ಕಲಬುರಗಿ: ಕೊರೊನಾ ಸೋಂಕಿನ ಕಾರಣ ಜನರು ಭಯದಿಂದ ಚಿಕಿತ್ಸೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ವೈದ್ಯ ತಂಡ ಹಳ್ಳಿಗೆ ಹೋಗಿ ತಪಾಸಣೆ ಮಾಡಿ ಜನರಿಗೆ ಚಿಕಿತ್ಸೆ ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಕರೆ ನೀಡಿದರು. ಬೆಂಗಳೂರಿನಿಂದ ಶುಕ್ರವಾರ ಝೂಮ್ ಮೀಟ್ ಮೂಲಕ ಜಿಲ್ಲೆಯ ಜನಪ್ರತಿನಿಧಿ ಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ ಕೋವಿಡ್ -19 ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಮಹಾಮಾರಿ ಸೋಂಕಿನಿಂದ ಗ್ರಾಮೀಣ ಜನರಲ್ಲಿ ಭಯ ಮನೆ ಮಾಡಿದೆ. ಇದನ್ನು ಹೋಗಲಾಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಅವಶ್ಯಕತೆ ಹೆಚ್ಚಿದೆ. ಹಾಗೆ ಸರ್ಕಾರದ ಮಾರ್ಗಸೂಚಿ ಅನ್ವಯ 18-44 ವಯಸ್ಸಿನ ಆದ್ಯತಾ ಗುಂಪೆಂದು ಪರಿಗಣಿಸಿರುವ ಎಲ್ಲರಿಗೂ ಕೋವಿಡ್ ಲಸಿಕೆ ನೀಡಬೇಕು. ಜಿಲ್ಲೆಯಲ್ಲಿ ಖನಿಜ ನಿ ಧಿಯ ಶೇ.33ರಷ್ಟು ಅನುದಾನದಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ, ಔಷಧಿ , ಕನ್ಸುಮೇಬಲ್ಸ್, ವೈದ್ಯಕೀಯ ಉಪಕರಣಗಳ ಖರೀದಿಗೆ ಮುಂದಾಗಬೇಕು ಎಂದು ಸಚಿವರು ತಿಳಿಸಿದರು.
ಲಾಕ್‌ಡೌನ್ ಕಾರಣ ಜನರು ನಗರದಿಂದ ಹಳ್ಳಿಗಳಿಗೆ ವಾಪಸ್ಸಾಗಿದ್ದು, ಮಹಾತ್ಮ ಗಾಂ ಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದು ದುಡಿಯುವ ಕೈಗಳಿಗೆ ಕೆಲಸ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ್ ಸಸಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರು ನಿರ್ದೇಶಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ಕಳೆದ ಏಳು ದಿನಗಳಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.3ಕ್ಕೆ ಇಳಿದಿದೆ. ಇಪ್ಪತ್ತು ದಿನಗಳ ಹಿಂದೆ ಪ್ರತಿದಿನ 15ರಿಂದ 20 ಜನರು ಕೋವಿಡ್‌ನಿಂದ ನಿಧನರಾಗುತ್ತಿದ್ದರು. ಇದೀಗ ಇದರ ಪ್ರಮಾಣ 2ರಿಂದ 5ಕ್ಕೆ ಇಳಿಕೆಯಾಗಿದೆ ಎಂದರು. ಕೊರೊನಾ ಮೂರನೇ ಅಲೆ ಎದುರಿಸಲು ಜಿಲ್ಲೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಜ್ಞರ ಸಭೆ ಕರೆದು ಅಗತ್ಯ ಸಲಹೆ ಪಡೆಯಲಾಗಿದೆ.
ಜಿಲ್ಲೆಯಲ್ಲಿ 0-6 ವಯಸ್ಸಿನ 3.6 ಲಕ್ಷ, 7-11 ವಯಸ್ಸಿನ 2.8 ಲಕ್ಷ ಹಾಗೂ 12-14 ವಯಸ್ಸಿನ 1.64 ಲಕ್ಷ ಮಕ್ಕಳಿದ್ದು, ಇವರ ಬಗ್ಗೆ ಹೆಚ್ಚಿನ ಗಮನಹರಿಸಬೇಕಿದೆ. ತಾಲೂಕು ಆಸ್ಪತ್ರೆಯಲ್ಲಿ ಈಗಿರುವ 50 ಆಕ್ಸಿಜನೇಟೆಡ್ ಹಾಸಿಗೆಯನ್ನು 100ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಲ್ಲಿ 30 ಮಕ್ಕಳಿಗೆ ಮೀಸಲಿಟ್ಟು, ಅದರಲ್ಲಿ ಐದು ಐಸಿಯು ಹಾಸಿಗೆಗಳನ್ನಾಗಿ ಮಾಡಲಾಗುವುದು. ಪ್ರತಿ ತಾಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು. ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಕರನ್ನು ಲಸಿಕೆ ವಿತರಣೆಗೆ ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸಿದೆ.
ಆದರೆ ಹಲವರು ಇನ್ನೂ ಲಸಿಕೆಯಿಂದ ವಂಚಿತರಾಗಿದ್ದು, ಎಲ್ಲ ಶಿಕ್ಷಕರಿಗೂ ಲಸಿಕೆ ದೊರೆಯುವಂತಾಗಬೇಕು ಎಂದರು. ಜಿಪಂ ಸಿಇಒ ಡಾ| ದಿಲೀಷ್ ಶಶಿ ನರೇಗಾ ಅನುಷ್ಠಾನ ಮತ್ತು ಪ್ರಗತಿ ಬಗ್ಗೆ ವಿವರಿಸಿದರು. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಮಾತನಾಡಿದರು. ಝೂಮ ಮೀಟ್‌ನಲ್ಲಿ ಶಾಸ ಕ ರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಖನೀಜ್ ಫಾತಿಮಾ, ನಗರ ಪೊಲೀಸ್ ಆಯುಕ್ತ ಡಾ| ವೈ.ಎಸ್.ರವಿಕುಮಾರ, ಎಸ್‌ಪಿ ಡಾ| ಸಿಮಿ ಮರಿಯಂ ಜಾರ್ಜ್, ಜೆಸ್ಕಾಂ ಎಂಡಿ ರಾಹುಲ್ ಪಾಂಡ್ವೆ, ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಡಾ| ಶರಣಬಸಪ್ಪ ಗಣಜಲಖೇಡ್, ಜಿಮ್ಸ್ ನಿರ್ದೇಶಕಿ ಡಾ| ಕವಿತಾ ಪಾಟೀಲ, ಇಎಸ್‌ಐಸಿ ಡೀನ್ ಡಾ| ಇವಾನೋ ಲೊಬೋ, ಜಿಲ್ಲಾ ಸರ್ಜನ್ ಡಾ| ಅಂಬಾರಾಯ ರುದ್ರವಾಡಿ, ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ, ರಮೇಶ ಕೋಲಾರ ಮತ್ತು ಜಿಲ್ಲಾ, ತಾಲೂಕು ಮಟ್ಟದ ಅ ಧಿಕಾರಿಗಳು ಭಾಗವಹಿಸಿದ್ದರು