Advertisement

ಬಾಗಲಕೋಟೆ: ರಾಜ್ಯದ ಪ್ರಭಾವಿ ಕ್ಷೇತ್ರಗಳಲ್ಲಿ ಜಿಲ್ಲೆಯ ಬೀಳಗಿಯೂ ಒಂದು. ಇಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹಾಲಿ ಶಾಸಕರು. ಈವರೆಗೆ 14 ವಿಧಾನಸಭೆ ಚುನಾವಣೆ ಎದುರಿಸಿರುವ ಈ ಕ್ಷೇತ್ರ, ಇದೀಗ 15ನೇ ಚುನಾವಣೆ ಅಖಾಡಕ್ಕೆ ಸಜ್ಜಾಗಿದೆ.ಬಿಜೆಪಿಯಿಂದ ಸಚಿವ ಮುರುಗೇಶ ನಿರಾಣಿ ಅವರೇ ಕಣ್ಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಪ್ರಶ್ನೆ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರಲ್ಲಿಯೇ ಇದೆ.

Advertisement

ಕ್ಷೇತ್ರದಲ್ಲಿ ಈ ಬಾರಿ ಹಾಲಿ ಮತ್ತು ಮಾಜಿ ಸಚಿವರ (ಮುರುಗೇಶ ನಿರಾಣಿ- ಎಸ್‌.ಆರ್‌. ಪಾಟೀಲ್‌) ಮಧ್ಯೆ ಪೈಪೋಟಿ ನಡೆಯುತ್ತದೆಯೋ ಅಥವಾ ಹಾಲಿ ಮತ್ತು ಮಾಜಿ ಶಾಸಕರ (ನಿರಾಣಿ- ಜೆ.ಟಿ. ಪಾಟೀಲ್‌) ಮಧ್ಯೆ ಚುನಾವಣ ಕಣ ನಿರ್ಮಾಣಗೊಳ್ಳಲಿದೆಯೋ ಎಂಬುದು ಸದ್ಯ ಕ್ಷೇತ್ರದಲ್ಲಿರುವ ಕುತೂಹಲ.

ಬಿಜೆಪಿಯ ನಿರಾಣಿ ಈ ಕ್ಷೇತ್ರದಿಂದ ನಾಲ್ಕು ಬಾರಿ ಸ್ಪರ್ಧೆ ಮಾಡಿದ್ದು, ಒಂದು ಬಾರಿ ಪರಾಭವಗೊಂಡರೆ, ಮೂರು ಬಾರಿ ಗೆಲುವು ಸಾಧಿಸಿ, ಎರಡು ಬಾರಿ ಸಚಿವರಾಗಿದ್ದಾರೆ. ಈ ಬಾರಿಯೂ ಬಿಜೆಪಿಯಿಂದ ಅವರೇ ಅಭ್ಯರ್ಥಿಯಾಗುವುದು ಬಹುತೇಕ ನಿಶ್ಚಿತ. ಆದರೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ, ಸದ್ಯ ಪಕ್ಷದ ಬೆಳಗಾವಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ ಕೂಡ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ. ಇವರಿಬ್ಬರು ಬಿಟ್ಟರೆ ಬಿಜೆಪಿಯಲ್ಲಿ ಬೇರೆ ಆಕಾಂಕ್ಷಿಗಳಿಲ್ಲ.

ಕಾಂಗ್ರೆಸ್‌ನಲ್ಲಿ ದೊಡ್ಡ ಹಿಂಡು: ಕಾಂಗ್ರೆಸ್‌ನಿಂದ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಮಾಜಿ ಸಚಿವ ಎಸ್‌.ಆರ್‌. ಪಾಟೀಲ್‌, ಮಾಜಿ ಶಾಸಕ ಜೆ.ಟಿ. ಪಾಟೀಲ್‌, ಕೆಪಿಸಿಸಿ ಹಿಂದುಳಿದ ವರ್ಗಗಳ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ, ಜಿ.ಪಂ. ಮಾಜಿ ಸದಸ್ಯ ಬಸವರಾಜ ಖೋತ, ಹಿರಿಯ ಮುಖಂಡ ಶಿವಾನಂದ ನಿಂಗನೂರ ಸಹಿತ ಹಲವು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮಾಜಿ ಶಾಸಕ ಜೆ.ಟಿ. ಪಾಟೀಲ್‌ ಅಭ್ಯರ್ಥಿಯಾದರೆ ನಾನು ಬಂಡಾಯವಾಗಿ ಸ್ಪರ್ಧೆ ಮಾಡುವೆ ಎಂದು ಹಿರಿಯ ಮುಖಂಡ ನಿಂಗನೂರ ಹೇಳಿಕೊಂಡಿದ್ದಾರೆ. ಪಕ್ಷ ಎಲ್ಲಿ ಟಿಕೆಟ್‌ ಕೊಡುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ಎಸ್‌.ಆರ್‌.ಪಾಟೀಲ್‌ ನಾನೂ ಪ್ರಬಲ ಆಕಾಂಕ್ಷಿ ಎಂಬುದು ಪರೋಕ್ಷವಾಗಿ ಸಂದೇಶ ನೀಡಿದ್ದಾರೆ. ಆದರೆ ಈ ಬಾರಿ ಬೀಳಗಿ ಕ್ಷೇತ್ರದಿಂದ ಗೆದ್ದು ಪಕ್ಷದಲ್ಲಿ ಮತ್ತೆ ಹಿಡಿತ ಸಾಧಿಸಬೇಕೆಂದು ಈಗಾಗಲೇ ಹಲವು ರೀತಿಯ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ಇನ್ನು ಜೆ.ಟಿ. ಪಾಟೀಲ್‌ ಹೊರತುಪಡಿಸಿದರೆ ಉಳಿದೆಲ್ಲ ಆಕಾಂಕ್ಷಿಗಳು ಕಾಂಗ್ರೆಸ್‌ನಿಂದ ಎಸ್‌.ಆರ್‌. ಪಾಟೀಲ್‌ ಅಭ್ಯರ್ಥಿಯಾದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಜೆ.ಟಿ. ಪಾಟೀಲ್‌ ಅಭ್ಯರ್ಥಿಯಾದರೆ ಬಂಡಾಯ ಕಹಳೆಯ ಸಂದೇಶ ಕೆಲವರು ನೀಡಿದ್ದಾರೆ. ಈ ಒಡಕಿನ ಲಾಭ ಬಿಜೆಪಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಇಲ್ಲಿ ಕಾಂಗ್ರೆಸ್‌-ಬಿಜೆಪಿ ನೇರಾನೇರ ಸೆಣಸಲಿವೆ. ಜೆಡಿಎಸ್‌ಆಟಕ್ಕಿಲ್ಲ ಲೆಕ್ಕಕ್ಕೂ ಇಲ್ಲ.

ಕೋಟ್ಯಧೀಶರ ಕಾಳಗವಾಗುತ್ತಾ?: ಈ ಬಾರಿ ಬೀಳಗಿ ಕ್ಷೇತ್ರದ ಚುನಾವಣೆ ಅತ್ಯಂತ ಪ್ರತಿಷ್ಠೆ ಕಣವಾಗಿ ನಡೆಯುವ ಮುನ್ಸೂಚನೆ ದೊರೆಯುತ್ತಿದೆ. ಕಳೆದ ಬಾರಿ ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪರಿಷತ್‌ನ ವಿಪಕ್ಷದ ನಾಯಕರಾಗಿದ್ದಾಗ್ಯೂ ಟಿಕೆಟ್‌ ವಂಚಿತರಾದ ಎಸ್‌.ಆರ್‌.ಪಾಟೀಲ್‌ ತೀವ್ರ ಅಸಮಾಧಾನಗೊಂಡಿದ್ದರು. ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಇವರು ಪಕ್ಷವನ್ನೇ ಬಿಡುತ್ತಾರೆ ಎಂಬ ವದಂತಿಯೂ ಹರಡಿತ್ತು. ಇದೀಗ ಬೀಳಗಿ ವಿಧಾನಸಭೆ ಚುನಾವಣೆಗೆ ಅವಕಾಶ ನೀಡುವ ಮೂಲಕ ಅವರನ್ನು ಸಮಾಧಾನಪಡಿಸುವ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. ನಿರಾಣಿ ಎದುರಿಸಲು ಪಾಟೀಲರೇ ಸೂಕ್ತ ಎಂಬ ಮಾತುಗಳಿವೆ.

– ಶ್ರೀಶೈಲ ಕೆ. ಬಿರಾದಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next