Advertisement

ಕೊಲೆ ಆರೋಪಿ ಪರಾರಿ: ಮತ್ತೆ ಬಂಧನ

12:36 AM Apr 04, 2019 | Team Udayavani |

ಬೆಂಗಳೂರು: ಬ್ಯಾಂಕ್‌ ಭದ್ರತಾ ಸಿಬ್ಬಂದಿ ಕೊಲೆ ಪ್ರಕರಣದಲ್ಲಿ ಪೊಲೀಸರ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಂದ್ರ ಅಲಿಯಾಸ್‌ ಬೆಂಕಿ ರಾಜ ಅಲಿಯಾಸ್‌ ಸೈಕೋ (28) ಬುಧವಾರ ಮುಂಜಾನೆ ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಕೇವಲ ಎರಡು ಗಂಟೆಗಳಲ್ಲೇ ಆರೋಪಿಯನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.

Advertisement

ಇದೇ ವೇಳೆ ಆರೋಪಿಯ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಅಮಾನತು ಮಾಡಿ, ದಕ್ಷಿಣ ವಲಯ ಡಿಸಿಪಿ ಕೆ.ಅಣ್ಣಾಮಲೈ ಆದೇಶ ಹೊರಡಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಮಾ.30ರಂದು ಕುಮಾರಸ್ವಾಮಿ ಲೇಔಟ್‌ ಪೊಲೀಸರು ಆರೋಪಿ ಸೈಕೋ ರವಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ನಂತರ ಚಿಕಿತ್ಸೆಗಾಗಿ ಆತನ್ನನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಆರೋಪಿಯ ಭದ್ರತೆಗೆ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಈ ಮಧ್ಯೆ ಆರೋಪಿ ಬುಧವಾರ ಮುಂಜಾನೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದ. ಕೂಡಲೇ ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು, ಎರಡು ತಂಡಗಳನ್ನು ರಚಿಸಿ, ಕಾರ್ಯಾಚರಣೆ ಆರಂಭಿಸಿದ್ದರು.

ಆರೋಪಿ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ಆಟೋ ಏರಿ ನೇರವಾಗಿ ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ತನ್ನ ಮನೆಗೆ ಹೋಗುತ್ತಿದ್ದ. ಅಷ್ಟರಲ್ಲಿ ಆರೋಪಿಯ ಮನೆ ಬಳಿ ಕಾಯುತ್ತಿದ್ದ ಪೊಲೀಸರು ರಾಜೇಂದ್ರನನ್ನು ಬಂಧಿಸಿದ್ದಾರೆ.

Advertisement

ತಂದೆ, ತಾಯಿ ನೋಡಲು ಹೋಗಿದ್ದೆ: “ನನಗೆ ವೃದ್ಧ ತಂದೆ-ತಾಯಿ ಇದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ತಡರಾತ್ರಿ ಏಕಾಏಕಿ ಅವರ ನೆನಪು ಬಂತು. ಹೀಗಾಗಿ ತಪ್ಪಿಸಿಕೊಂಡು ಹೋದೆ’ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದರು.

ಆರೋಪಿ ಸೈಕೋ ರಾಜೇಂದ್ರ, ಮಾ.23ರಂದು ತಡರಾತ್ರಿ ಉತ್ತರಹಳ್ಳಿ ಮುಖ್ಯರಸ್ತೆಯ ಕದಿರೇನಹಳ್ಳಿ ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕ್‌ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಲಿಂಗಪ್ಪ (62)ಅವರ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ.

ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಕುಮಾರಸ್ವಾಮಿ ಲೇಔಟ್‌ ಪೊಲೀಸರು, ಮಾ.30ರಂದು ಮುಂಜಾನೆ 4.30ರ ಸುಮಾರಿಗೆ ಕೋಣನಕುಂಟೆ ಠಾಣೆ ವ್ಯಾಪ್ತಿಯ ನಾರಾಯಣನಗರದ ಡಬಲ್‌ ರಸ್ತೆಯಲ್ಲಿ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ಹಾರಿಸಿ ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next