ಲಂಡನ್: ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ. ಸೋಮವಾರದಿಂದ ಲಂಡನ್‌ನಲ್ಲಿ ರ್ಯಾಕೆಟ್ ಸಮರ ಆರಂಭವಾಗಲಿದ್ದು, ಗೆಲ್ಲುವ ಕುದುರೆಗಳ ಬಗ್ಗೆ ಟೆನಿಸ್ ಪಂಡಿತರು ಈಗಾಗಲೇ ನಾನಾ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.
ಪುರುಷರ ಸಿಂಗಲ್ಸ್ ಸ್ಪರ್ಧೆಯ ಸಾಧ್ಯತೆಯ ಪ್ರಕಾರ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಸೆಮಿಫೈನಲ್‌ನಲ್ಲಿ 2 ಬಾರಿಯ ಚಾಂಪಿಯನ್ ರಫೆಲ್ ನಡಾಲ್ ಅವರನ್ನು ಎದುರಿಸಬಹುದು. ಹಾಗೆಯೇ 8ನೇ ವಿಂಬಲ್ಡನ್ ಕಿರೀಟದ ಕನಸು ಕಾಣುತ್ತಿರುವ ಹಳೆ ಹುಲಿ ರೋಜರ್ ಫೆಡರರ್, 3 ಬಾರಿಯ ವಿಜೇತ ನೊವಾಕ್ ಜೊಕೋವಿಕ್ ಅವರನ್ನು ಉಪಾಂತ್ಯದಲ್ಲಿ ಎದುರಿಸುವ ಸಂಭವ ಇದೆ.
ಅಗ್ರ ಶ್ರೇಯಾಂಕದ ಆ್ಯಂಡಿ ಮರ್ರೆ ಸೋಮವಾರದಂದೇ ಅರ್ಹತಾ ಆಟಗಾರನೊಬ್ಬನ ವಿರುದ್ಧ ಮೊದಲ ಸುತ್ತಿನ ಪಂದ್ಯವನ್ನು ಆಡಲಿದ್ದಾರೆ. 2ನೇ ಶ್ರೇಯಾಂಕದ ಜೊಕೋವಿಕ್ ಸ್ಲೊವಾಕಿಯಾದ ಮಾರ್ಟಿನ್ ಕ್ಲಿಝಾನ್ ಅವರನ್ನು ಎದುರಿಸಲಿದ್ದು, 3ನೇ ಸುತ್ತಿನಲ್ಲಿ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರೊಂದಿಗೆ ಮುಖಾಮುಖೀ ಆಗಬಹುದು.
3ನೇ ಶ್ರೇಯಾಂಕಿತ ಫೆಡರರ್ ಉಕ್ರೇನಿನ ಅಲೆಕ್ಸಾಂಡರ್ ಡೊಲ್ಗೊಪೊಲೋವ್ ಅವರನ್ನು, 4ನೇ ಶ್ರೇಯಾಂಕದ ನಡಾಲ್ ಆಸ್ಟ್ರೇಲಿಯದ ಜಾನ್ ಮಿಲ್‌ಮಾÂನ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸುವರು.
ಫೆಡರರ್ ಮತ್ತು ನಡಾಲ್ 4ನೇ ಸಲ ಫೈನಲ್‌ನಲ್ಲಿ ಎದುರಾಗಬಹುದು ಎಂಬುದು ಮತ್ತೂಂದು ಲೆಕ್ಕಾಚಾರ. ಇದಕ್ಕೂ ಮುನ್ನ ಇವರಿಬ್ಬರು 2006ರಿಂದ 2008ರ ತನಕ ಸತತ 3 ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಿದ್ದರು. 2008ರ ಕೊನೆಯ ಕಾದಾಟದಲ್ಲಿ 5 ಗಂಟೆಗಳ ಕಾಲ ಸಾಗಿದ 5 ಸೆಟ್‌ಗಳ ಮ್ಯಾರತಾನ್ ಹೋರಾಟದಲ್ಲಿ ನಡಾಲ್ ವಿಂಬಲ್ಡನ್ ಕಿರೀಟ ಏರಿಸಿಕೊಂಡಿದ್ದರು. ಇದು ಗ್ರ್ಯಾನ್‌ಸ್ಲಾಮ್ ಇತಿಹಾಸದ ಅಮೋಘ ಫೈನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಸೆರೆನಾ, ಶರಪೋವಾ ಗೈರು
ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಮತ್ತು ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಈ ಬಾರಿ ಆಡದಿರುವುದರಿಂದ ವಿಂಬಲ್ಡನ್ ವನಿತಾ ಸ್ಪರ್ಧೆಗಳ ಆಕರ್ಷಣೆ ಅಷ್ಟರ ಮಟ್ಟಿಗೆ ಕಡಿಮೆಯಾಗಿದೆ. ಆದರೆ ಪ್ರಶಸ್ತಿಯ ಹಾದಿ ಮುಕ್ತಗೊಂಡಿದೆ.
ಅಗ್ರ ಶ್ರೇಯಾಂಕಿತೆ, ಕಳೆದ ವರ್ಷದ ರನ್ನರ್ ಅಪ್ ಆ್ಯಂಜೆಲಿಕ್ ಕೆರ್ಬರ್, ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ, ಸಿಮೋನಾ ಹಾಲೆಪ್, ಗಾರ್ಬಿನ್ ಮುಗುರುಜಾ, ಎಲಿನಾ ಸ್ವಿಟೋಲಿನಾ, ವೀನಸ್ ವಿಲಿಯಮ್ಸ್, ಪೆಟ್ರಾ ಕ್ವಿಟೋವಾ, ವಿಕ್ಟೋರಿಯಾ ಅಜರೆಂಕಾ ಅವರೆಲ್ಲ ವನಿತಾ ಸಿಂಗಲ್ಸ್ ಚಾಂಪಿಯನ್‌ಶಿಪ್‌ನ ಸ್ಟಾರ್ ಆಟಗಾರ್ತಿಯರಾಗಿದ್ದಾರೆ.