ಧಾರವಾಡ: ಸಂಶೋಧಕ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಇಲ್ಲಿನ 3ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಎಸ್ಐಟಿ ಪೊಲೀಸರು ಗುರುವಾರ ಹಾಜರು ಪಡಿಸಿದರು.
ಧಾರವಾಡದ ಕಲ್ಯಾಣ ನಗರದ ಅವರದೇ ನಿವಾಸದಲ್ಲಿ ಎಂ.ಎಂ. ಕಲಬುರ್ಗಿ ಅವರಿಗೆ ಗುಂಡು ಹಾಕಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತನಿಖೆ ಮಾಡಿದ್ದ ಎಸ್ಐಟಿ ಪೊಲೀಸರು, 6 ಜನ ಆರೋಪಿಗಳನ್ನು 2018ರಲ್ಲಿ ಬಂಧಿಸಿದ್ದಾರೆ.
ಪ್ರಕರಣದ ಪೂರ್ಣ ತನಿಖೆ ಮಾಡಿರುವ ಪೊಲೀಸರು, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಗುರುವಾರ ಆರು ಜನ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಆದರೆ ಮೈಸೂರಿನಲ್ಲಿ ಇರುವ 1ನೇ ಆರೋಪಿ ಅಮೂಲ್ ಕಾಳೆಗೆ ಆರೋಗ್ಯ ಸರಿಯಿಲ್ಲ ಎಂದು ಹಾಜರು ಪಡಿಸಲು ಸಾಧ್ಯವಾಗಿಲ್ಲ ಎಂದು ಎಸ್ಐಟಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶೆ ಡಿ. ಮಮತಾ ಅವರು, ಪ್ರಕರಣದ ಪ್ರಮುಖ ಆರೋಪಿಯನ್ನು ಹಲವು ಬಾರಿ ವಿಚಾರಣೆಗೆ ಹಾಜರು ಪಡಿಸಿಲ್ಲ. ಕೇವಲ ನೆಪ ಹೇಳುತ್ತಾ ಗೈರು ಪಡಿಸಲಾಗುತ್ತಿದೆ. ಮುಂದಿನ ವಿಚಾರಣೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳನ್ನು ಹಾಜರು ಪಡಿಸುವಂತೆ ಸೂಚಿಸಿ ಅ. 24ಕ್ಕೆ ವಿಚಾರಣೆ ಮುಂದೂಡಿದರು.
ಹಾಜರಿದ್ದ ಆರೋಪಿಗಳು
ಗಣೇಶ ಮಿಸ್ಕಿನ್, ಪ್ರವೀಣ ಚತುರ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಶರತ್ ಬಾಹು ಸಾಹೇಬ್ ಅವರನ್ನು ಪೋಲಿಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಧಾರವಾಡದಲ್ಲಿ ಇರಲು ಅವಕಾಶ ನೀಡಿ
ಪ್ರಕರಣದ ಆರೋಪಿ ಅಮಿತ್ ಬದ್ದಿ ವಿಚಾರಣೆ ವೇಳೆ, ನಮ್ಮನ್ನು ಮಹಾರಾಷ್ಟ್ರದ ಜೈಲಿನಲ್ಲಿ ಇಡಲಾಗಿದೆ. ಇದರಿಂದ ಕುಟುಂಬದವರನ್ನು ಭೇಟಿ ಆಗಲು ತೊಂದರೆ ಆಗುತ್ತಿದೆ. ಹೀಗಾಗಿ ನನ್ನನ್ನು ಧಾರವಾಡ ಜೈಲಿನಲ್ಲಿ ಇಡಲು ಅವಕಾಶ ನೀಡುವಂತೆ ನ್ಯಾಧೀಶರಿಗೆ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನಿರಾಕರಿಸಿದರು.