರು ಗಂಗಾವತಿ ಮತ್ತು ಹೊಸಪೇಟೆಯ ಹೋಟೆಲ್‌ಗ‌ಳಿಗೆ ಮತ್ತು ಅಣಬೆ ಖಾದ್ಯಪ್ರಿಯರ ಮನೆಬಾಗಿಲಿಗೆ ಅಣಬೆಯನ್ನು ತಲುಪಿಸುವ ಜವಾಬ್ದಾರಿಯನ್ನು ವಾಣಿಶ್ರೀಯವರ ಪತಿ ವೀರೇಶ್‌ ವಹಿಸಿಕೊಂಡಿದ್ದಾರೆ.

Advertisement

ಚಿತ್ರ-ಲೇಖನ: ಪ.ನಾ.ಹಳ್ಳಿ. ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next