Advertisement
ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ 5ನೇ ಕ್ರಾಸ್ ನಿವಾಸಿ ರತ್ನಾವತಿ ಜಿ.ಶೆಟ್ಟಿ (80) ಕೊಲೆಯಾದವರು. ಈ ದುಷ್ಕೃತ್ಯ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಮೃತದೇಹ ಕೊಳೆತಿದ್ದು, ನಾಲ್ಕು ದಿನಗಳ ಹಿಂದೆಯೇ ಘಟನೆ ನಡೆದಿರ ಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ರತ್ನಾವತಿ ಅವರು ನಿವೃತ್ತ ಶಿಕ್ಷಕ ದಿ| ಗೋಪಾಲ ಶೆಟ್ಟಿ ಅವರ ಪತ್ನಿ. ಗೋಪಾಲ ಶೆಟ್ಟಿ 2010ರಲ್ಲಿ ಮೃತಪಟ್ಟಿದ್ದರು. ಬಳಿಕ ಇವರು ಒಂಟಿಯಾಗಿದ್ದರು. ಇವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಓರ್ವ ಪುತ್ರ ಬೆಂಗಳೂರಿನಲ್ಲಿ ಹಾಗೂ ಇನ್ನೋರ್ವ ಮುಂಬಯಿಯಲ್ಲಿದ್ದಾರೆ. ಓರ್ವ ಪುತ್ರಿ ಉಡುಪಿ ಅಂಬಲಪಾಡಿಯಲ್ಲಿ ಹಾಗೂ ಇನ್ನೊಬ್ಬರು ಕೊರಂಗ್ರಪಾಡಿ ಯಲ್ಲಿದ್ದಾರೆ. ಮಕ್ಕಳ ಮನೆಗೆ ಹೋಗಲು ಇವರು ಒಪ್ಪುತ್ತಿರಲಿಲ್ಲ. ಮಕ್ಕಳು ಆಗಾಗ ಬಂದು ಹೋಗುತ್ತಿದ್ದರು. ಶುಕ್ರವಾರ ರಾತ್ರಿ ಪಕ್ಕದ ಮನೆಯವರಿಗೆ ವಿಪರೀತ ವಾಸನೆ ಬಂದ ಕಾರ ಣ ರತ್ನಾವತಿಯ ಸಂಬಂಧಿಕರಿಗೆ ತಿಳಿಸಲಾಗಿತ್ತು.
Related Articles
ಮನೆ ಹಿಂಭಾಗದಲ್ಲಿ 4 ಸಣ್ಣ ಬಾಡಿಗೆ ಕೋಣೆಗಳಿವೆ. ಇದರ ವ್ಯವಹಾರವನ್ನು ರತ್ನಾವತಿಯೇ ನೋಡಿಕೊಳ್ಳುತ್ತಿದ್ದರು.
Advertisement
ಕತ್ತಿ ಪತ್ತೆಮೃತದೇಹ ಬೆಡ್‌ರೂಮ್‌ನ ಮಂಚದ ಮೇಲಿತ್ತು. ಮನೆಯ ಟಾಯ್ಲೆಟ್‌ನಲ್ಲಿದ್ದ ನೀರು ತುಂಬಿದ ಬಕೆಟ್‌ನಲ್ಲಿ ಕತ್ತಿಯೊಂದು ಪತ್ತೆಯಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಇದನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಆದರೆ ಕೊಲೆ ಹೇಗೆ ನಡೆದಿದೆ ಎಂಬುದನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ದೇಹ ಪೂರ್ಣ ಕೊಳೆತ ಸ್ಥಿತಿಯಲ್ಲಿರುವುದರಿಂದ ಮರಣೋತ್ತರ ಪರೀಕ್ಷಾ ವರದಿ ಕೈ ಸೇರಿದ ಬಳಿಕವೇ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಪಿ ನಿಶಾ ಜೇಮ್ಸ್, ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಶುಕ್ರವಾರ ತಡರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಮೃತದೇಹವನ್ನು ಸಾಗಿಸಲು ನೆರವಾದರು. ಬಾಡಿಗೆಗೆಂದು ಬಂದ ಜೋಡಿಯ ಕೃತ್ಯ?
ಕಳೆದ ಸೋಮವಾರ(ಜು.1)ದಂದು ದಂಪತಿ ಎಂದು ಪರಿಚಯಿಸಿಕೊಂಡು ಬಂದಿದ್ದ ಯುವಜೋಡಿಯೊಂದು ಬಾಡಿಗೆ ಮನೆಯನ್ನು ಪಡೆದುಕೊಂಡಿತ್ತು. ಆ ಜೋಡಿ ಒಂದು ದಿನ ಮಾತ್ರ ಇದ್ದು ಬಳಿಕ ನಾಪತ್ತೆಯಾಗಿದ್ದರು. ಹಾಗಾಗಿ ಅವರೇ ಈ ಕೃತ್ಯ ನಡೆಸಿರಬಹುದು ಎಂಬ ಶಂಕೆ ಬಲವಾಗಿದೆ. ಆ ಜೋಡಿ ಸೋಮವಾರ ಮಧ್ಯಾಹ್ನ ವೇಳೆಗೆ ಆಟೋರಿಕ್ಷಾದಲ್ಲಿ ಬಂದು ರತ್ನಾವತಿ ಜತೆ ತುಂಬಾ ಹೊತ್ತು ಮಾತನಾಡಿ ವಾಪಸಾಗಿದ್ದರು. ಅನಂತರ ಅದೇ ರಿಕ್ಷಾದಲ್ಲಿ ಅಪರಾಹ್ನ ವಾಪಸ್ ಬಂದಿದ್ದರು. ಮಂಗಳವಾರ ಯುವಕ ಆ ಪರಿಸರದವರಲ್ಲಿ “ನಾವು ಇಲ್ಲಿ ಬಾಡಿಗೆ ಮನೆ ಪಡೆದು ಕೊಂಡಿದ್ದೇವೆ. ನನಗೆ ಕೆಲಸವಿದ್ದರೆ ತಿಳಿಸಿ’ ಎಂದಿದ್ದ. ಅನಂತರ ಪತ್ತೆಯಾಗಿಲ್ಲ. ಇನ್ನುಳಿದ ಎರಡು ಬಾಡಿಗೆ ಕೋಣೆಗಳಲ್ಲಿ ಇಬ್ಬರು ವಾಸವಾಗಿದ್ದರು. ಅವರು ಕೆಲವು ದಿನಗಳ ಹಿಂದೆ ಬಾಡಿಗೆ ಕೋಣೆ ಬಿಟ್ಟು ಹೊರ ಹೋಗಿದ್ದರು.