Advertisement

ವೈಚಾರಿಕ ದಸರಾಕ್ಕೆ ಮುರುಘಾ ಮಠ ಸಜ್ಜು

04:22 PM Oct 02, 2019 | Suhan S |

ಚಿತ್ರದುರ್ಗ: ಮಧ್ಯ ಕರ್ನಾಟಕದ “ವೈಚಾರಿಕಾ ದಸರಾ’ ಎಂದೇ ಹೆಸರಾಗಿರುವ ಶರಣ ಸಂಸ್ಕೃತಿ ಉತ್ಸವಕ್ಕೆ ಮುರುಘಾ ಮಠ ಸಜ್ಜಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

Advertisement

ಮಂಗಳವಾರ ಶ್ರೀಮಠದ ಆವರಣದಲ್ಲಿ ಉತ್ಸವದ ಪೂರ್ವಸಿದ್ಧತೆ ವೀಕ್ಷಿಸಿ ಶರಣರು ಮಾತನಾಡಿದರು. ಹಿಂದೆ ಮುರುಘಾ ಮಠದಲ್ಲಿ ವಿಜಯದಶಮಿ, ದಸರಾ ಆಚರಣೆ ನಡೆಯುತ್ತಿತ್ತು. ಆದರೆ 30 ವರ್ಷಗಳಿಂದೀಚೆಗೆ ಇದಕ್ಕೆ ಹೊಸ ಸ್ವರೂಪ ನೀಡಿ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಶರಣ ಸಂಸ್ಕೃತಿ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ಸರ್ವ ಧರ್ಮದವರನ್ನು ಒಟ್ಟುಗೂಡಿಸಿಕೊಂಡು ಈ ಉತ್ಸವವನ್ನು ಆಚರಿಸುತ್ತಿದ್ದೇವೆ ಎಂದರು.

ಅಲ್ಲಮ ಪ್ರಭುದೇವರು ಶೂನ್ಯಪೀಠದ ಪ್ರಥಮ ಅಧ್ಯಕ್ಷರಾಗಿದ್ದರು. ಮುರಿಗೆ ಶಾಂತವೀರ ಸ್ವಾಮಿಗಳು ಈ ಪ್ರಾಂತ್ಯಕ್ಕೆ ಬಂದಾಗ ಭರಮಣ್ಣ ನಾಯಕರನ್ನು ಆಶೀರ್ವದಿಸಿದ್ದರು. ಇಲ್ಲಿ ಮಠ ಸ್ಥಾಪಿಸಲು ಸಹಕರಿಸಿದ್ದರು ಎಂದು ಸ್ಮರಿಸಿದರು.

ಈ ವರ್ಷದ ಶರಣ ಸಂಸ್ಕೃತಿ ಉತ್ಸವದಲ್ಲಿ ವಿಶೇಷವಾಗಿ ಈಶಾನ್ಯ ರಾಜ್ಯಗಳ ಕಲಾ ಪ್ರದರ್ಶನ, ದಕ್ಷಿಣ ವಲಯ ತಂಜಾವೂರಿನ ಕಲಾವಿದರಿಂದ ವಿಶೇಷ ಜಾನಪದ ಕಲೆಗಳ ಪ್ರದರ್ಶನ, ಅಂತಾರಾಷ್ಟ್ರೀಯ ಮಟ್ಟದ ಅಕ್ರೋಬಾಟಿಕ್‌ ಪ್ರದರ್ಶನ, ಶಬರಿ ಗ್ಲೋ ಆರ್ಟ್‌ಎಲ್‌ಇಡಿ ಆ್ಯಕ್ಟ್, ಬ್ಯಾಲೆನ್ಸ್‌ ಆ್ಯಕ್ಟ್, ಚಂಡೆ ಪ್ರದರ್ಶನ ಹಾಗು ಬಾಹುಬಲಿ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಈ ವಿಚಾರಗೋಷ್ಠಿಗಳಲ್ಲಿ ಭಾವೈಕ್ಯ ಸಮಾವೇಶ, ಇಸ್ರೇಲ್‌ ಮಾದರಿ ಕೃಷಿ ಮತ್ತು ಸ್ಥಳೀಯ ನೀರಾವರಿ ಯೋಜನೆ ಪರಾಮರ್ಶೆ, ಮುರುಘಾ ಪರಂಪರೆ ಉಂಟು ಮಾಡಿರುವ ಸಮಾಜೋಧಾರ್ಮಿಕ ಪರಿವರ್ತನೆಗಳು, ಹೊಸ ಶಿಕ್ಷಣ ನೀತಿ, ಗಾಂ ಧಿವಾದದ ಪ್ರಸ್ತುತತೆ, ರಾಜಕೀಯ ಅಸ್ಥಿರತೆ ಮತ್ತು ಸಂವಿಧಾನಿಕ ಬದ್ಧತೆ, ಬಸವತತ್ವ ವಿಶ್ವ ತತ್ವ, ಯುವಜನರ ಮುಂದಿನ ಸವಾಲುಗಳು ಮತ್ತು ಮಾರ್ಗೋಪಾಯಗಳು, ಜಗತ್ತು ಎತ್ತ ಸಾಗುತ್ತಿದೆ, ಸಮಕಾಲೀನ ಚಿಂತನೆ ಮತ್ತಿತರೆವಿಷಯಗಳ ಕುರಿತು ವಿಷಯ ಮಂಡನೆ, ಸಂವಾದ ನಡೆಯಲಿವೆ ಎಂದರು.

Advertisement

ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ| ಹನುಮಲಿ ಷಣ್ಮುಖಪ್ಪ, ಪಟೇಲ್‌ ಶಿವಕುಮಾರ್‌, ಡಿ.ಎಸ್‌. ಮಲ್ಲಿಕಾರ್ಜುನ್‌, ಶ್ರೀನಿವಾಸ್‌, ಎಸ್‌.ಜೆ.ಎಂ ವಿದ್ಯಾಪೀಠ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಮಹಡಿ ಶಿವಮೂರ್ತಿ ಮತ್ತಿತರು ಇದ್ದರು. ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷ ಡಾ| ಹನುಮಲಿ ಷಣ್ಮುಖಪ್ಪ ಮತ್ತು ಎಲ್‌. ಪುಷ್ಪಾವತಿ ದಂಪತಿ ಶರಣ ಸಂಸ್ಕೃತಿ ಉತ್ಸವದ ಮಹಾದಾಸೋಹಕ್ಕೆ 25 ಕೆಜಿ ತೂಕದ 1150 ಪ್ಯಾಕೆಟ್‌ ಅಕ್ಕಿಯನ್ನು ಇದೇ ಸಂದರ್ಭದಲ್ಲಿ ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next