ಶ್ರೀನಗರ : ಅಲ್ ಕಾಯಿದಾ ಉಗ್ರ ಸಂಘಟನೆಗೆ ಸಂಯೋಜಿತವಾಗಿರುವ ಸಮೂಹವೊಂದರ ತಥಾಕಥಿತ ಮುಖ್ಯಸ್ಥ ಝಕೀರ್ ಮೂಸಾ ನಿನ್ನೆ ಶುಕ್ರವಾರ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತನಾದುದನ್ನು ಅನುಸರಿಸಿ ವಿಧಿಸಲಾಗಿದ್ದ ಕರ್ಫ್ಯೂ ಇಂದು ಶನಿವಾರ ಕಾಶ್ಮೀರದ ವಿವಿಧ ಭಾಗಗಳಲ್ಲಿ ಮುಂದುವರಿದಿದೆ.
ಕರ್ಫ್ಯೂ ಮುಂದುವರಿದಿರುವ ಕಾರಣ ಶ್ರೀನಗರ, ಕುಲಗಾಂವ್ ಮತ್ತು ಪುಲ್ವಾಮಾ ಪಟ್ಟಣಗಳಲ್ಲಿ ಜನರ ಚಲನ ವಲನಗಳನ್ನು ನಿರ್ಬಂಧಿಸಲಾಗಿದೆ.
ಇಂದು ಕೂಡ ಶಾಲೆ ಕಾಲೇಜುಗಳು ಮುಚ್ಚಿವೆ. ಅಂತೆಯೇ ಕಣಿವೆ ಪ್ರದೇಶದಲ್ಲಿ ಮೊಬೈಲ್ ಇಂಟರ್‌ನೆಟ್ ಅಮಾನತಾಗಿರುವುದು ಕೂಡ ಮುಂದುವರಿದಿದೆ.
ಉದ್ರಿಕ್ತ ಪರಿಸ್ಥಿತಿಯ ಕಾರಣ ಬಾರಾಮುಲ್ಲಾ ಮತ್ತು ಬನಿಹಾಲ್ ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಿಡುವ ಸಲುವಾಗಿ ಕಾಶ್ಮೀರ ಕಣಿವೆಯಲ್ಲಿ ಇಂದು ಶನಿವಾರ ಕೂಡ ಕರ್ಫ್ಯೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೌಹಟ್ಟಾ, ರೈನಾವಾರಿ, ಖನ್ಯಾರ್, ಸಫಾಕದಾಲ್ ಮತ್ತು ಎಂ ಆರ್ ಗುಂಗ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಬಿಗಿ ನಿರ್ಬಂಧಗಳು ಮುಂದುವರಿದಿವೆಯಾದರೆ ಮೈಸುಮಾ ಮತ್ತು ಕ್ರಾಲ್‌ಖುಡ್ ಪ್ರದೇಶಗಳಲ್ಲಿ ಆಂಶಿಕ ನಿರ್ಬಂಧಗಳಿವೆ.
ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸಲು ಕಣಿವೆಯಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.