Advertisement
ಅಕ್ರಮ ಸಂಬಂಧಕ್ಕಾಗಿ ಪತಿಯನ್ನು ಉಸಿರುಗಟ್ಟಿಸಿ ಕೊಲೆಗೈದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ವಿಧಿವಿಜ್ಞಾನ ಪ್ರಯೋಗಾಲಯ(ಎಫ್ಎಸ್‌ಎಲ್)ದ ವರದಿ ಆಧರಿಸಿ ಬರೋಬರಿ ಒಂದು ವರ್ಷದ ಬಳಿಕ ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೆಸರುಘಟ್ಟದ ದಾಸೇನಹಳ್ಳಿ ಗ್ರಾಮದ ಸುಖೀತಾ(30) ಹಾಗೂ ಆಕೆಯ ಪ್ರಿಯಕರ, ಅವಿವಾಹಿತ ಶ್ರೀನಿವಾಸ (31) ಬಂಧಿತರು. ಆರೋಪಿಗಳು 2018ರ ಫೆ.25ರಂದು ತಡರಾತ್ರಿ 12 ಗಂಟೆ ಸುಮಾರಿಗೆ ಗಾರೆ ಕಾರ್ಮಿಕ ಉಮಾಶಂಕರ್‌ನನ್ನು ಕೊಂದಿದ್ದರು.
Related Articles
Advertisement
ನಿತ್ಯ ಕುಡಿದು ಪತ್ನಿ, ಮಕ್ಕಳಿಗೆ ಹೊಡೆಯುತ್ತಿದ್ದ. ಈ ನಡುವೆ ಎರಡು ವರ್ಷಗಳ ಹಿಂದೆ ಸುಖೀತಾಗೆ ಮನೆ ಸಮೀಪದ ನಿವಾಸಿ, ಖಾಸಗಿ ವಾಹನ ಚಾಲಕ ಶ್ರೀನಿವಾಸ ಪರಿಚಯವಾಗಿದ್ದು, ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಅಷ್ಟೇ ಅಲ್ಲದೆ, ಪತಿ ಮದ್ಯ ಸೇವಿಸಿ ಮನೆಯಲ್ಲಿ ಮಲಗಿದ ಕೂಡಲೇ ಪ್ರಿಯಕರನಿಗೆ ಕರೆ ಮಾಡಿ ಕರೆಸಿಕೊಳ್ಳುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಉಸಿರುಗಟ್ಟಿಸಿ ಕೊಂದರು: ಫೆ.25, 2018ರಂದು ರಾತ್ರಿ 10 ಗಂಟೆ ಸುಮಾರಿಗೆ ಉಮಾಶಂಕರ್ ಮದ್ಯ ಸೇವಿಸಿ ಮನೆಗೆ ಬಂದು, ಊಟ ಮಾಡಿ ಮಲಗಿದ್ದಾನೆ. 11 ಗಂಟೆ ಸುಮಾರಿಗೆ ಪ್ರಿಯಕರ ಶ್ರೀನಿವಾಸನನ್ನು ಕರೆ ಮಾಡಿ ಕರೆಸಿಕೊಂಡ ಸುಖೀತಾ, ಆತನೊಂದಿಗೆ ಏಕಾಂತದಲ್ಲಿ ಇದ್ದಳು. ಕೆಲ ಹೊತ್ತಿನ ಬಳಿಕ ಎಚ್ಚರಗೊಂಡ ಉಮಾಶಂಕರ್ ಕೊಠಡಿಯ ಲೈಟ್ ಹಾಕಿದ. ಈ ವೇಳೆ ಪತ್ನಿ ಜತೆ ಶ್ರೀನಿವಾಸ ಮಲಗಿದ್ದ. ಇದರಿಂದ ಆಕ್ರೋಶಗೊಂಡ ಉಮಾಶಂಕರ್ ಇಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆರೋಪಿಗಳು ಮದ್ಯದ ಅಮಲಿನಲ್ಲಿದ್ದ ಉಮಾಶಂಕರನನ್ನು ಹಾಸಿಗೆ ಮೇಲೆ ಬೀಳಿಸಿ, ದಿಬ್ಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ.
ಅನುಮಾನಸ್ಪದ ಸಾವು!: ಮರು ದಿನ ಬೆಳಗ್ಗೆ ಸಂಬಂಧಿಕರು ಹಾಗೂ ನೆರೆ ಹೊರೆಯವರಿಗೆ ವಿಷಯ ತಿಳಿಸಿದ ಸುಖೀತಾ, ಪತಿ ವಿಪರೀತ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದಳು. ಸಂಬಂಧಿಕರು ಕೂಡ ನಂಬಿದ್ದರು. ಮತ್ತೂಂದೆಡೆ ಸ್ಥಳಕ್ಕೆ ಬಂದ ಪೊಲೀಸರು ಸಹ, ಮೃತ ದೇಹದ ಮೇಲೆ ಯಾವುದೇ ಗಾಯದ ಗುರುತುಗಳಾಗಲಿ, ಇತರೆ ಯಾವುದೇ ಕುರುಹುಗಳಾಗಲಿ ಸಿಗದ ಹಿನ್ನೆಲೆಯಲ್ಲಿ ಅಸ್ವಾಭಾವಿಕ ಸಾವು ಎಂದು ಭಾವಿಸಿದ್ದರು.
ಆದರೆ, ಮೃತನ ಸಂಬಂಧಿ ಘಟನೆ ಬಗ್ಗೆ ಕೊಲೆ ಶಂಕೆ ವ್ಯಕ್ತಪಡಿಸಿದ್ದರು. ಅನುಮಾನಗೊಂಡ ಪೊಲೀಸರು ಸುಖೀತಾಳ ಸಿಡಿಆರ್ ಪರಿಶೀಲಿಸಿದಾಗ ಶ್ರೀನಿವಾಸಗೆ ಕರೆ ಮಾಡಿರುವ ವಿಚಾರ ತಿಳಿದು ಬಂದಿತ್ತು. ಆದರೆ, ವಿಚಾರಣೆ ಸಂದರ್ಭದಲ್ಲಿ ಆಕೆ, ಆಗಾಗ ಶ್ರೀನಿವಾಸ ಕರೆ ಮಾಡುತ್ತಿದ್ದ. ಈ ವಿಚಾರ ತನ್ನ ಪತಿಗೂ ಗೊತ್ತಿತ್ತು. ಪತಿ ಹಲ್ಲೆ ನಡೆಸುತ್ತಿದ್ದಾಗ ಶ್ರೀನಿವಾಸ ನೆರವಿಗೆ ಬರುತ್ತಿದ್ದ.
ಘಟನೆ ದಿನ ಪತಿ ಕುಡಿದು ತನ್ನ ಮೇಲೆ ಹಲ್ಲೆ ನಡೆಸಿದರು. ಆಗ ಪ್ರತಿರೋಧ ವ್ಯಕ್ತಪಡಿಸಿ ಹಾಸಿಗೆ ಮೇಲೆ ತಳ್ಳಿದೆ. ಹೀಗಾಗಿ ಮಲಗಿರಬಹುದು ಎಂದು ಭಾವಿಸಿದೆ. ಆದರೆ, ಮರುದಿನ ಮೃತಪಟ್ಟಿರುವುದು ತಿಳಿದು ಬಂತು ಎಂದಿದ್ದಳು. ಶ್ರೀನಿವಾಸ ಕೂಡ ಆಕೆ ಜತೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದ. ಜತೆಗೆ ಸೂಕ್ತ ದಾಖಲೆಗಳು ಇಲ್ಲದರಿಂದ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಹೇಳಿದರು.
ವರ್ಷದ ಬಳಿಕ ಬಂದ ವರದಿ: ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸರು, ವೈದ್ಯರ ಸಲಹೆ ಮೇರೆಗೆ ಉಮಾಶಂಕರ್‌ನ ವಿಸೆರಾವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪರೀಕ್ಷೆ ನಡೆಸಿದ ಪ್ರಯೋಗಾಲಯದ ಸಿಬ್ಬಂದಿ ವರ್ಷದ ಬಳಿಕ ಅನುಮಾನಾಸ್ಪದ ಸಾವು ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸುಖೀತಾ ಮೇಲೆ ಕೆಲ ದಿನಗಳಿಂದ ನಿಗಾವಹಿಸಿದಾಗ, ಶ್ರೀನಿವಾಸ ಜತೆ ಅಕ್ರಮ ಸಂಬಂಧ ಇರುವುದು ದೃಢಪಟ್ಟಿತ್ತು. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.