ಚಿತ್ರದುರ್ಗ: ಲಿಂಗಾಯತರಲ್ಲೂ ಶೋಷಿತರು, ಬಡವರಿದ್ದಾರೆ. ಅವರಿಗಾಗಿ ಒಬಿಸಿಗೆ ಸೇರಿಸುವ ಕೆಲಸ ಆಗಬೇಕು. ಇದಕ್ಕಾಗಿ ಯಡಿಯೂರಪ್ಪ ಅಧಿಕಾರದಲ್ಲಿ ಇರಬೇಕು. ಯಡಿಯೂರಪ್ಪ ನೀವು ಧೈರ್ಯವಾಗಿ ಮುನ್ನುಗ್ಗಿ, ನಿಮಗೆ ಏನೂ ಆಗುವುದಿಲ್ಲ ಎಂದು ಮುರುಘಾ ಮಠದ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರು ನೈತಿಕ ಸ್ಥೈರ್ಯ ತುಂಬಿದರು.
ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಮುರುಘಾ ಶ್ರೀ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಉತ್ತರ ದಿಕ್ಕಿನ ಶಿಲಾ ಮಂಟಪದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊನ್ನೆ ಲಿಂಗಾಯತ ವೀರಶೈವರಿಗೆ ಒಬಿಸಿ ಸ್ಥಾನಮಾನ ಕೊಡಬೇಕು ಎನ್ನುವ ತೀರ್ಮಾನ ಕೇಳಿ ಅತೀವ ಸಂತೋಷ ಉಂಟಾಯಿತು. ಈ ಕಾರ್ಯ ಮಾಡಲು ಯಡಿಯೂರಪ್ಪ ಇರಬೇಕು ಎಂದು ಅಭಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಂಪುಟ ವಿಸ್ತರಣೆಗಾಗಿ ಇಂದು ದೆಹಲಿಯವರ ಜತೆ ಮಾತುಕತೆ: ಸಿಎಂ ಯಡಿಯೂರಪ್ಪ
ಈ ವೇಳೆ ವೇದಿಕೆಯಲ್ಲಿದ್ದ ಮಾದಾರ ಚನ್ನಯ್ಯ ಶ್ರೀ ಹಾಗೂ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರತ್ತ ತಿರುಗಿ ಹೌದಲ್ವಾ ಸ್ವಾಮಿಗಳೇ ಎಂದಾಗ, ಉಭಯ ಶ್ರೀಗಳು ಹೌದು ಎಂಬಂತೆ ಸಂಜ್ಞೆ ಮಾಡಿದರು.
ಒಬಿಸಿ ಕೆಟಗರಿಗಾಗಿ ದೆಹಲಿಗೆ ಹೋಗಿ. ಈ ಮಾತನ್ನು ಧೈರ್ಯದಿಂದ ಹೇಳುತ್ತಿದ್ದೇನೆ. ನಿಮಗೆ ಏನೂ ಆಗುವುದಿಲ್ಲ ಎಂದು ಒತ್ತಿ ಹೇಳಿದರು.