Advertisement

ಕುಂದಾಪುರ ಮೂಲದ ಉದ್ಯಮಿ ಬೆಂಗಳೂರಿನಲ್ಲಿ ಹತ್ಯೆ

11:11 AM Sep 23, 2018 | Team Udayavani |

ಬೆಂಗಳೂರು / ಕುಂದಾಪುರ: ಆಸ್ತಿ ಹಂಚಿಕೆ ವಿಚಾರವಾಗಿ ಕುಂದಾಪುರ ಮೂಲದ ಹೊಟೇಲ್‌ ಉದ್ಯಮಿ ಯನ್ನು ಪತ್ನಿ ಹಾಗೂ ಆಕೆಯ ಸ್ನೇಹಿತ ಸೇರಿ ಕೊಲೆಗೈದ ಘಟನೆ ಬೆಂಗಳೂರಿನ ಶೇಷಾದ್ರಿಪುರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.  ಕುಂದಾಪುರ ತಾಲೂಕಿನ ವಂಡ್ಸೆ – ನಂದ್ರೋಳ್ಳಿ ನಿವಾಸಿ, ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮಿಯಗಿದ್ದ ಸಂತೋಷ್‌ ಕುಮಾರ ಶೆಟ್ಟಿ (54) ಕೊಲೆಗೀಡಾದವರು. ಈ ಸಂಬಂಧ  ಮೃತರ ಪತ್ನಿ ಅನ್ನಪೂರ್ಣಾ (44) ಹಾಗೂ ಅವರ ಕುಟುಂಬ ಸ್ನೇಹಿತ ಪ್ರಕಾಶ್‌ (24)  ಅವರನ್ನು ಶನಿವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Advertisement

ಮೃತದೇಹವನ್ನು ಶನಿವಾರ ಸಂಜೆ ಮರಣೋತ್ತರ ಪರೀಕ್ಷೆ ಬಳಿಕ ಬೆಂಗಳೂರಿನಿಂದ ಹುಟ್ಟೂರಿಗೆ ಕಳುಹಿಸಲಾಗಿದೆ. ಸಂತೋಷ್‌ – ಅನ್ನಪೂರ್ಣಾ ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿಯಿದ್ದಾರೆ. ಸಂತೋಷ್‌ ಗಾಂಧಿ ನಗರದಲ್ಲಿ ಮಹಾಲಕ್ಷ್ಮಿ ಸೆಲ್ಫ್ ಸರ್ವಿಸ್‌  ಹೆಸರಿನ ಹೊಟೇಲ್‌ ನಡೆಸುತ್ತಿದ್ದು, ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಅನ್ನಪೂರ್ಣಾ ಅವರು  ಪ್ರಕಾಶ್‌ ಜತೆ ಆತ್ಮೀಯವಾಗಿದ್ದು, ಈ ವಿಷಯದಲ್ಲಿ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ ಮಕ್ಕಳು ಮನೆಯಲ್ಲಿಲ್ಲದ ವೇಳೆ ದಂಪತಿ ನಡುವೆ ಜಗಳ ನಡೆದಿದ್ದು, ಕೂಡಲೇ ಅನ್ನಪೂರ್ಣಾ ಅವರು  ಪ್ರಕಾಶ್‌ನನ್ನು ಕರೆಸಿಕೊಂಡಿದ್ದಳು. ಬಳಿಕ ಮನೆಯ ಒಳಗೆ ಸಂತೋಷ್‌  ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ.  ಪರಿಣಾಮ ತೀವ್ರ ಅಸ್ವಸ್ಥಗೊಂಡ ಅವರನ್ನು ಪತ್ನಿ ಹಾಗೂ ಪ್ರಕಾಶ್‌ ಸೇರಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. 

ಸಂತೋಷ್‌ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರು. ಪ್ರಕಾಶ್‌ ಎಲ್‌ಎಲ್‌ಬಿ  ಪದವೀಧರನಾಗಿದ್ದು, ಬಾರ್‌ ಕೌನ್ಸಿಲ್‌ನಲ್ಲಿ ಇತ್ತೀಚೆಗೆ ಸದಸ್ಯತ್ವ ನೋಂದಣಿ ಮಾಡಿಸಿದ್ದ.

ಕಾರಣ  ಹಲವು
ಆಸ್ತಿ ಹಂಚಿಕೆ, ಹಣದ ವಿಚಾರ ಹಾಗೂ ಪ್ರಕಾಶ್‌ ಜತೆ ಪತ್ನಿ ಹೊಂದಿದ್ದ ಆತ್ಮೀಯತೆಗೆ ಸಂತೋಷ್‌ ಅಡ್ಡಿಯಾಗಿದ್ದು, ಈ ಕಾರಣದಿಂದ ಇಬ್ಬರೂ ಪೂರ್ವ ನಿರ್ಧಾರದಂತೆ ಯೋಜನೆ ರೂಪಿಸಿ ಕೊಲೆ ಮಾಡಿರುವ ಸಾಧ್ಯತೆಯಿದೆ. ಈ ಕುರಿತು ಬೆಂಗಳೂರಿನ ಶೇಷಾದ್ರಿಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Advertisement

ಕುಂದಾಪುರದ   ಹಕ್ಲಾಡಿಯವರು
ಸಂತೋಷ್‌  ಕುಮಾರ್‌ ಅವರ ತಂದೆ ಮನೆ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮದ ಯಳೂರು- ತೋಪು ಆಗಿದ್ದು, ಆದರೆ ಈಗ ಅವರ ಸಹೋದರ ಹಾಗೂ ತಾಯಿ ಎಲ್ಲ ನೆಲೆಸಿರುವ ಮನೆ ವಂಡ್ಸೆ ನಂದೊಳ್ಳಿಯ ಕೊಳಕುಮಣ್ಣುವಿನಲ್ಲಿದೆ. ದಿ| ಮಹಾಬಲ ಶೆಟ್ಟಿ ಹಾಗೂ ಜಲಜಮ್ಮ ಶೆಡ್ತಿ ದಂಪತಿಯ ಎರಡನೇ ಪುತ್ರರಾಗಿದ್ದು, ಅಣ್ಣ ನಾರಾಯಣ ಶೆಟ್ಟಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ತಮ್ಮ ರಘುರಾಮ ಶೆಟ್ಟಿ ಊರಿನಲ್ಲಿ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಮೊದಲು ಹುಬ್ಬಳ್ಳಿಯಲ್ಲಿ ಹೊಟೇಲ್‌ ಉದ್ಯಮ, ಬಳಿಕ ಕಳೆದ 19 ವರ್ಷಗಳಿಂದ ಬೆಂಗಳೂರಿನ ಗಾಂಧಿ ನಗರದಲ್ಲಿ ಹೊಟೇಲ್‌  ನಡೆಸುತ್ತಿದ್ದಾರೆ. ಸಂತೋಷ್‌  25 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಅನ್ನಪೂರ್ಣಾ ಅವರು  ಮಾರಣಕಟ್ಟೆ ಸಮೀಪದ ಶಾರ್ಕೆಯವ ರು ಎಂದು ತಿಳಿದು ಬಂದಿದೆ. ಕಳೆದ ಫೆಬ್ರವರಿಯಲ್ಲಿ ಊರಿಗೆ ಬಂದಿದ್ದರು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next